ADVERTISEMENT

ವಿಜಯೇಂದ್ರ ತಂಡದಲ್ಲಿ ಮೈಸೂರಿನ ಮೂವರು ಆಪ್ತರು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2023, 23:30 IST
Last Updated 24 ಡಿಸೆಂಬರ್ 2023, 23:30 IST
<div class="paragraphs"><p>ಡಾ.ಅನಿಲ್ ಥಾಮಸ್,&nbsp;ರಘು ಆರ್ ಕೌಟಿಲ್ಯ,&nbsp;ಎಂ. ರಾಜೇಂದ್ರ</p></div>

ಡಾ.ಅನಿಲ್ ಥಾಮಸ್, ರಘು ಆರ್ ಕೌಟಿಲ್ಯ, ಎಂ. ರಾಜೇಂದ್ರ

   

ಮೈಸೂರು: ಬಿಜೆಪಿ ರಾಜ್ಯ ಘಟಕವನ್ನು ಪುನರ್‌ರಚಿಸಿರುವ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಮ್ಮ ತಂದೆ ಬಿ.ಎಸ್. ಯಡಿಯೂರಪ್ಪ ಮತ್ತು ತಮಗೆ ನಿಷ್ಠರಾಗಿರುವ ಬೆಂಬಲಿಗರಿಗೆ ಗಾದಿ ನೀಡಿದ್ದು, ಮೈಸೂರಿನ ಮೂವರು ಆ ಬಣದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಪಕ್ಷದ ಪ್ರಮುಖ ಮೂರು ಸ್ಥಾನಗಳು ಮೈಸೂರು ಪಾಲಾಗಿರುವುದು ವಿಶೇಷ. ರಾಜ್ಯದಾದ್ಯಂತ ಸಂಚರಿಸಿ ಪಕ್ಷ ಸಂಘಟನೆಯ ಹೊಣೆಯನ್ನು ಅವರಿಗೆ ವಹಿಸಲಾಗಿದೆ.

ADVERTISEMENT

ಇಲ್ಲಿನ ಹೋಟೆಲ್ ಉದ್ಯಮಿ, ಪಕ್ಷದ ಕಚೇರಿಗಾಗಿ ಕಟ್ಟಡವನ್ನೇ ನಿರ್ಮಿಸಿಕೊಟ್ಟಿರುವ ಎಂ. ರಾಜೇಂದ್ರ ಅವರನ್ನು ರಾಜ್ಯ ಘಟಕದ ಉಪಾಧ್ಯಕ್ಷರನ್ನಾಗಿ ಮುಂದುವರಿಸಲಾಗಿದೆ. ವಿಜಯೇಂದ್ರ ಹಾಗೂ ಯಡಿಯೂರಪ್ಪ ಮೊದಲಾದ ಮುಖಂಡರು ಮೈಸೂರು ಪ್ರವಾಸ ಕೈಗೊಂಡ ಉಳಿದುಕೊಳ್ಳುವುದು ರಾಜೇಂದ್ರ ಅವರ ಹೋಟೆಲ್‌ನಲ್ಲೇ. ಪಕ್ಷದ ಸಭೆ–ಸಮಾವೇಶಗಳು ಕೂಡ ಅವರಿಗೆ ಸೇರಿದ ರಾಜೇಂದ್ರ ಕಲಾಮಂದಿರದಲ್ಲೇ ನಡೆಯುತ್ತವೆ. ವರಿಷ್ಠರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವುದು ಅವರ ಕೈಹಿಡಿದಿದೆ.

ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷನ್ನಾಗಿ ರಘು ಆರ್. ಕೌಟಿಲ್ಯ ಹಾಗೂ ಅಲ್ಪಸಂಖ್ಯಾತರ ಮೋರ್ಚಾದ ಅಧ್ಯಕ್ಷರನ್ನಾಗಿ ಡಾ.ಅನಿಲ್ ಥಾಮಸ್ ಅವರನ್ನು ನೇಮಕ ಮಾಡಲಾಗಿದೆ. ಅವರು ಈವರೆಗೆ ಆ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರಿಗೆ ವಿಜಯೇಂದ್ರ ಮುಂಬಡ್ತಿ ನೀಡಿದ್ದಾರೆ.

ಹೋದ ಸರ್ಕಾರದಲ್ಲಿ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ(ಮೈಲ್ಯಾಕ್) ಅಧ್ಯಕ್ಷರಾಗಿದ್ದ ರಘು ಅವರಿಗೆ ರಾಜ್ಯ ಸಚಿವ ಸ್ಥಾನಮಾನವನ್ನೂ ನೀಡಲಾಗಿತ್ತು. ಅದಕ್ಕೂ ಹಿಂದೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಅಧ್ಯಕ್ಷರಾಗಿದ್ದ ರಘು ಅವರು ಮೈಸೂರು–ಚಾಮರಾಜನಗರ ಜಿಲ್ಲಾ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಅವಕಾಶ ಸಿಕ್ಕಿದ್ದರಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಚುನಾವಣೆಯಲ್ಲಿ ಸೋತಿದ್ದರು. ಆದರೆ, ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದರು. ಇದು ಅವರ ಕೈಹಿಡಿದಿತ್ತು ಹಾಗೂ ಮಹತ್ವದ ಮೈಲ್ಯಾಕ್‌ ಸಾರಥ್ಯವನ್ನು ತಂದುಕೊಟ್ಟಿತ್ತು. ಅವರು, ಶಾಲೆಯನ್ನೂ ನಡೆಸುತ್ತಿದ್ದ ಶಿಕ್ಷಣ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿದ್ದಾರೆ.

ಕ್ರೈಸ್ತ ಸಮುದಾಯದ ಮುಖಂಡರಾದ ಅನಿಲ್‌ ಥಾಮಸ್ ನರಸಿಂಹರಾಜ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ದಂತ ವೈದ್ಯರಾದ ಅವರು, ಕ್ಷೇತ್ರದಲ್ಲಿ ಕ್ಲಿನಿಕ್‌ ನಡೆಸುತ್ತಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟು ಹಾಗೂ ಯಶಸ್ಸಿಗಾಗಿ ಈ ನೇಮಕಾತಿ ಪ್ರಕ್ರಿಯೆಯನ್ನು ವಿಜಯೇಂದ್ರ ನಡೆಸಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಸಂಘಟನೆ ಬಲಪಡಿಸಲು ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.