ಮೈಸೂರು: ಹಿನಕಲ್ ರಿಂಗ್ ರಸ್ತೆ ಬಳಿ ಜೋಪಡಿಯಲ್ಲಿ ತಾಯಿಯೊಂದಿಗೆ ಮಲಗಿದ್ದ ನಲವತ್ತು ದಿನದ ಗಂಡು ಮಗುವನ್ನು ಅಪಹರಿಸಿದ ಆರೋಪದಲ್ಲಿ ಐವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪತ್ರಕರ್ತ ಎನ್ನಲಾದ ಹೂಟಗಳ್ಳಿ ನಿವಾಸಿ ಮಂಜುನಾಥ್, ನಾಗವಾಲ ಗ್ರಾಮದ ಇಂದ್ರಕುಮಾರ್, ಸುಪ್ರಿಯಾ, ವಿಜಯಲಕ್ಷ್ಮಿ, ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಡಾಬರಹಳ್ಳಿಯ ಕುಮಾರ್ ಬಂಧಿತ ಆರೋಪಿಗಳು.
ಘಟನೆಯ ಹಿನ್ನೆಲೆ: ಬಿಹಾರದ ಅಲೆಮಾರಿ ಕುಟುಂಬವೊಂದು ಹಿನಕಲ್ ರಿಂಗ್ ರಸ್ತೆ ಬಳಿ ಜೋಪಡಿಯಲ್ಲಿ ವಾಸ್ತವ್ಯವಿದೆ. ತಾಯಿ ರಾಮಡಲ್ಲಿ ದೇವಿಯು ತನ್ನ ಮಗನೊಂದಿಗೆ ಅದರಲ್ಲಿ ಮಲಗಿದ್ದು, ಬುಧವಾರ ಮುಂಜಾನೆ 3ರ ಸುಮಾರಿಗೆ ಅಪರಿಚಿತರು ಮಗುವನ್ನು ಅಪಹರಿಸಿದ್ದರು. ಈ ಬಗ್ಗೆ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬೆನ್ನುಹತ್ತಿದ ಪೊಲೀಸರು ನಗರದ ಹೊರವಲಯದಲ್ಲಿ ಮಂಜುನಾಥ್‌ನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದರು. ‘ವಿಚಾರಣೆಯಿಂದ ಆರೋಪಿಗಳು ಮಗುವನ್ನು ನಾಗವಾಲದಲ್ಲಿರುವ ಇಂದ್ರಕುಮಾರ್ ಮನೆಯಲ್ಲಿ ಇರಿಸಿರುವುದು ತಿಳಿಯಿತು. ಅಲ್ಲಿ ಆತನ ಪತ್ನಿ ಹಾಗೂ ತಂಗಿ ಮಗುವನ್ನು ನೋಡಿಕೊಳ್ಳುತ್ತಿದ್ದರು. ಮಗುವಿಗೆ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳಿಗೆ ಬೆಂಗಳೂರು ಮೂಲದಿಂದ ಅಪಹರಣಕ್ಕೆ ಹಣ ಸಂದಾಯವಾಗಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದ್ದು, ಜಾಲವನ್ನು ಪತ್ತೆಹಚ್ಚಲು ತನಿಖೆ ಮುಂದುವರೆಸಿದ್ದೇವೆ’ ಎಂದು ಪೊಲೀಸರು ತಿಳಿಸಿದರು.
ಡಿಸಿಪಿ ಎಂ.ಮುತ್ತುರಾಜ್ ಹಾಗೂ ಎಸಿಪಿ ಗಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ವಿಜಯನಗರ ಠಾಣಾ ಇನ್‌ಸ್ಪೆಕ್ಟರ್ ಪ್ರದೀಪ್.ಬಿ.ಆರ್, ಸಬ್‌ಇನ್‌ಸ್ಪೆಕ್ಟರ್‌ಗಳಾದ ವಿಶ್ವನಾಥ.ಕೆ, ನಾರಾಯಣ.ಕೆ, ವನಜಾಕ್ಷಿ ಹಾಗೂ ಸಿಬ್ಬಂದಿ ಪತ್ತೆಕಾರ್ಯ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.