ಮೈಸೂರು:35 ವರ್ಷಗಳ ಹಿಂದೆ ಸ್ವೀಡನ್ ಕುಟುಂಬವೊಂದು ಬೆಂಗಳೂರಿನ ಆಶ್ರಯ ಚಿಲ್ಡ್ರನ್ಸ್ ಹೋಂ ಎಂಬ ಸಂಸ್ಥೆಯಿಂದ ಬಾಲಕಿಯೊಬ್ಬಳನ್ನು ದತ್ತು ಪಡೆದಿದ್ದು, ಈಗ ಆಕೆ ತನ್ನ ಕುಟುಂಬದ ಮೂಲ ಹುಡುಕಿಕೊಂಡು ಪತಿಯೊಂದಿಗೆ ಮೈಸೂರಿಗೆ ಬಂದಿದ್ದಾರೆ.
ಸ್ವೀಡನ್ ನಿವಾಸಿ ಜಾಲಿ ಸ್ಯಾಂಡ್‌ಬರ್ಗ್ ತನ್ನ ಪತಿ ಎಡಿನ್ ಹಾಗೂ ಪುಣೆಯ ವಕೀಲೆ ಅಂಜಲಿ ಪವಾರ್ ಜೊತೆಗೂಡಿ ಬಂದಿದ್ದು, ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ, ಸಾರ್ವಜನಿಕರು ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡರು.
‘ಮದ್ದೂರಿನ ಪ್ರೌಢಶಾಲೆ ಬಳಿಯಿಂದ ಜಾಲಿ ಸ್ಯಾಂಡ್‌ಬರ್ಗ್ ಅವರನ್ನು ಆಶ್ರಮಕ್ಕೆ ಸೇರಿಸಲಾಗಿದೆ ಎಂಬ ಮಾಹಿತಿ ಆಧರಿಸಿ ತೆರಳಿದಾಗ ಅಲ್ಲಿ ಆಕೆಯನ್ನು ಜಾನು ಎಂದು ಕರೆಯುತ್ತಿದ್ದುದಾಗಿ ತಿಳಿದು ಬಂತು. ಆಕೆಯ ತಾಯಿ ವಸಂತಾ ಎರಡು ವಿವಾಹವಾಗಿದ್ದು, ಮೈಸೂರಿನ ಮೊದಲ ಪತಿಯೊಂದಿಗೆ ಇದ್ದಾಗ ಜಾನು ಜನಿಸಿದ್ದಳು. ಪತಿಯ ಆತ್ಮಹತ್ಯೆ ಬಳಿಕ ಮಹಿಳೆಯು ಚನ್ನಪಟ್ಟಣದವರೊಬ್ಬರನ್ನು ಮದುವೆಯಾಗಿದ್ದರು. ಆಗ ಜಾನು ಪಕ್ಕದ ಮನೆಯ ಜಯಮ್ಮ ಎಂಬುವವರ ಮಡಿಲು ಸೇರಿದ್ದರು. ಯಾವುದೋ ಕಾರಣಕ್ಕೆ ವಸಂತಮ್ಮನೂ ಆತ್ಮಹತ್ಯೆ ಮಾಡಿಕೊಂಡರು. ಈ ಸಮಯದಲ್ಲಿ ಜಾನು ಅವರನ್ನು ಜಯಮ್ಮ ಬೆಂಗಳೂರಿನ ಸಂಸ್ಥೆಗೆ ಸೇರಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ’ ಎಂದು ವಕೀಲೆ ಅಂಜಲಿ ಪವಾರ್ ತಿಳಿಸಿದರು.
‘ಜಾಲಿ ಸ್ಯಾಂಡ್‌ಬರ್ಗ್ ಅವರ ಕುಟುಂಬದ ಇತರೆ ಮಾಹಿತಿ ತಿಳಿದುಬಂದಿಲ್ಲ. ಆಕೆಯ ಬಗ್ಗೆ ತಿಳಿದವರು ಇದ್ದರೆ ಮೊ.ಸಂ 9822206485 ಸಂಪರ್ಕಿಸಿ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.