ಮೈಸೂರು: ಇಲ್ಲಿನ ಮಾನಂದವಾಡಿ ರಸ್ತೆಯ ರಾಜ್ಯ ರೇಷ್ಮೆ ಕೈಗಾರಿಕೆಗಳ ನಿಗಮದ (ಕೆಎಸ್‌ಐಸಿ) ಸಭಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ‘ಮೈಸೂರು ರೇಷ್ಮೆ’ ಸೀರೆಗಳ ಸೆಕೆಂಡ್ಸ್ ಸೇಲ್ಸ್ ಮೇಳಕ್ಕೆ ನಿರೀಕ್ಷೆಗೂ ಮೀರಿ ಸಾವಿರಾರು ಮಹಿಳೆಯರು ಬಂದಿದ್ದರು.
ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಮಾರಾಟ ನಿಗದಿಯಾಗಿದ್ದರೂ, ಬೆಳಿಗ್ಗೆ 6ರಿಂದಲೇ ಮಹಿಳೆಯರು ಸರದಿಯಲ್ಲಿ ನಿಂತಿದ್ದರಿಂದ ಸಾಲು, ಸೀರೆ ವೀಕ್ಷಣೆ ಹಾಗೂ ಬಿಲ್ಲಿಂಗ್ ಕೌಂಟರ್‌ಗಳಲ್ಲಿ ನೂಕುನುಗ್ಗುಲು ಏರ್ಪಟ್ಟಿತ್ತು.
ಮೈಸೂರಷ್ಟೇ ಅಲ್ಲದೆ, ಬೆಂಗಳೂರು, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು, ಚಿಕ್ಕಮಗಳೂರಿನಿಂದಲೂ ಬಂದಿದ್ದ ಹಲವರಿಗೆ ತಮ್ಮ ಇಷ್ಟದ ಸೀರೆ ದೊರೆಯದೇ ಸಿಕ್ಕಿದ್ದನ್ನೇ ಖರೀದಿಸಿ ತೃಪ್ತಿಪಟ್ಟರು.
‘ಮಾರ್ಚ್ 17ರವರೆಗೆ ಸೆಕೆಂಡ್ಸ್ ಸೇಲ್ಸ್ ನಡೆಯಲಿದೆ. ಶೇ 30ರಷ್ಟು ರಿಯಾಯಿತಿಯಿದ್ದು, ಸಣ್ಣ ಪುಟ್ಟ ತಾಂತ್ರಿಕ ತೊದರೆಯಿರುವ ಸೀರೆಗಳನ್ನು ಮಾರಾಟ ಮಾಡಲಾಗುತ್ತದೆ. ಸಂಗ್ರಹದಲ್ಲಿರುವುದನ್ನು ಮೂರು ದಿನಕ್ಕೂ ವಿಭಜಿಸಿ ಮಾರಾಟ ಮಾಡುತ್ತೇವೆ. ಇಂದು ಸಾವಿರ ಸೀರೆಗಳ ಮಾರಾಟಕ್ಕೆ ಯೋಜಿಸಿದ್ದೆವು. 2 ಸಾವಿರಕ್ಕೂ ಹೆಚ್ಚು ಗ್ರಾಹಕರು ಬಂದಿ ದ್ದರಿಂದ ಒತ್ತಡ ಉಂಟಾಗಿದೆ’ ಎಂದು ನಿಗಮದ ಮಾರಾಟ ವಿಭಾಗದ ಪ್ರಧಾನ ವ್ಯವಸ್ಥಾಪಕ ಎಸ್.ಭಾನುಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.