ಮೈಸೂರು: ‘ಜಿಲ್ಲೆಯಲ್ಲಿ 6,91,370 ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಕಾರ್ಡ್‌ಗಳಿದ್ದವು, ಅವುಗಳಲ್ಲಿ 4,221 ಕಾರ್ಡ್‌ಗಳನ್ನು ಕೇಂದ್ರದ ಮಾನದಂಡ ಆಧರಿಸಿ ಎಪಿಎಲ್ ಕಾರ್ಡ್‌ಗೆ ವರ್ಗಾಯಿಸಲಾಗಿದೆ. ಬದಲಾದ ಕಾರ್ಡ್‌ಗಳಲ್ಲಿ ಬಿಪಿಎಲ್‌ಗೆ ಅರ್ಹರಿದ್ದವರಿಗೆ ಕಾರ್ಡ್ ಕೊಡಿಸುವ ಕೆಲಸ ಮಾಡಲಿದ್ದೇವೆ’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ತಿಳಿಸಿದರು.
ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಮೂಲಕ ಮುಂದಿನ ದಿನಗಳಲ್ಲಿ ‘ಗ್ಯಾರಂಟಿ ಅದಾಲತ್’ ಹಾಗೂ ‘ನಮ್ಮ ನಡಿಗೆ ಗ್ಯಾರಂಟಿ ಅನುಷ್ಠಾನದ ಕಡೆಗೆ’ ಕಾರ್ಯಕ್ರಮ ಹಮ್ಮಿಕೊಂಡು ಜನರ ಕುಂದುಕೊರತೆ ಆಲಿಸಲಿದ್ದೇವೆ’ ಎಂದರು.
‘ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಜನರ ಬಳಿಗೆ ತೆರಳಿ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸುತ್ತೇವೆ. ಈ ಕಾರ್ಯಕ್ರಮದಲ್ಲಿ ಪಡಿತರ ಚೀಟಿ ವಿಚಾರವಾಗಿ ಗಮನ ನೀಡುತ್ತೇವೆ. ಎಪಿಎಲ್ ಕಾರ್ಡ್‌ಗೆ ಬದಲಾವಣೆಯಾದ ಕಾರ್ಡ್‌ದಾರರನ್ನು ಭೇಟಿಯಾಗಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಅವರ ಬಗ್ಗೆ ಪರಿಶೀಲಿಸಿ, ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಿದ್ದರೆ ಕೊಡಿಸಲು ಕ್ರಮ ವಹಿಸುತ್ತೇವೆ’ ಎಂದು ಮಾಹಿತಿ ನೀಡಿದರು.
‘ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಎಲ್ಲರಿಗೂ ಗ್ಯಾರಂಟಿ ಯೋಜನೆ ತಲುಪಿಸುವ ಕೆಲಸ ಮಾಡಲಿದ್ದೇವೆ. ಯೋಜನೆಗಳಿಗೆ ₹52 ಸಾವಿರ ಕೋಟಿ ಖರ್ಚು ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಬಡವರ ಹೊಟ್ಟೆ ತುಂಬಿಸುವ ಅನ್ನಭಾಗ್ಯ ಯೋಜನೆಗೆ ಕತ್ತರಿ ಹಾಕುವ ಕೆಟ್ಟ ಆಲೋಚನೆ ಮಾಡುವುದಿಲ್ಲ. ರಾಜಕೀಯ ಲಾಭಕ್ಕಾಗಿ ವಿರೋಧ ಪಕ್ಷ ಜನರ ದಿಕ್ಕು ತಪ್ಪಿಸುತ್ತಿದೆ’ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಸದಸ್ಯೆ ಲತಾ ಇದ್ದರು.
ಎಪಿಎಲ್ ಕಾರ್ಡ್‌ಗೆ ವರ್ಗಾವಣೆಗೊಂಡವರ ಮಾಹಿತಿ (ತಾಲ್ಲೂಕು;ವರ್ಗಾವಣೆಯಾದ ಕಾರ್ಡ್‌ಗಳು)
ಎಚ್.ಡಿ.ಕೋಟೆ;145
ಹುಣಸೂರು;260
ಕೆ.ಆರ್.ನಗರ;145
ಮೈಸೂರು;2526
ನಂಜನಗೂಡು;317
ಪಿರಿಯಾಪಟ್ಟಣ;261
ಸಾಲಿಗ್ರಾಮ;131
ಸರಗೂರು;40
ತಿ. ನರಸೀಪುರ;396
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.