ADVERTISEMENT

ಚಾಮುಂಡೇಶ್ವರಿ ಬೆಟ್ಟದಲ್ಲಿ ಆಷಾಢದ 3ನೇ ಶುಕ್ರವಾರದ ಸಂಭ್ರಮ

ಬೆಟ್ಟದಲ್ಲಿ ಆಷಾಢದ 3ನೇ ಶುಕ್ರವಾರದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 12:20 IST
Last Updated 15 ಜುಲೈ 2022, 12:20 IST
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಆಷಾಢದ 3ನೇ ಶುಕ್ರವಾರದ ಅಂಗವಾಗಿ ದೇವಿ ದರ್ಶನಕ್ಕಾಗಿ ಅಪಾರ ಸಂಖ್ಯೆಯ ಭಕ್ತರು ಸರದಿ ಸಾಲಿನಲ್ಲಿ ಬಂದರು / ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಆಷಾಢದ 3ನೇ ಶುಕ್ರವಾರದ ಅಂಗವಾಗಿ ದೇವಿ ದರ್ಶನಕ್ಕಾಗಿ ಅಪಾರ ಸಂಖ್ಯೆಯ ಭಕ್ತರು ಸರದಿ ಸಾಲಿನಲ್ಲಿ ಬಂದರು / ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.   

ಮೈಸೂರು: ಆಷಾಢದ 3ನೇ ಶುಕ್ರವಾರ ಅಂಗವಾಗಿ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ–ಪುನಸ್ಕಾರಗಳು ನೆರವೇರಿದವು. ದೇವಿಗೆ ನಮಿಸಲು ನಸುಕಿನಿಂದ ರಾತ್ರಿವರೆಗೂ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡಿದ್ದರು.

ವಿಶೇಷ ಅಲಂಕಾರದಿಂದ ಕಂಗೊಳ್ಳಿಸುತ್ತಿದ್ದ ದೇವಿಯ ಮೂರ್ತಿಗೆ ಭಕ್ತರು ಪೂಜೆ ಸಲ್ಲಿಸಿ ಪುನೀತ ಭಾವ ತಳೆದರು. ಆಷಾಢ ಶುಕ್ರವಾರದ ಅಂಗವಾಗಿ ಪ್ರಾಗಣವನ್ನೂ ವಿವಿಧ ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಭಕ್ತಗಣದಿಂದ ನಾಡದೇವತೆಗೆ ಜೈಕಾರ ಮೊಳಗಿತು. ಮಂಜಿನ ವಾತಾವರಣ ಹಾಗೂ ತುಂತುರು ಮಳೆಯ ನಡುವೆಯೂ ನಸುಕಿನಿಂದಲೇ ಜನರು ಬೆಟ್ಟಕ್ಕೆ ಬಂದಿದ್ದರು. ಸರದಿ ಸಾಲಿನಲ್ಲಿ ಬಂದು ನಮಿಸಿದರು.

ಬೆಟ್ಟಕ್ಕೆ ಖಾಸಗಿ ವಾಹನಗಳನ್ನು ನಿಷೇಧಿಸಲಾಗಿತ್ತು. ಲಲಿತಮಹಲ್‌ ಬಳಿಯಿಂದ ಸಾರಿಗೆ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಅವುಗಳಲ್ಲಿ ಜನರು ತೆರಳಿದರು. ಕೆಲವರು, ಮೆಟ್ಟಿಲುಗಳ ಮೂಲಕವೂ ಬೆಟ್ಟ ಹತ್ತಿದರು. ಮಹಿಳೆಯರು, ಯುವತಿಯರು ಮೆಟ್ಟಿಲುಗಳ ಮೂಲಕ ಬೆಟ್ಟ ಹತ್ತಿ ಹರಕೆ ತೀರಿಸಿದರು ಅಥವಾ ಹರಕೆ ಹೊತ್ತರು. ನಗರದೊಂದಿಗೆ ಜಿಲ್ಲೆ, ರಾಜ್ಯ, ಹೊರ ರಾಜ್ಯದ ಭಕ್ತರೂ ಬಂದಿದ್ದರು. ಮೆಟ್ಟಿಲು ಮಾರ್ಗದಲ್ಲೂ ಜಯಘೋಷಗಳು ಮೊಳಗಿದವು.

ADVERTISEMENT

ಮುಂಜಾನೆಯಿಂದಲೇ:

ಮುಂಜಾನೆ 3ರಿಂದಲೇ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾದವು. ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಏಕದಶ ಪುಷ್ಪಾರ್ಚನೆ, ಸಹಸ್ರನಾಮಾರ್ಚನೆ, ಮಹಾಮಂಗಳಾರತಿ ನೆರವೇರಿಸಲಾಯಿತು. ಸಂಜೆಯೂ ಅಭಿಷೇಕ ನೆರವೇರಿತು. ದೇವಿ ಮೂರ್ತಿಗೆ ಮಹಾಲಕ್ಷ್ಮಿ ಅಲಂಕಾರ ಮಾಡಲಾಗಿತ್ತು. ಹಲವರು ಕುಟುಂಬ ಸಮೇತ ಬಂದು ಶಕ್ತಿದೇವತೆಯನ್ನು ಕಣ್ತುಂಬಿಕೊಂಡರು.

ಜೆಡಿಎಸ್ ಶಾಸಕ ಎಚ್‌.ಡಿ. ರೇವಣ್ಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಮುಖಂಡರಾದ ಎಂ.ಕೆ.ಸೋಮಶೇಖರ್, ವಾಸು, ಕಳಲೆ ಕೇಶವಮೂರ್ತಿ, ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬೆಟ್ಟದ ವಾಹನ ನಿಲುಗಡೆ ಸ್ಥಳದಲ್ಲಿ ಭಕ್ತರಿಗೆ ಪಂಡಿತ್ ಪಿ.ಎಚ್.ಚಂದ್ರಬಾನ್ ಸಿಂಗ್ ಸ್ಮಾರಕ ಹರ್ಬಲ್ ಗಾರ್ಡನ್ ಮತ್ತು ಹೋಲಿಸ್ಟಿಕ್ ಹಾಸ್ಪಿಟಲ್ ಕಾಂಪ್ಲೆಕ್ಸ್ ಟ್ರಸ್ಟ್ ವತಿಯಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಈ ಬಾರಿ ಖಾಸಗಿ ವಾಹನಗಳಿಗೆ ಪಾಸ್ ವ್ಯವಸ್ಥೆ ರದ್ದುಗೊಳಿಸಲಾಗಿತ್ತು. ಹೀಗಾಗಿ, ಬೆಟ್ಟದಲ್ಲಿ ವಾಹನಗಳ ಸಂಖ್ಯೆ ಹೆಚ್ಚಿರಲಿಲ್ಲ. ಶಿಷ್ಟಾಚಾರದ ಅನ್ವಯ ಅವಕಾಶವಿರುವ ವಾಹನಗಳಿಗೆ ಮಾತ್ರ ಪ್ರವೇಶವಿತ್ತು. ಭಕ್ತರು ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಿದ್ದ ಸಾರಿಗೆ ಬಸ್‌ಗಳ ಮೂಲಕವೇ ಸಂಚರಿಸಿದರು. ಡಿ.ಕೆ.ಶಿವಕುಮಾರ್, ಆರ್.ಧ್ರುವನಾರಾಯಣ ಲಲಿತಮಹಲ್ ಹೋಟೆಲ್ ಮೈದಾನದಲ್ಲಿ ತಮ್ಮ ಕಾರ್‌ಗಳನ್ನು ನಿಲ್ಲಿಸಿ ಐರಾವತ ಬಸ್‌ನಲ್ಲಿ ಚಾಮುಂಡಿಬೆಟ್ಟಕ್ಕೆ ಪ್ರಯಾಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.