ADVERTISEMENT

ಪ್ರಕರಣಗಳ ಇತ್ಯರ್ಥದಲ್ಲಿ ಮಧ್ಯಸ್ಥಿಕೆಗಾರರ ಪಾತ್ರ ಪ್ರಮುಖ: ರವೀಂದ್ರ ಹೆಗಡೆ

ತರಬೇತಿ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ರವೀಂದ್ರ ಹೆಗಡೆ ಅಭಿಮತ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 16:26 IST
Last Updated 26 ಅಕ್ಟೋಬರ್ 2024, 16:26 IST
ಮೈಸೂರಿನ ಜಿಲ್ಲಾ ಪಂಚಾಯಿತಿಯಲ್ಲಿ ಶನಿವಾರ ನಡೆದ ಮಧ್ಯಸ್ಥಿಕೆದಾರರ ತರಬೇತಿ ಕಾರ್ಯಕ್ರಮವನ್ನು ರವೀಂದ್ರ ಹೆಗಡೆ ಉದ್ಘಾಟಿಸಿದರು. ಬೃಂದಾ ನಂದಕುಮಾರ್, ಎಸ್.ಅರ್‌.ಅನುರಾಧಾ, ಎಸ್‌.ಲೋಕೇಶ್, ಸಾವಿತ್ರಿ ಎಸ್.ಕುಜ್ಜಿ, ಬಿ.ಜಿ.ದಿನೇಶ್ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ
ಮೈಸೂರಿನ ಜಿಲ್ಲಾ ಪಂಚಾಯಿತಿಯಲ್ಲಿ ಶನಿವಾರ ನಡೆದ ಮಧ್ಯಸ್ಥಿಕೆದಾರರ ತರಬೇತಿ ಕಾರ್ಯಕ್ರಮವನ್ನು ರವೀಂದ್ರ ಹೆಗಡೆ ಉದ್ಘಾಟಿಸಿದರು. ಬೃಂದಾ ನಂದಕುಮಾರ್, ಎಸ್.ಅರ್‌.ಅನುರಾಧಾ, ಎಸ್‌.ಲೋಕೇಶ್, ಸಾವಿತ್ರಿ ಎಸ್.ಕುಜ್ಜಿ, ಬಿ.ಜಿ.ದಿನೇಶ್ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ   

ಮೈಸೂರು: ‘ಪ್ರಕರಣಗಳ ಇತ್ಯರ್ಥದಲ್ಲಿ ಮಧ್ಯಸ್ಥಿಕೆಗಾರರ ಪಾತ್ರ ಪ್ರಮುಖವಾಗಿದೆ. ಅವರು ಎಲ್ಲ ವ್ಯಾಜ್ಯಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ಆದರೆ, ಪರಿಹರಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರವೀಂದ್ರ ಹೆಗಡೆ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ಮಧ್ಯಸ್ಥಿಕಾ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದೊಂದಿಗೆ ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳ ಮಧ್ಯಸ್ಥಿಕೆದಾರರ ಎರಡು ದಿನಗಳ ತರಬೇತಿ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಸ್ಯೆಗೆ ನಾನಾ ರೀತಿಯ ಪರಿಹಾರ ಇರುತ್ತವೆ. ಕೋರ್ಟ್‌ನಲ್ಲಿ ದಾಖಲಾಗುವ ಸಮಸ್ಯೆಗಳಿಗೂ ಅನೇಕ ರೀತಿಯ ಪರಿಹಾರಗಳು ಇರುತ್ತವೆ. ಬುದ್ಧಿವಂತಿಕೆಯಿಂದ ಆ ಪರಿಹಾರಗಳನ್ನು ಕಂಡುಕೊಳ್ಳಬೇಕು. ಈ ಕಾರ್ಯವನ್ನು ಮಧ್ಯಸ್ಥಿಕೆ ಮೂಲಕ ಸಮರ್ಥವಾಗಿ ಮಾಡಬಹುದು. ಇದಕ್ಕಾಗಿ ತಮ್ಮ ಹತ್ತಿರ ಇರುವ ಜ್ಞಾನ ಹೆಚ್ಚಿಸಿಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

‘ಪ್ರತಿ ಜಿಲ್ಲೆಗೆ 20ರಂತೆ ಒಟ್ಟು 60 ಮಂದಿ ಆಯ್ಕೆ ಮಾಡಲಾಗಿದೆ. ಅವರು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು. ನ್ಯಾಯದಾನದ ವಿವಿಧ ಕ್ರಮಗಳಲ್ಲಿ ಮಧ್ಯಸ್ಥಿಕೆ ತಂತ್ರವು ಅತ್ಯಂತ ಪರಿಣಾಮಕಾರಿಯಾಗಿದೆ ಎಂಬುದು ಅರಿಯಬೇಕು’ ಎಂದರು.

ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ ಸಾವಿತ್ರಿ ಎಸ್.ಕುಜ್ಜಿ ಮಾತನಾಡಿ, ‘ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ಹೆಚ್ಚಿದೆ. ಹೆಚ್ಚಿನ‌ ಪ್ರಮಾಣದಲ್ಲಿ ಮಧ್ಯಸ್ಥಿಕೆಗಾರರು ಪಾತ್ರ ವಹಿಸಬೇಕು. ಎಲ್ಲ ಪ್ರಕರಣ ಒಂದೇ ರೀತಿಯಲ್ಲಿ ಇರುವುದಿಲ್ಲ. ಇದನ್ನು ಗಮನಹರಿಸಿ ಪ್ರಕರಣ ಬಗೆಹರಿಸಲು ಮುಂದಾಗಬೇಕು’ ಎಂದು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷ ಎಸ್‌.ಲೋಕೇಶ್ ಮಾತನಾಡಿ, ‘ಮಧ್ಯಸ್ಥಿಕೆಗಾರರಿಗೆ ತಾಳ್ಮೆ ಇರಬೇಕು. ವ್ಯಾಜ್ಯ ಪರಿಹರಿಸುವಲ್ಲಿ ಪಾತ್ರ ದೊಡ್ಡದು. ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾಮಾಜಿಕ ಜವಾಬ್ದಾರಿ ನಿರ್ವಹಿಸುತ್ತಿದ್ದೇವೆ ಎಂದು ತಿಳಿದುಕೊಳ್ಳಬೇಕು’ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ.ದಿನೇಶ್, ಮಧ್ಯಸ್ಥಿಕ ತರಬೇತುದಾರರಾದ ಎಸ್.ಅರ್‌.ಅನುರಾಧಾ, ಬೃಂದಾ ನಂದಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.