ADVERTISEMENT

ಮೈಸೂರಿನಲ್ಲಿ ಮಳೆ: ಸೆಸ್ಕ್‌ಗೆ ₹72 ಲಕ್ಷ ಹಾನಿ, ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ

ಒಂದೇ ದಿನ ಧರೆಗೆ ಉರುಳಿದ್ದು 409 ಕಂಬ;

ಆರ್.ಜಿತೇಂದ್ರ
Published 5 ಮೇ 2024, 7:02 IST
Last Updated 5 ಮೇ 2024, 7:02 IST
ನಗರದ ಮಾನಂದವಾಡಿ ರಸ್ತೆಯ ಸಿಲ್ಕ್‌ ಫ್ಯಾಕ್ಟರಿ ಮುಂಭಾಗ ಮುರಿದು ಬಿದ್ದ ವಿದ್ಯುತ್ ಕಂಬ ಮತ್ತು ತಂತಿಗಳನ್ನು ಬದಲಿಸುವಲ್ಲಿ ನಿರತರಾದ ಸಿಬ್ಬಂದಿ
ನಗರದ ಮಾನಂದವಾಡಿ ರಸ್ತೆಯ ಸಿಲ್ಕ್‌ ಫ್ಯಾಕ್ಟರಿ ಮುಂಭಾಗ ಮುರಿದು ಬಿದ್ದ ವಿದ್ಯುತ್ ಕಂಬ ಮತ್ತು ತಂತಿಗಳನ್ನು ಬದಲಿಸುವಲ್ಲಿ ನಿರತರಾದ ಸಿಬ್ಬಂದಿ   

ಮೈಸೂರು: ಜಿಲ್ಲೆಯಾದ್ಯಂತ ಶುಕ್ರವಾರ ಸಂಜೆ ಬಿರುಗಾಳಿ ಸಹಿತ ಅಬ್ಬರಿಸಿದ ಮಳೆಗೆ ಬರೋಬ್ಬರಿ 409 ಕಂಬಗಳು ಧರೆಗೆ ಉರುಳಿದ್ದು, ಸೆಸ್ಕ್‌ ಸಿಬ್ಬಂದಿ ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.

ಶುಕ್ರವಾರ ರಾತ್ರಿ ಮೈಸೂರು ನಗರ ಸೇರಿದಂತೆ ಬಹುತೇಕ ಕಡೆಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಜನ ಕತ್ತಲೆಯಲ್ಲಿ ಕಾಲ ಕಳೆಯುವಂತೆ ಆಗಿತ್ತು. ಕೆಲವೆಡೆ ಅಂತೂ ಶನಿವಾರ ಮಧ್ಯಾಹ್ನದವರೆಗೂ ವಿದ್ಯುತ್‌ ಸಂಪರ್ಕ ಸಾಧ್ಯವಾಗಿರಲಿಲ್ಲ.

ಮೈಸೂರು ನಗರದ ರೇಷ್ಮೆ ಕಾರ್ಖಾನೆ ಮುಂಭಾಗ ಮುಖ್ಯರಸ್ತೆಯಲ್ಲೇ ಹತ್ತಕ್ಕೂ ಹೆಚ್ಚು ಕಂಬಗಳು ತಂತಿ ಸಮೇತ ನೆಲಕ್ಕೆ ಬಿದ್ದಿದ್ದು, ಬಸ್‌ ಸೇರಿದಂತೆ ಹಲವು ವಾಹನಗಳು ಜಖಂಗೊಂಡಿದ್ದವು. ಶುಕ್ರವಾರ ರಾತ್ರಿಯಿಂದಲೇ ಸೆಸ್ಕ್‌ ಸಿಬ್ಬಂದಿ ಇತರೆ ಇಲಾಖೆಗಳ ಜೊತೆಗೂಡಿ ದುರಸ್ತಿ ಕಾರ್ಯ ಆರಂಭಿಸಿದ್ದರು. ಶನಿವಾರ ಮುಂಜಾನೆ ಅಲ್ಲಿ ಹೊಸ ಕಂಬಗಳನ್ನು ನೆಟ್ಟು, ತಂತಿಗಳನ್ನು ಎಳೆಯುವ ಕಾರ್ಯ ಭರದಿಂದ ಸಾಗಿತ್ತು. ಮೈಸೂರು ನಗರವೂ ಸೇರಿದಂತೆ ಇತರೆಡೆಗಳಲ್ಲಿಯೂ ವಿದ್ಯುತ್‌ ತಂತಿ ಮಾರ್ಗ ಹಾಗೂ ಹಾನಿಗೊಳಗಾದ ಕಂಬಗಳ ದುರಸ್ತಿ ಕಾರ್ಯವು ನಡೆದಿತ್ತು.

ADVERTISEMENT

ಮೈಸೂರಿನಲ್ಲೇ ಹೆಚ್ಚು ಹಾನಿ: ಇತರೆ ತಾಲ್ಲೂಕುಗಳಿಗೆ ಹೋಲಿಸಿದರೆ ಮೈಸೂರು ಹಾಗೂ ತಿ.ನರಸೀಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ. ಮೈಸೂರಿನಲ್ಲಿ ಒಂದೇ ದಿನ ಬರೋಬ್ಬರಿ 177 ವಿದ್ಯುತ್ ಕಂಬಗಳು ನೆಲ ಕಚ್ಚಿದ್ದು, ನೂರಾರು ಮರಗಳು ಧರೆಗೆ ಉರುಳಿವೆ. ಅಂತೆಯೇ 9 ವಿದ್ಯುತ್‌ ಪರಿವರ್ತಕಗಳಿಗೂ ಹಾನಿಯಾಗಿದ್ದು, ಈ ಎಲ್ಲವನ್ನೂ ಬದಲಿಸುವ ಕಾರ್ಯ ನಡೆದಿದೆ. ತಿ.ನರಸೀಪುರದಲ್ಲಿ 81 ವಿದ್ಯುತ್‌ ಕಂಬ ಹಾಗೂ 3 ವಿದ್ಯುತ್‌ ಪರಿವರ್ತಕಗಳು ಹಾನಿಗೀಡಾಗಿವೆ.

ಮೈಸೂರು ನಗರದಲ್ಲಿ ಸುಮಾರು 13.8 ಕಿ.ಮೀ. ಉದ್ದದ ವಿದ್ಯುತ್ ತಂತಿಗಳು ತುಂಡಾಗಿವೆ. ಇದರಿಂದಾಗಿಯೂ ಸೆಸ್ಕ್‌ಗೆ ₹5.19 ಲಕ್ಷ ನಷ್ಟವಾಗಿದೆ.

‘ಶುಕ್ರವಾರ ಬಿರುಗಾಳಿ ಆರಂಭವಾಗುತ್ತಲೇ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗಿತ್ತು. ತಂತಿಗಳು ತುಂಡರಿಸಿದ್ದರಿಂದ ರಾತ್ರಿಯಿಡೀ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಯಿತು. ರಾತ್ರಿಯೇ ದುರಸ್ತಿ ಕಾರ್ಯ ಆರಂಭಿಸಿದ್ದು, ವಿದ್ಯುತ್‌ ಪೂರೈಕೆ ಮರುಸ್ಥಾಪನೆಗೊಂಡಿತು. ಸಮಸ್ಯೆ ಇದ್ದ ಕಡೆಗಳಲ್ಲಿ ಮಾತ್ರ ಸರಬರಾಜು ಸ್ಥಗಿತಗೊಂಡಿತ್ತು. ಶನಿವಾರ ಮಧ್ಯಾಹ್ನದ ವೇಳೆಗೆ ಬಹುತೇಕ ಕಡೆಗಳಲ್ಲಿ ಎಂದಿನಂತೆ ವಿದ್ಯುತ್ ಪೂರೈಕೆ ಸಾಧ್ಯವಾಗಿದೆ’ ಎಂದು ಸೆಸ್ಕ್‌ ಅಧಿಕಾರಿಗಳು ಮಾಹಿತಿ ನೀಡಿದರು.

ಧನ್ವಂತರಿ ರಸ್ತೆಯಲ್ಲಿ ಧರೆಗೆ ಉರುಳಿದ ಮರ ಹಾಗೂ ಮುರಿದ ವಿದ್ಯುತ್‌ ಕಂಬವನ್ನು ತೆರವುಗೊಳಿಸುವಲ್ಲಿ ನಿರತರಾದ ಸೆಸ್ಕ್‌ ಸಿಬ್ಬಂದಿ –ಪ್ರಜಾವಾಣಿ ಚಿತ್ರ/ ಹಂಪಾ ನಾಗರಾಜ್‌
ಜಿಲ್ಲೆಯಲ್ಲಿ ಒಟ್ಟು 409 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು ಬಹುತೇಕ ಕಡೆ ಬದಲಿಸಲಾಗಿದೆ. ಶರವೇಗದಲ್ಲಿ ದುರಸ್ತಿ ಕಾರ್ಯ ನಡೆದಿದ್ದು ವಿದ್ಯುತ್‌ ಪೂರೈಕೆ ಎಂದಿನಂತೆ ಇದೆ
-ಜಿ.ಶೀಲಾ ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.