ಮೈಸೂರು: ಕೇಂದ್ರ ಸಂಗೀತ ನಾಟಕ ಅಕಾಡೆಮಿ ನೀಡುವ ಪ್ರತಿಷ್ಠಿತ ‘ರತ್ನ’ ಪ್ರಶಸ್ತಿಗೆ ಸಾಂಸ್ಕೃತಿಕ ನಗರಿ ಮೈಸೂರಿನ ವೀಣಾವಾದಕ ಆರ್.ವಿಶ್ವೇಶ್ವರನ್ ಭಾಜನರಾಗಿದ್ದಾರೆ. ಅಕಾಡೆಮಿಯು 2022–23ನೇ ಸಾಲಿನ ಈ ಪ್ರಶಸ್ತಿಗೆ ಆಯ್ಕೆಯಾಗಿರುವುದಾಗಿ ಬುಧವಾರ ಘೋಷಿಸಿದೆ.
ನಗರದ ಕಾಶೀಪತಿ ಅಗ್ರಹಾರದಲ್ಲಿ 1931ರಲ್ಲಿ ಅರಮನೆ ಆಸ್ಥಾನ ವಿದ್ವಾಂಸ ಬಿ.ರಾಮಯ್ಯ ಹಾಗೂ ವರಲಕ್ಷ್ಮಮ್ಮ ದಂಪತಿ ಪುತ್ರರಾಗಿ ಜನಿಸಿದ ಅವರು, 9ನೇ ವಯಸ್ಸಿನಿಂದಲೂ ದೇಶ–ವಿದೇಶಗಳಲ್ಲಿ ಸಂಗೀತ ಕಛೇರಿಗಳನ್ನು ನೀಡಿದ್ದಾರೆ.
ಕರ್ನಾಟಕ ಸಂಗೀತ ಗಾಯನದಲ್ಲಿಅಭ್ಯಾಸ ನಡೆಸಿದ್ದ ಅವರು, ಸಹೋದರ ಸೀತಾರಾಮ ಅವರೊಂದಿಗೆ ನಡೆಸಿದ ವಾಗ್ವಾದ ಹಾಗೂ ಸವಾಲು ವೀಣಾವಾದಕರನ್ನಾಗಿಸಿತು. ‘ವೀಣೆಯನ್ನು ನುಡಿಸಿದರೆ ಹಾಡಿದಂತಿರಬೇಕು’ ಎಂಬುದು ವಿಶ್ವೇಶ್ವರನ್ ಅವರ ವಾದವಾಗಿತ್ತು.
‘ನುಡಿಸಿ ತೋರಿಸೆಂದು ಅಣ್ಣ ಸವಾಲು ಹಾಕಿದಾಗ, ನುಡಿಸಲು ಆರಂಭಿಸಿದೆ. ಏನು ಹಾಡುತ್ತಿದ್ದೆನೋ ಅದನ್ನೇ ನುಡಿಸಲು ಶ್ರಮಿಸಿದೆ. ಸಂಗೀತ ಸರಸ್ವತಿ ಇಲ್ಲಿವರೆಗೆ ಕರೆತಂದಳು. ಸಂಗೀತ ಲಕ್ಷ್ಯ ಹಾಗೂ ಲಕ್ಷಣಗಳಲ್ಲಿ ಜ್ಞಾನ ಹಾಗೂ ಕಲಿಕೆಯು ಸಾಗಿದೆ’ ಎಂದು ವಿಶ್ವೇಶ್ವರನ್ ಭಾವುಕರಾದರು.
‘ರತ್ನ ಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ. ನನಗೀಗ 93 ವರ್ಷ. ಕರ್ನಾಟಕದವರಿಗೆ ಎಲ್ಲವೂ ನಿಧಾನವಾಗಿ ಸಿಗುತ್ತದೆ. ಅಕಾಡೆಮಿಯು ನನ್ನನ್ನು ಗುರುತಿಸಿದೆಯಲ್ಲ ಅದೇ ಸಂತೋಷ. 2012ರಲ್ಲಿ ಸಂಗೀತ ನಾಟಕ ಅಕಾಡೆಮಿಯ ಟ್ಯಾಗೋರ್ ಪುರಸ್ಕಾರ ದೊರೆತಿತ್ತು’ ಎಂದು ವಿಶ್ವೇಶ್ವರನ್ ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು.
ಸಂಗೀತ ಶಾಸ್ತ್ರಜ್ಞ, ವಾಗ್ಗೇಯಕಾರರಾಗಿ 150ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಅವರು, ‘ಫೆಸೆಟ್ಸ್ ಆಫ್ ಮ್ಯೂಸಿಕ್’, ‘ಸಂಗೀತ ಶಾಸ್ತ್ರ ಚಿಂತನ ರಸಾಯನ’, ‘ಶ್ಯಾಮಕೃಷ್ಣ ವಾಗ್ಗೇಯ ವ್ಯಾಖ್ಯಾನ’, ‘ವಾಗ್ಗೇಯ ವಿಶ್ವೇಶ್ವರಿ’ ಎಂಬ ನಾಲ್ಕು ಸಂಗೀತ ಗ್ರಂಥಗಳನ್ನು ಬರೆದಿದ್ದಾರೆ.
ಮಹಾರಾಜ ಕಾಲೇಜಿನಲ್ಲಿ ‘ಇಂಡಾಲಜಿ’ಯಲ್ಲಿ 1954ರಲ್ಲಿ ಎಂ.ಎ ಪದವಿ ಪಡೆದು, ಮಹಾರಾಣಿ ಕಾಲೇಜಿನಲ್ಲಿ ಸಂಗೀತ ಪ್ರಾಧ್ಯಾಪಕರಾಗಿದ್ದರು. ನಂತರ ಲಲಿತಾಕಲಾ ಕಾಲೇಜಿನಲ್ಲಿ 27 ವರ್ಷ ಪ್ರಾಧ್ಯಾಪಕ, ಪ್ರಾಂಶುಪಾಲರಾಗಿ ನಿವೃತ್ತರಾದ ಅವರು, 85 ವರ್ಷಗಳಿಂದ ಸಾವಿರಾರು ಸಂಗೀತ ಕಛೇರಿ ನೀಡಿದ್ದಾರೆ.
ಅವರಿಗೆ 2002ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ, 2012ರಲ್ಲಿ ಟಿ.ಚೌಡಯ್ಯ ಪುರಸ್ಕಾರ, 2005ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ 2015ರಲ್ಲಿ ಗೌರವ ಡಾಕ್ಟರೇಟ್ ದೊರೆತಿದೆ. ಇದೀಗ ರತ್ನ ಪ್ರಶಸ್ತಿ ಪ್ರದಾನವು ಮಾರ್ಚ್ 6ರಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.