ADVERTISEMENT

ಹುಣಸೂರು | ಪಶು ಆಹಾರ ಸೇವಿಸಿ 4 ಹಸು ಸಾವು

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2023, 13:32 IST
Last Updated 31 ಅಕ್ಟೋಬರ್ 2023, 13:32 IST
ಹುಣಸೂರು ತಾಲ್ಲೂಕಿನ ಕೃಷ್ಣಾಪುರದಲ್ಲಿ ಜಯಕೃಷ್ಣೇಗೌಡ ಅವರ ಹಸು ಮೃತಪಟ್ಟಿತ್ತು
ಹುಣಸೂರು ತಾಲ್ಲೂಕಿನ ಕೃಷ್ಣಾಪುರದಲ್ಲಿ ಜಯಕೃಷ್ಣೇಗೌಡ ಅವರ ಹಸು ಮೃತಪಟ್ಟಿತ್ತು   

ಹುಣಸೂರು: ತಾಲ್ಲೂಕಿನ ಗಾವಡಗೆರೆ ಹೋಬಳಿಯ ಕೃಷ್ಣಾಪುರದಲ್ಲಿ ಸೋಮವಾರ ಪಶು ಆಹಾರ ಸೇವಿಸಿ ನಾಲ್ಕು ಹಸುಗಳು ಮೃತಪಟ್ಟಿದ್ದು, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಬಸ‍ಪ್ಪ ನೇತೃತ್ವದ ತಂಡ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿತು.

ಜಯಕೃಷ್ಣೇಗೌಡ ಅವರು ಶನಿವಾರ ಸಂಜೆ ಸ್ಥಳೀಯ ಅಂಗಡಿಯಿಂದ ಫೀಡ್ಸ್ ಖರೀದಿಸಿದ್ದು, ಸೋಮವಾರ ಹಸುಗಳಿಗೆ ನೀಡಿದ್ದಾರೆ. ಆರಂಭದಲ್ಲಿ ಒಂದು ಹಸು ಅಸ್ವಸ್ಥಗೊಂಡು ನೆಲಕ್ಕೆ ಬಿದ್ದಿದೆ. ಬಳಿಕ, ಒಂದರ ಹಿಂದೆ ಒಂದರಂತೆ ಎಲ್ಲ ಹಸುಗಳು ಮೃತಪಟ್ಟಿವೆ.

‘ಗ್ರಾಮದ ಪಶು ಆಹಾರ ಮಾರಾಟಗಾರ ರಮೇಶ್ ಅವರಿಂದ 50 ಕೆ.ಜಿ. ಫೀಡ್ಸ್ ಖರೀದಿಸಿದ್ದೆ. ಸೋಮವಾರ ಹಸುಗಳಿಗೆ ಫೀಡ್ಸ್‌ ನೀಡುತ್ತಿದ್ದಂತೆ ಎಲ್ಲವೂ ನೆಲಕ್ಕೆ ಉರುಳಿದವು. ಈ ಪೈಕಿ ಒಂದು ಹಸು ಗರ್ಭ ಧರಿಸಿದ್ದು, ಕೆಲವೇ ದಿನಗಳಲ್ಲಿ ಕರು ಹಾಕುವ ನಿರೀಕ್ಷೆಯಲ್ಲಿದ್ದೆ. ಮತ್ತೊಂದು ಹಸು 6 ಲೀ. ಹಾಲು ನೀಡುತ್ತಿತ್ತು. ಈ ಘಟನೆಯಿಂದ ಕನಿಷ್ಠ ₹3 ಲಕ್ಷ ನಷ್ಟವಾಗಿದೆ’ ಎಂದು ಜಯಕೃಷ್ಣೇಗೌಡ ಅಳಲು ತೋಡಿಕೊಂಡರು.

ADVERTISEMENT

‘ಫೀಡ್ಸ್ ಮಾರಾಟ ಅಂಗಡಿಯ ಮಾಲೀಕ ರಮೇಶ್ ಅವರ ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿದೆ. ಅಂಗಡಿಯಿಂದ ಫೀಡ್ಸ್ ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಚೆನ್ನಬಸ‍ಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಫೀಡ್ಸ್ ಉತ್ಪಾದನಾ ಕಂಪನಿಗಳ ಆಹಾರ ಗುಣಮಟ್ಟವನ್ನು ಪಶುಸಂಗೋಪನ ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು. ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಬೇಕು.
ಅಣ್ಣೆನಾಯಕ ಕೃಷ್ಣಾಪುರ
ಹುಣಸೂರು ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಚೆನ್ನಬಸಪ್ಪ ಅವರು ಗ್ರಾಮದ ಫೀಡ್ಸ್ ಅಂಗಡಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.