ADVERTISEMENT

ರೈತರಿಗೆ ₹45.53 ಕೋಟಿ ಸಾಲ ವಿತರಣೆ: ಜಿ.ಡಿ.ಹರೀಶ್ ಗೌಡ ಹೇಳಿಕೆ

ಎರಡೂವರೆ ವರ್ಷದಲ್ಲಿ ₹17.12 ಕೋಟಿ ಠೇವಣಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 5:23 IST
Last Updated 17 ಜುಲೈ 2021, 5:23 IST
ಸುದ್ದಿಗೋಷ್ಠಿಯಲ್ಲಿ ಜಿ.ಡಿ.ಹರೀಶ್ ಗೌಡ ಮಾತನಾಡಿದರು. ಅಮಿತ್ ವಿ.ದೇವರಹಟ್ಟಿ, ಸುಬ್ಬಯ್ಯ, ಜಗದೀಶ್ ಇದ್ದಾರೆ
ಸುದ್ದಿಗೋಷ್ಠಿಯಲ್ಲಿ ಜಿ.ಡಿ.ಹರೀಶ್ ಗೌಡ ಮಾತನಾಡಿದರು. ಅಮಿತ್ ವಿ.ದೇವರಹಟ್ಟಿ, ಸುಬ್ಬಯ್ಯ, ಜಗದೀಶ್ ಇದ್ದಾರೆ   

ಕೆ.ಆರ್.ನಗರ: ‘ತಾಲ್ಲೂಕಿನ 25 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಟ್ಟು 2,640 ಹೊಸ ರೈತರಿಗೆ ಒಟ್ಟು ₹19 ಕೋಟಿ ಸಾಲ ವಿತರಣೆ ಮಾಡಲಾಗಿದೆ’ ಎಂದು ಮೈಸೂರು– ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಎಂಸಿಡಿಸಿಸಿ ಬ್ಯಾಂಕ್) ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಹೇಳಿದರು.

ಕೆ.ಆರ್.ನಗರ ಎಂಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.

‘ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಮೈಸೂರು– ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಾಕಷ್ಟು ಪ್ರಗತಿ ಸಾಧಿಸಿದೆ. ಕೋವಿಡ್ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ಸಹಾಯವಾಗಲೆಂದು ಸಾಲ ವಿತರಿಸಲಾಗಿದೆ’ ಎಂದರು.

ADVERTISEMENT

‘ತಾಲ್ಲೂಕಿನಲ್ಲಿ ಈವರೆಗೆ ₹38.20 ಕೋಟಿ ಠೇವಣಿ ಸಂಗ್ರಹಿಸಲಾಗಿದೆ. ₹116.68 ಕೋಟಿ ಬೆಳೆ ಸಾಲ, ₹10.70 ಕೋಟಿ ಮಧ್ಯಮಾವಧಿ ಸಾಲ, ಹೈನುಗಾರಿಕೆ ದುಡಿಯುವ ಬಂಡವಾಳ ಬಡ್ಡಿರಹಿತ ಸಾಲ ₹71.45 ಲಕ್ಷ, ಕೃಷಿಯೇತರ ಸಾಲ ₹16.89 ಕೋಟಿ, ಸ್ವ-ಸಹಾಯ ಸಂಘಗಳ ಸಾಲ ₹1.97 ಕೋಟಿ ಸೇರಿ ಒಟ್ಟು ₹146.97 ಕೋಟಿ ಸಾಲ ವಿತರಣೆ ಮಾಡಲಾಗಿದೆ. ಎರಡೂವರೆ ವರ್ಷಗಳ ನಮ್ಮ ಅವಧಿಯಲ್ಲಿ ಒಟ್ಟು ₹17.12 ಕೋಟಿ ಠೇವಣಿ ಸಂಗ್ರಹಿಸಲಾಗಿದೆ. ಒಟ್ಟು ₹45.53 ಕೋಟಿ ಸಾಲ ವಿತರಣೆ ಮಾಡಿದಂತಾಗಿದೆ’ ಎಂದು ತಿಳಿಸಿದರು.

‘ನಮ್ಮ ಬ್ಯಾಂಕ್ 2018ರಲ್ಲಿ ₹27 ಲಕ್ಷ ಲಾಭಾಂಶ ಹೊಂದಿತ್ತು. ಪ್ರಸ್ತುತ ₹4.4 ಕೋಟಿ ಲಾಭದಲ್ಲಿದೆ. ಮೈಸೂರು- ಚಾಮರಾಜನಗರ ಎರಡೂ ಜಿಲ್ಲೆಗಳಿಂದ ಕಳೆದ ಎರಡೂವರೆ ವರ್ಷಗಳ ಹಿಂದೆ ಕೇವಲ 45 ಸಾವಿರ ರೈತರು ಸಾಲ ಪಡೆದಿದ್ದರು. ಪ್ರಸ್ತುತ 81 ಸಾವಿರ ರೈತ ಕುಟುಂಬಗಳಿಗೆ ₹1,055 ಕೋಟಿವರೆಗೆ ಸಾಲ ವಿತರಣೆ ಮಾಡಲಾಗಿದೆ’ ಎಂದು ಹೇಳಿದರು.

‘ನಾನು ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿದ್ದ ಸಂದರ್ಭದಲ್ಲಿ ರಾಮಪ್ಪ ಪೂಜಾರಿ ಸೇರಿದಂತೆ ನಾಲ್ವರಿಂದ ₹27 ಕೋಟಿ ಅವ್ಯವಹಾರ ನಡೆದಿತ್ತು. ಅವ್ಯವಹಾರದ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಾನೇ ಪ್ರಶ್ನಿಸಿದ್ದೆ. ದೊಡ್ಡ ಗಲಾಟೆಯೂ ನಡೆದಿತ್ತು. ಅವ್ಯವಹಾರದ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ. ತನಿಖೆ ಕೊನೆಯ ಹಂತದಲ್ಲಿದೆ. ಈಗಾಗಲೇ 6–7 ಜನರು ಅಮಾನತುಗೊಂಡಿದ್ದಾರೆ. ಮುಂದೆ ಕೆಲಸದಿಂದ ವಜಾ ಕೂಡ ಆಗಬಹುದಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕಾಗಿದೆ’ ಎಂದರು.

ನಿರ್ದೇಶಕರಾದ ಅಮಿತ್ ವಿ.ದೇವರಹಟ್ಟಿ, ಸುಬ್ಬಯ್ಯ, ಹೆಬ್ಬಾಳು ವಿಎಸ್ಎಸ್ಎನ್ ಬ್ಯಾಂಕ್ ಅಧ್ಯಕ್ಷ ಬಾಲು, ಮೈಮುಲ್ ನಿರ್ದೇಶಕ ಪೆಟ್ರೋಲ್ ಬಂಕ್ ಜಗದೀಶ್ ಇದ್ದರು.

‘ಮೃತ ರೈತರ ಸಾಲ ಮನ್ನಾಗೆ ಪ್ರಯತ್ನ’

ಕೆ.ಆರ್.ನಗರ ತಾಲ್ಲೂಕು ಕೃಷಿ ಪತ್ತಿನ ಸಹಕಾರ ಸಂಘದಿಂದ ಸಾಲ ಪಡೆದವರಲ್ಲಿ 27 ರೈತ ಸದಸ್ಯರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಅಪೆಕ್ಸ್ ಮತ್ತು ಎಂಸಿಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ಈ ರೈತರ ₹1 ಲಕ್ಷವರೆಗಿನ ಸಾಲವನ್ನು ಮನ್ನಾ ಮಾಡಲು ಶ್ರಮಿಸುತ್ತಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾರ್ಗದರ್ಶನದಲ್ಲಿ ಅಪೆಕ್ಸ್ ಬ್ಯಾಂಕ್ ಆಡಳಿತ ಮಂಡಳಿಯ 21 ನಿರ್ದೇಶಕರು ಒಮ್ಮತವಾಗಿ ಈ ಬಗ್ಗೆ ಚರ್ಚಿಸಿದ್ದೇವೆ. ಇದಕ್ಕಾಗಿಯೇ ಶನಿವಾರ ಅಪೆಕ್ಸ್ ಬ್ಯಾಂಕ್‌ನಲ್ಲಿ ವಿಶೇಷ ಸಭೆ ಕರೆಯಲಾಗಿದೆ. ಸಾಲ ಮನ್ನಾ ಮಾಡುವ ಬಗ್ಗೆ ರಾಜ್ಯ ಮಟ್ಟದಲ್ಲಿ ತೀರ್ಮಾನ ಆಗಬೇಕಾಗಿದೆ’ ಎಂದು ಹರೀಶ್ ಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.