ADVERTISEMENT

ಪಶುಪಾಲನಾ ಇಲಾಖೆಗೆ 700 'ಡಿ' ಗ್ರೂಪ್‌ ನೌಕರರ ನೇಮಕ: ವೆಂಕಟೇಶ್

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 9:14 IST
Last Updated 19 ಅಕ್ಟೋಬರ್ 2024, 9:14 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಪ್ರಜಾವಾಣಿ

ಮೈಸೂರು: ‘ಪಶುಪಾಲನಾ ಇಲಾಖೆಗೆ 700 ಮಂದಿ 'ಡಿ' ಗ್ರೂಪ್ ನೌಕರರ ನೇಮಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವು ದಿನಗಳ ಹಿಂದೆಯಷ್ಟೆ ಅನುಮತಿ ನೀಡಿದ್ದು, ಶೀಘ್ರದಲ್ಲೇ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌ ತಿಳಿಸಿದರು.

ADVERTISEMENT

ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಹಾಗೂ ಕರ್ನಾಟಕ ಪಶು ವೈದ್ಯಕೀಯ ಸಂಘದ ಸಹಯೋಗದಲ್ಲಿ ಇಲ್ಲಿನ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪಶುವೈದ್ಯರ ರಾಜ್ಯಮಟ್ಟದ ತಾಂತ್ರಿಕ ವಿಚಾರಸಂಕಿರಣ ಮತ್ತು ಕಾಲುಬಾಯಿ‌ ಜ್ವರದ ವಿರುದ್ಧ 6ನೇ ಸುತ್ತಿನ ಲಸಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಸರ್ಕಾರ ಬಂದ ಮೇಲೆ 400 ಪಶುವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿದ್ದೇವೆ. 400 ಕಾಯಂ ವೈದ್ಯರ ನೇಮಕಾತಿಗೆ ಕೆಪಿಎಸ್‌ಸಿ (ಕರ್ನಾಟಕ ಲೋಕಸೇವಾ ಆಯೋಗ) ಮಟ್ಟದಲ್ಲಿ ಪ್ರಕ್ರಿಯೆ ನಡೆದಿದೆ. ಇಲಾಖೆಯಲ್ಲಿರುವ ಕೊರತೆಗಳ ಬಗ್ಗೆ ಅರಿವಿದ್ದು, ಅವುಗಳನ್ನು ನೀಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದರು.

‘ರಾಜ್ಯದಲ್ಲಿ ಪ್ರತಿ ವರ್ಷ 400 ಮಂದಿ ಪಶು ವೈದ್ಯ ಪದವಿ ಪಡೆದು ಹೊರಬರುತ್ತಿದ್ದಾರೆ. ಖಾಸಗಿ ಪಶುವೈದ್ಯ ಕಾಲೇಜು ಆರಂಭಿಸಲು ಕೆಲವರು ಇಲಾಖೆಯನ್ನು ಸಂಪರ್ಕಿಸಿದ್ದರು. ಆ ಕಡತ ನನ್ನ ಬಳಿಗೆ ಬಂದಿತ್ತು. ಈ ಬಗ್ಗೆ ನಾನು ಮುಖ್ಯಮಂತ್ರಿ ಜೊತೆ ಚರ್ಚಿಸಿದಾಗ, ಖಾಸಗಿ ಕಾಲೇಜಿಗೆ ಯಾವುದೇ ಕಾರಣಕ್ಕೂ ಅನುಮತಿ ಕೊಡಬೇಡಿ; ಅಗತ್ಯವಿದ್ದರೆ ಸರ್ಕಾರಿ ಪಶುವೈದ್ಯಕೀಯ ಕಾಲೇಜು ಆರಂಭಿಸಿ ಎಂದು ಸೂಚಿಸಿದರು. ಹೀಗಾಗಿ, ಈಗ ರಾಜ್ಯದಲ್ಲಿ ಖಾಸಗಿ ಪಶುವೈದ್ಯ ಕಾಲೇಜು ಆರಂಭಿಸಲು ನಿರ್ಬಂಧ ವಿಧಿಸಲಾಗಿದೆ. ಹೊಸದಾಗಿ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಕೊಕಟನೂರ ಹಾಗೂ ಪುತ್ತೂರಲ್ಲಿ ಸರ್ಕಾರಿ ಕಾಲೇಜುಗಳನ್ನು ಈ ವರ್ಷವೇ ಪ್ರಾರಂಭಿಸಲಾಗುವುದು’ ಎಂದು ತಿಳಿಸಿದರು.

ಇಲಾಖೆಯ ನಿರ್ದೇಶಕ ಡಾ.ಮಂಜುನಾಥ್ ಎಸ್.ಪಾಳೇಗಾರ ಮಾತನಾಡಿ, ‘ರಾಜ್ಯದಲ್ಲಿ 4,564 ಪಶುವೈದ್ಯಕೀಯ ಸಂಸ್ಥೆಗಳಿವೆ. 5 ಕೋಟಿ ಕೋಳಿ ಹಾಗೂ 3 ಕೋಟಿ ಜಾನುವಾರು ಇವೆ. ಹಾಲು ಉತ್ಪಾದನೆಯಲ್ಲಿ ರಾಜ್ಯ 5ನೇ ಸ್ಥಾನದಲ್ಲಿದೆ. ಕಾಲುಬಾಯಿ‌ ಜ್ವರದ ವಿರುದ್ಧ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ನಮ್ಮ ರಾಜ್ಯ ಇತರ ರಾಜ್ಯಗಳಿಗಿಂತ ಮುಂದಿದೆ’ ಎಂದು ಹೇಳಿದರು.

‘ಇದೇ 21ರಿಂದ 98 ಲಕ್ಷ ರಾಸುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ನೀಡಲಾಗುವುದು. ರಾಜ್ಯದಲ್ಲಿ ಎಲ್ಲಿಯೂ ರೋಗ ಕಂಡುಬಂದಿಲ್ಲ. ಕರುಗಳಿಗೂ ಲಸಿಕೆಯನ್ನು ಉಚಿತವಾಗಿ ಹಾಕಲಾಗುವುದು. ಶೇ 100ರಷ್ಟು ಗುರಿ ತಲುಪಲು ಕ್ರಮ ವಹಿಸಲಾಗಿದೆ. ತುರ್ತು ಚಿಕಿತ್ಸೆಗೆಂದು ಪಶುಸಂಜೀವಿನಿ ಯೋಜನೆ ಜಾರಿಗೊಳಿಸಿದ್ದು, ಇದರಲ್ಲಿ 275 ವೈದ್ಯರು ಪ್ರತಿ ದಿನ ಚಿಕಿತ್ಸೆ ಒದಗಿಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಶಾಸಕ ಕೆ.ಹರೀಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವ‍ಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.