ಹುಣಸೂರು: 1974ರಲ್ಲಿ ದೇವರಾಜ ಅರಸು ಅವರು ಜಾರಿಗೊಳಿಸಿದ ‘ಉಳುವವನೇ ಭೂ ಒಡೆಯ’ ಕಾಯ್ದೆಯಡಿ ಜಮೀನು ಪಡೆದಿದ್ದ ಗ್ರಾಮದ ಮೊದಲ ಫಲಾನುಭವಿ ಚೆಲುವಯ್ಯ ಅವರ ಕುಟುಂಬಕ್ಕೆ, ಐವತ್ತು ವರ್ಷಗಳ ತರುವಾಯ ಶುಕ್ರವಾರ ಕೊಳವೆ ಬಾವಿ ಸೌಲಭ್ಯ ಒದಗಿಬಂದಿದೆ.
ಅರಸು ಅವರ ಸ್ವಗ್ರಾಮವಾದ ಕಲ್ಲಹಳ್ಳಿಯಲ್ಲಿ ಶಾಸಕ ಜಿ.ಡಿ.ಹರೀಶ್ ಗೌಡ ಕೊಳವೆಬಾವಿಗೆ ಚಾಲನೆ ನೀಡಿದರು.
‘ಪರಿಶಿಷ್ಟ ಸಮುದಾಯದ ಚೆಲುವಯ್ಯ ಕುಟುಂಬಕ್ಕೆ ಸ್ವಂತ ಭೂಮಿ ಸಿಕ್ಕರೂ ನೀರಾವರಿ ವ್ಯವಸ್ಥೆ ಇಲ್ಲದೆ ಬೇಸಾಯ ಕಷ್ಟವಾಗಿತ್ತು. ಇಂದು ಆ ಸಮಸ್ಯೆ ಪರಿಹಾರವಾಗಿದೆ’ ಎಂದು ಹೇಳಿದರು.
‘ಮೈಸೂರಿಗೆ ಕರ್ನಾಟಕ ಎಂಬ ಹೆಸರು ನಾಮಕರಣ ಮಾಡಿದ ಕೀರ್ತಿ ಅರಸು ಅವರದ್ದು. ದಲಿತ ಕುಟುಂಬಕ್ಕೆ ಭೂಮಿ ನೀಡಿ ದಶಕಗಳಾದರೂ ಈ ರೈತನಿಗೆ ನೀರಾವರಿ ವ್ಯವಸ್ಥೆ ದೊರಕದಿದ್ದುದು ವಿಪರ್ಯಾಸ’ ಎಂದರು.
‘ಕಳೆದ ವರ್ಷ ಗ್ರಾಮದಲ್ಲಿ ದೇವರಾಜ ಅರಸು ಜಯಂತಿ ಪ್ರಯುಕ್ತ ನಡೆದಿದ್ದ ಸಂವಾದದಲ್ಲಿ, ಮುಂದಿನ ಜಯಂತಿ ಒಳಗೆ ನೀರು ಒದಗಿಸುವ ಭರವಸೆ ನೀಡಿದ್ದೆ. ಅದರಂತೆ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಮಂಡಳಿ ವತಿಯಿಂದ ಗಂಗಾಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ಕೊರೆಸಲಾಗಿದೆ’ ಎಂದರು.
ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ, ಟಿಎಪಿಸಿಎಂಎಸ್ ಅಧ್ಯಕ್ಷ ಬಸವಲಿಂಗಯ್ಯ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್, ಕಲ್ಲಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಜಶೇಖರ್ ಹಾಗೂ ಚೆಲುವಯ್ಯ ಕುಟುಂಬದವರು ಈ ಸಂದರ್ಭಕ್ಕೆ ಸಾಕ್ಷಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.