ADVERTISEMENT

ಮೈಸೂರು | ಕಿರುರಂಗಮಂದಿರಕ್ಕೆ ಹೊಸ ಸ್ಪರ್ಶ

₹59 ಲಕ್ಷ ವೆಚ್ಚದಲ್ಲಿ ಧ್ವನಿ, ಬೆಳಕು ವಿನ್ಯಾಸದ ಕಾಮಗಾರಿ, ಜುಲೈ ಅಂತ್ಯಕ್ಕೆ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 5:46 IST
Last Updated 26 ಜೂನ್ 2024, 5:46 IST
   

ಮೈಸೂರು: ನಗರದ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರಗಳಲ್ಲಿ ಒಂದಾದ ಕಲಾಮಂದಿರ ಆವರಣದಲ್ಲಿರುವ ಕಿರು ರಂಗಮಂದಿರ ದಲ್ಲಿ ಧ್ವನಿ ಮತ್ತು ಬೆಳಕಿನ ವಿನ್ಯಾಸಕ್ಕೆ ಹೊಸ ರೂಪ ನೀಡಲಾಗುತ್ತಿದ್ದು, ಜುಲೈ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಕಿರು ರಂಗಮಂದಿರದಲ್ಲಿ ಧ್ವನಿವರ್ಧಕ, ಬೆಳಕು ಸಮಸ್ಯೆ ಕಾಡುತ್ತಿತ್ತು. ಲೈಟ್‌ಗಳು ಸಾಕಷ್ಟಿರಲಿಲ್ಲ. ವೈರಿಂಗ್‌ ತೊಂದರೆಯೂ ಉಂಟಾಗಿತ್ತು. ರಂಗ ಪ್ರದರ್ಶನದ ಅಗತ್ಯಕ್ಕೆ ತಕ್ಕಂತೆ ನವೀಕರಣ ಮಾಡುವಂತೆ ಕಲಾವಿದರು, ರಂಗತಜ್ಞರು ದೂರುತ್ತಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜೂನ್‌ ಎರಡನೇ ವಾರ ದಲ್ಲಿ ₹59 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಮುಂದಿನ ತಿಂಗಳಾಂತ್ಯಕ್ಕೆ ಹೊಸ ರೂಪದಲ್ಲಿ ಕಂಗೊಳಿಸಲಿದೆ. ನಿರ್ಮಿತಿ ಕೇಂದ್ರವು ಕಾಮಗಾರಿಯನ್ನು ನಿರ್ವಹಿಸುತ್ತಿದೆ.

ಪ್ರದರ್ಶನಗಳ ಕೇಂದ್ರ: ನಾಟಕ ಪ್ರದರ್ಶನ, ಉತ್ಸವ, ಕಲಾ ಪ್ರದರ್ಶನ, ಮಹನೀಯರ ಜಯಂತಿಗಳಲ್ಲದೆ, ದಸರಾ ಮಹೋತ್ಸವದ ಸಂದರ್ಭದಲ್ಲಿ ಚಲನಚಿತ್ರೋತ್ಸವ ಮೊದಲಾದ ಚಟುವಟಿಕೆಗಳ ಮೂಲಕವೂ ಕಿರು ರಂಗಮಂದಿರ ಗಮನ ಸೆಳೆದಿದೆ. ನವೀಕರಣ ಹಿನ್ನೆಲೆಯಲ್ಲಿ ಸದ್ಯ ಕಿರುಮಂದಿರದಲ್ಲಿ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ.

ADVERTISEMENT

‘ಧ್ವನಿವರ್ಧಕ, ಬೆಳಕಿನ ವ್ಯವಸ್ಥೆ, ವೇದಿಕೆ, ಕರ್ಟನ್‌ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯಲಿವೆ. ಚೆನ್ನಾಗಿರುವ ಹಳೆಯ ಲೈಟ್‌ಗಳನ್ನು ಉಳಿಸಿಕೊಂಡು ಹೊಸದಾಗಿ ಅವಶ್ಯಕತೆಯಿರುವ ಲೈಟ್‌ಗಳ ಖರೀದಿ ಮಾಡಲಾಗಿದೆ. ಎಫ್‌ಒಎಚ್‌ (ಫ್ರಂಟ್‌ ಆಫ್‌ ಹೌಸ್‌) ಬಾರ್ ತಾಂತ್ರಿಕವಾಗಿ ಸರಿ ಇರಲಿಲ್ಲ. ಅದನ್ನು ವ್ಯವಸ್ಥಿತವಾಗಿ ಮಾಡುವ ಕೆಲಸವಾಗುತ್ತಿದೆ. ವೇದಿಕೆ ಮೇಲೆ ಲೈಟ್‌ ಬಾರ್ ಎರಡು ಮಾತ್ರ ಇದ್ದವು. ಇದೀಗ ಅದನ್ನು 5 ಬಾರ್‌ ಆಗಿ ಮಾಡಲಾಗುತ್ತಿದೆ. ಒಂದೊಂದು ಲೈಟ್‌ ಬಾರ್‌ಗಳಲ್ಲಿ 7ರಿಂದ 8 ಲೈಟ್‌ ಬರುತ್ತವೆ. 3 ಲೈಟ್‌ ಬಾರ್ ಹೆಚ್ಚಿಸುತ್ತಿರುವ ಕಾರಣ 30 ಲೈಟ್‌ಗಳು ಹೆಚ್ಚಲಿವೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೈಡ್‌ ವಿಂಗ್‌ ಬಾರ್‌ ಹೆಚ್ಚುವರಿ ಮಾಡಲಾಗುತ್ತಿದೆ. ವೇದಿಕೆಗೆ ಪರದೆ ಯನ್ನೂ ಅಳವಡಿಸಲಾಗುವುದು. ಸೂಕ್ಷ್ಮ ಧ್ವನಿ ಗ್ರಹಿಸುವಂತಹ ಧ್ವನಿವರ್ಧಕ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ಕಾಮಗಾರಿ ವೀಕ್ಷಣೆಗೆ ಮನವಿ: ‘ಕಾಮಗಾರಿಗೆ ಸಂಬಂಧಪಟ್ಟಂತೆ ರಂಗಕರ್ಮಿಗಳು, ಕಲಾವಿದರು, ಧ್ವನಿ ಬೆಳಕು ವಿನ್ಯಾಸಗಾರರಿಗೆ ಇಲಾಖೆಯಿಂದ ವೈಯಕ್ತಿಕವಾಗಿ ಮನವಿ ಮಾಡಲಾಗಿದೆ. ಕೆಲಸ ನಡೆಯುತ್ತಿರುವ ಸಂದರ್ಭ ಬಂದು ಕೆಲಸ ನೋಡಿ, ಅಗತ್ಯ ಬದಲಾವಣೆ ಇದ್ದಲ್ಲಿ ಮಾರ್ಗದರ್ಶನ ನೀಡುವಂತೆ ಮನವಿ ಮಾಡಲಾಗಿದೆ. ಇವರೇ ಹೆಚ್ಚು ಬಳಕೆ ಮಾಡುವುದರಿಂದ ಅಚ್ಚುಕಟ್ಟಾಗಿ ಕೆಲಸ ನಡೆಯಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ’ ಎಂದು ತಿಳಿಸಿದರು.

ಕಲಾಮಂದಿರ: ನಿರ್ವಹಣೆ ಅಗತ್ಯ

ಕಿರುರಂಗಮಂದಿರದ ಜೊತೆಗೆ ಕಲಾಮಂದಿರದ ಸಮಗ್ರ ನವೀಕರಣಕ್ಕೂ ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿದೆ. ಆದರೆ, ಸದ್ಯ ಲಭ್ಯವಿರುವ ಅನುದಾನಕ್ಕೆ ತಕ್ಕಂತೆ ನಿರ್ವಹಣೆ ಮಾಡುತ್ತಿದ್ದು, ಸಮಗ್ರವಾಗಿ ಕಟ್ಟಡದ ನವೀಕರಣದ ಅಗತ್ಯವಿದೆ ಎನ್ನುತ್ತಾರೆ ಅಧಿಕಾರಿಗಳು.

ಕಲಾಮಂದಿರ ಕಟ್ಟಡ ಕಾಮಗಾರಿಯು 1982ರಲ್ಲಿ ಪ್ರಾರಂಭವಾಗಿ 1985ರಲ್ಲಿ  ಉದ್ಘಾಟನೆಗೊಂಡಿತು. ಆರಂಭದಲ್ಲಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ, ಲೋಕೊಪಯೋಗಿ ಇಲಾಖೆ ನಿರ್ವಹಿಸಿತ್ತು. 1989ರಲ್ಲಿ ಕನ್ನಡ ಸಂಸ್ಕೃತಿ ಇಲಾಖೆಗೆ ಹಸ್ತಾಂತರವಾಗಿತ್ತು. 40–42 ವರ್ಷದ ಕಟ್ಟಡವಾಗಿದ್ದು, ಅಲ್ಲಲ್ಲಿ ಸೋರುತ್ತಿದೆ.

‘ವಾರ್ಷಿಕವಾಗಿ ಬರುವ ಕೆಲವು ಅನುದಾನದಲ್ಲಿ ಇಲಾಖೆ ಹಂತ ಹಂತವಾಗಿ ಮುಖ್ಯವಾದ ಕಾಮಗಾರಿ ಕೈಗೊಂಡಿದೆ. ವೇದಿಕೆ, ಗೋಡೆಗೆ ಸುಣ್ಣಬಣ್ಣ, ಉದ್ಯಾನ, ಬೆಳಕು ಮತ್ತು ಧ್ವನಿ, ಆಸನ ಸೇರಿದಂತೆ ಕೆಲವು ಕೆಲಸಗಳನ್ನು ಮಾಡಿಕೊಂಡು ಬರಲಾಗಿದೆ. ಕಟ್ಟಡ ಸೋರುವಿಕೆ ಸಮಸ್ಯೆ ಇದ್ದು, ಪೂರ್ಣ ಪ್ರಮಾಣದ ನವೀಕರಣದ ಅಗತ್ಯವಿದೆ. ಈ ಬಗ್ಗೆ ಗಮನ ಸೆಳೆಯಲಾಗುವುದು’ ಎನ್ನುತ್ತಾರೆ ಎಂ.ಡಿ.ಸುದರ್ಶನ್‌.

ಶೌಚಾಲಯ ನವೀಕರಣಕ್ಕೆ ಪ್ರಸ್ತಾವ

‘ಕಲಾಮಂದಿರದ ಶೌಚಾಲಯ ಗಳು ದುಃಸ್ಥಿತಿಯಲ್ಲಿದ್ದು, ನವೀಕರಣಕ್ಕೆ 2–3 ದಿನದಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಶೌಚಾಲಯ ತುಂಬಾ ಹಳೆಯದಾಗಿದ್ದು, ಗೋಡೆಗಳ ಟೈಲ್ಸ್, ಕಮೋಡ್‌ ಹೊಳಪು, ಮೆರುಗು ಕಳೆದುಕೊಂಡಿವೆ. ಸ್ವಚ್ಛಗೊಳಿಸಿದ ಬಳಿಕವೂ ಕೆಟ್ಟ ವಾಸನೆ ಬರುತ್ತಿದೆ. ಹೀಗಾಗಿ ಮಾಲ್‌ಗಳಲ್ಲಿರುವಂತೆ ನವೀಕರಣಕ್ಕೆ ಕ್ರಮ ಕೈಗೊಂಡಿದ್ದೇವೆ’ ಎಂದು ಎಂ.ಡಿ.ಸುದರ್ಶನ್‌ ತಿಳಿಸಿದರು.

ಕಿರು ರಂಗಮಂದಿರದಲ್ಲಿ ಉತ್ತಮ ನಾಟಕ ಪ್ರದರ್ಶಿಸಲು ಧ್ವನಿ, ಬೆಳಕು ಸೇರಿದಂತೆ ಅಗತ್ಯ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ.
ಎಂ.ಡಿ.ಸುದರ್ಶನ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.