ADVERTISEMENT

3 ವರ್ಷದಲ್ಲಿ 5,880 ಮಕ್ಕಳ ಅಸಹಜ ಸಾವು

ಬೆಂಗಳೂರಿನಲ್ಲಿ ಅತ್ಯಧಿಕ, ನಂತರದ ಸ್ಥಾನದಲ್ಲಿ ಬೆಳಗಾವಿ, ಬೆಂಗಳೂರು ಗ್ರಾಮಾಂತರ

ಕೆ.ನರಸಿಂಹ ಮೂರ್ತಿ
Published 29 ಅಕ್ಟೋಬರ್ 2024, 19:44 IST
Last Updated 29 ಅಕ್ಟೋಬರ್ 2024, 19:44 IST
   

ಮೈಸೂರು: ರಾಜ್ಯದಲ್ಲಿ 2021ರಿಂದ 23ರವರೆಗೆ 5,880 ಮಕ್ಕಳು ಅಸಹಜವಾಗಿ ಮೃತಪಟ್ಟಿದ್ದಾರೆ. ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಅತ್ಯಧಿಕ ಪ್ರಕರಣಗಳು ದಾಖಲಾಗಿವೆ.

ಬೆಳಗಾವಿ ಜಿಲ್ಲೆ 2ನೇ ಸ್ಥಾನದಲ್ಲಿದ್ದು, ಬೆಂಗಳೂರು ಗ್ರಾಮಾಂತರ 3ನೇ ಸ್ಥಾನದಲ್ಲಿದೆ. ವಿಜಯಪುರ ಮತ್ತು ತುಮಕೂರಿನಲ್ಲಿ 200ಕ್ಕೂ ಹೆಚ್ಚು ಮಕ್ಕಳು ಸಾವಿಗೀಡಾಗಿದ್ದಾರೆ. ಮೈಸೂರು ನಗರ, ಚಾಮರಾಜನಗರ ಮತ್ತು ಕೆಜಿಎಫ್‌ನಲ್ಲಿ ಅತಿ ಕಡಿಮೆ
‍ಪ್ರಕರಣಗಳಿವೆ.

18 ವರ್ಷದೊಳಗಿನವರ ಅಸಹಜ ಸಾವುಗಳ ಮಾಹಿತಿ ಕೋರಿ ಇಲ್ಲಿನ ‘ಒಡನಾಡಿ ಸೇವಾ ಸಂಸ್ಥೆ’ಯು ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ್ದ ಅರ್ಜಿಗೆ ರಾಜ್ಯ ಅಪರಾಧ ದಾಖಲಾತಿ ವಿಭಾಗವು ಈ ಮಾಹಿತಿಯನ್ನು ನೀಡಿದೆ.

ADVERTISEMENT

ರಾಜ್ಯದ ಎಲ್ಲ ಜಿಲ್ಲೆಗಳು, ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ–ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು ನಗರ, ಕೋಲಾರದಲ್ಲಿರುವ ಕೆಜಿಎಫ್‌ ಪೊಲೀಸ್‌ ಜಿಲ್ಲೆ ಹಾಗೂ ರಾಜ್ಯ ರೈಲ್ವೆ ಇಲಾಖೆಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಪ್ರತ್ಯೇಕವಾಗಿ ನೀಡಲಾಗಿದೆ.

ಬೆಂಗಳೂರು ನಗರದಲ್ಲಿ 2021ರಲ್ಲಿ 284 ಪ್ರಕರಣಗಳು, ನಂತರದ ಎರಡು ವರ್ಷಗಳಲ್ಲಿ ಕ್ರಮವಾಗಿ 331 ಹಾಗೂ 338 ಪ್ರಕರಣಗಳು ದಾಖಲಾಗಿವೆ. ಬೆಳಗಾವಿ ನಗರದಲ್ಲಿ ಮೊದಲ ಎರಡು ವರ್ಷ ನೂರಕ್ಕೂ ಹೆಚ್ಚು ಪ್ರಕರಣಗಳಿವೆ. ಹಾಸನ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಕಲಬುರ್ಗಿಯಲ್ಲಿ 150ರಿಂದ 200ರವರೆಗೆ ಪ್ರಕರಣಗಳು ದಾಖಲಾಗಿವೆ.

ಕಾರಣಗಳೇನು?: ‘ರಾಜ್ಯದಲ್ಲಿ ಮಕ್ಕಳ ಅಸಹಜ ಸಾವಿಗೆ ಬಹಳಷ್ಟು ಕಾರಣಗಳಿವೆ. ಇದು ದೊಡ್ಡ ದುರಂತದ ಮುನ್ಸೂಚನೆ’ ಎನ್ನುತ್ತಾರೆ ಒಡನಾಡಿ ಸಂಸ್ಥೆಯ ನಿರ್ದೇಶಕರಾದ ಎಂ.ಎಲ್‌.ಪರಶುರಾಮ್‌.

‘ಪ್ರೇಮ ವೈಫಲ್ಯ, ಬಾಲ್ಯ ವಿವಾಹ, ಆನ್‌ಲೈನ್‌ ಜೂಜು, ಪೋಷಕರ ಬಡತನ, ಮದ್ಯವ್ಯಸನ, ಅನೈತಿಕ ಸಂಬಂಧದಂಥ ಅಭ್ಯಾಸಗಳು, ಪೋಷ ಕರ ಅಕಾಲಿಕ ಸಾವಿನಿಂದ ಎದುರಾಗುವ ಅತಂತ್ರ ಪರಿಸ್ಥಿತಿ, ಅಸಹಾಯಕತೆ, ಸಾಲಗಾರರ ಕಾಟದಿಂದ ನಲುಗಿದ ಕುಟುಂಬಗಳು, ಜಾಹೀರಾತುಗಳ ಆಕರ್ಷಣೆ, ಹೆಚ್ಚುತ್ತಿರುವ ಪೋಕ್ಸೊ ಪ್ರಕರಣಗಳು, ಕಾಡುವ ಪರೀಕ್ಷಾ ನಿಯಮಗಳು, ಸೂಕ್ತ ಮಾರ್ಗದರ್ಶನದ ಕೊರತೆ ಸೇರಿ ಹಲವು ಕಾರಣಗಳು ಮಕ್ಕಳ ಅಸಹಜ ಸಾವಿಗೆ ಕಾರಣವಾಗುತ್ತಿವೆ. ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಮಕ್ಕಳನ್ನು ರಕ್ಷಿಸಬೇಕಾದ ತುರ್ತಿದೆ’ ಎಂದು ಅವರು ಪ್ರತಿಪಾದಿಸುತ್ತಾರೆ.

ಅಸಹಜ ಸಾವೆಂದರೆ...

ರಾಜ್ಯ ಪೊಲೀಸರ ಪ್ರಕಾರ, ಅಪಘಾತದಿಂದ, ಹಾವು ಕಚ್ಚಿ, ವಿದ್ಯುತ್‌ ಆಘಾತ, ಪ್ರಕೃತಿ ವಿಕೋಪಗಳಿಂದ ಆಗುವ ಸಾವು, ನೇಣು ಹಾಕಿಕೊಂಡು, ನದಿಗೆ ಹಾರಿ, ಬಾವಿಗೆ ಹಾರಿ ಆತ್ಮಹತ್ಯೆ, ಪ್ರಾಣಿಗಳಿಂದ ಹತ್ಯೆ ಸೇರಿ ಅನುಮಾನಕ್ಕೆ ಆಸ್ಪದ ನೀಡುವ ಅಂಶಗಳಿರುವ ಸಾವುಗಳೆಲ್ಲವೂ ಅಸಹಜ ಸಾವುಗಳು. ಅಂಥ ಸಾವುಗಳ ಬಗ್ಗೆ ಸಿಆರ್‌ಪಿಸಿ ಸೆಕ್ಷನ್‌ 174ರ ಅಡಿ ಪೊಲೀಸರು ತನಿಖೆ ನಡೆಸಿ ತಹಶೀಲ್ದಾರರಿಗೆ ವರದಿ ಸಲ್ಲಿಸುತ್ತಾರೆ. ಅದನ್ನು ಅಸಹಜ ಸಾವಿನ ವರದಿ (ಯುಡಿಆರ್‌) ಎನ್ನಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.