ನಂಜನಗೂಡು: ಶುಕ್ರವಾರ ರಾತ್ರಿ ಬೀಸಿದ ಬಿರುಗಾಳಿ – ಮಳೆಗೆ ತಾಲ್ಲೂಕಿನ ಸುತ್ತೂರು ಸಮೀಪದ ತುಮ್ಮನೇರಳೆ ಗ್ರಾಮದ ನಾಗರಾಜು ಅವರು 8 ಎಕರೆ ಬಾಳೆ ತೋಟದಲ್ಲಿ ಬೆಳೆದಿದ್ದ ಬಾಳೆ ಬೆಳೆ ಸಂಪೂರ್ಣ ನಾಶವಾಗಿದೆ.
ರೈತರಾದ ನಾಗರಾಜು ಹಾಗೂ ನಂದೀಶ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಾಲ ಮಾಡಿ ಪ್ರತಿ ಎಕರೆಗೆ ₹ 4 ಲಕ್ಷ ಖರ್ಚು ಮಾಡಿ ಬೆಳೆದಿದ್ದ ಬಾಳೆ ಕಟಾವಿಗೆ ಬಂದಿತ್ತು. ಸುಮಾರು ₹ 8 ಲಕ್ಷದಷ್ಟು ಆದಾಯ ಬರಬಹುದೆಂದು ನಿರೀಕ್ಷೆ ಮಾಡಿದ್ದೆ, ನಮಗೆ ಬಹಳ ನಷ್ಟವಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಿಸಿ, ಸರ್ಕಾರದಿಂದ ಬೆಳೆ ಪರಿಹಾರ ಕೊಡಿಸಬೇಕು’ ಎಂದು ಮನವಿ ಮಾಡಿದ್ದಾರೆ.
ತಲಕಾಡು: ಹೋಬಳಿಯ ಸುತ್ತಮುತ್ತ ಗ್ರಾಮಗಳಲ್ಲಿ ಶುಕ್ರವಾರ ಬೀಸಿದ ವಿಪರೀತ ಗಾಳಿಯ ರಭಸಕ್ಕೆಹಲವೆಡೆ ಹಾನಿಯಾಗಿದ್ದು, ಮೇದಿನಿ ಗ್ರಾಮದಲ್ಲಿ 30ಕ್ಕೂ ಹೆಚ್ಚು ಮನೆಗಳಿಗೆ ಹನಿಯಗಿದ್ದು, ಕೆಲ ಮನೆಗಳ ಚಾವಣಿ ಹಾರಿ ಹೋಗಿವೆ.
ಹೋಬಳಿಯ ಕಾವೇರಿಪುರ, ಪರಿಣಾಮಿಪುರ, ವಿಜಾಪುರ, ಮೇದನಿ ಹಾಗೂ ತಲಕಾಡಿನ ಪೊಲೀಸ್ ಠಾಣೆ, ಹೈಸ್ಕೂಲ್, ಹಳೆ ಬೀದಿ ರಸ್ತೆ, ಒಂದನೇ ಬ್ಲಾಕಿನಲ್ಲಿ ವಿದ್ಯುತ್ ಕಂಬಗಳ ಮೇಲೆ ಮರಗಲು ಬಿದ್ದಿದ್ದು, ಕೆಲ ಗ್ರಾಮಗಳಲ್ಲಿ ಇಡೀ ರಾತ್ರಿ ಜನರು ಕತ್ತಲೆಯಲ್ಲಿ ದಿನ ಕಳೆಯುವಂತಾಯಿತು.
ಶನಿವಾರ ವಿದ್ಯುತ್ ಕಂಬಗಳ ಲೈನ್ ದುರಸ್ತಿ ಮತ್ತು ರಸ್ತೆಯಲ್ಲಿ ಬಿದ್ದಿದ್ದ ಮರಗಳು ತೆರವು ಕಾರ್ಯಾಚರಣೆಯು ಭರದಿಂದ ಸಾಗಿತು.
‘ಮೇದಿನಿ ಗ್ರಾಮದ ಜಮೀನುಗಳಲ್ಲಿ ಬೆಳೆದಿದ್ದ ಅಡಿಕೆ, ಮುಸುಕಿನ ಜೋಳ, ತೆಂಗು, ಬಾಳೆ ಇನ್ನಿತರ ಬೆಳೆ ನೆಲಕಚ್ಚಿದ್ದು ಅಪಾರ ನಷ್ಟವಾಗಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳ ಮಹಜರು ನಡೆಸಿ ಹಾನಿಗೊಳಗಾದವರಿಗೆ ಪರಿಹಾರ ನೀಡಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಂ.ಎನ್.ಕುಮಾರ್ ಹಾಗೂ ಗ್ರಾಮಸ್ಥರು ಆಗ್ರಹಿಸಿದರು.
ಬನ್ನೂರು: ಬನ್ನೂರು ನಗರ ವ್ಯಾಪ್ತಿಗೆ ಬರುವ ಜಮೀನಿನಲ್ಲಿನ ಕಬ್ಬು, ಬಾಳೆ, ಹಾಗೂ ಹಲವು ಬೆಳೆಗಳು ಗಾಳಿ ಸಹಿತ ಮಳೆಗೆ ನೆಲಕಚ್ಚಿವೆ.
ಹಲವು ಹಳ್ಳಿಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕೆ ಉಳಿದಿದ್ದು, ಹಾಗೂ ರಸ್ತೆ ಬದಿಯಲ್ಲಿ ಮರಗಳು ಉರುಳಿರುವುದು ಕಂಡುಬಂದಿದೆ ಮಳೆಯಿಂದ ಆದ ಈ ಅವ್ಯವಸ್ಥೆಗೆ, ಈ ಭಾಗದ ರೈತರು ಪರಿಹಾರ ನೀಡಬೇಕೆಂದು ಕೃಷಿ ಇಲಾಖೆಗೆ ಮಾಡಿ ಮನವಿ ಮಾಡಿಕೊಂಡಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.