ಮೈಸೂರು: ಎಮ್ಮೆಯು ಕರು ಹಾಕಿದಾಗ ಗರ್ಭಕೋಶವೂ ಹೊರಗೆ ಬಂದಿದ್ದು, ಅದನ್ನು ಮತ್ತೆ ಯಥಾಸ್ಥಿತಿಯಲ್ಲಿ ಇರಿಸಿ, ಚಿಕಿತ್ಸೆ ನೀಡಿರುವ ಹಿನಕಲ್ ಪಶುವೈದ್ಯಾಧಿಕಾರಿ ಡಾ.ವರಲಕ್ಷ್ಮಿ ಅವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಹಿನಕಲ್‌ನ ರೈತ ಮಂಜು ಅವರ ಮನೆಯ ಮುರ‍್ರಾ ತಳಿಯ ಎಮ್ಮೆಯು ಕರು ಹಾಕುವಾಗ ಗರ್ಭಕೋಶವೂ ಬಂದಿತ್ತು. ಅದಕ್ಕೆ ಚಿಕಿತ್ಸೆ ನೀಡುವುದು ಸವಾಲಿನದ್ದಾಗಿತ್ತು. ಎಮ್ಮೆ ಮೃತಪಡುವ ಸಾಧ್ಯತೆ ಇತ್ತು. ವೈದ್ಯರು 2 ಗಂಟೆ ಚಿಕಿತ್ಸೆ ನೀಡಿ, ಗರ್ಭಕೋಶವನ್ನು ಮತ್ತೆ ಅದೇ ಸ್ಥಿತಿಗೆ ಸೇರಿಸಿದ್ದಾರೆ.
‘ಸಾಕಣೆದಾರರು ಮುನ್ನೆಚ್ಚರಿಕೆ ವಹಿಸಿರಲಿಲ್ಲ. ಅಲ್ಲದೇ, ಎಮ್ಮೆಗೆ ಮೂಗುದಾರ ಕೂಡ ಹಾಕಿರಲಿಲ್ಲ. ಅದಕ್ಕೆ ಚಿಕಿತ್ಸೆ ನೀಡುವುದೇ ಕಷ್ಟವಾಗಿತ್ತು. ಹೆರಿಗೆ ವೇಳೆ ಹೆಚ್ಚು ನಿತ್ರಾಣಗೊಂಡಿತ್ತು. ತಡಮಾಡಿದ್ದರೆ ಗ್ಯಾಂಗ್ರೀನ್ ಆಗಿ ಕೊಳೆತುಹೋಗುವ ಸಂಭವವೂ ಇತ್ತು. ಹೀಗಾಗಿ ಸಕಾಲಕ್ಕೆ ಚಿಕಿತ್ಸೆ ನೀಡಲಾಗಿದೆ’ ಎಂದು ಡಾ.ಎ.ವರಲಕ್ಷ್ಮಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘6 ವರ್ಷದ ಎಮ್ಮೆಯಾಗಿದ್ದು, ಇದು ಎರಡನೇ ಕರು ಆಗಿದೆ. ಎಲ್ಲ ಔಷಧ ನೀಡಲಾಗಿದ್ದು, ಆರೋಗ್ಯದಿಂದಿವೆ. ಕೆಲಸ ಮಾಡಿದ ತೃಪ್ತಿಯಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.