ಬೆಟ್ಟದಪುರ: ‘ಶಾಸಕರಾದ ಕೆಲವೇ ದಿನಗಳಲ್ಲಿ ಕೆ.ಮಹದೇವ ಅವರು ಸೇಡಿನ ರಾಜಕಾರಣ ಆರಂಭಿಸಿದ್ದಾರೆ’ ಎಂದು ಪರಿಸರ ಹೋರಾಟಗಾರ ಕೌಲನಹಳ್ಳಿ ಸೋಮಶೇಖರ್ ಆರೋಪಿಸಿದ್ದಾರೆ.
‘ಎರೆಮನುಗನಹಳ್ಳಿ ಗ್ರಾಮದ ಸರ್ವೆ ನಂಬರ್ 24 ರಿಂದ ಕೌಲನಹಳ್ಳಿ ಸರ್ವೆ ನಂಬರ್ 80ರ ವರೆಗೆ ಜನ, ಜಾನುವಾರುಗಳು ಓಡಾಡಲು ಕಾಲುದಾರಿ ಇದೆ. ಅದು ನಮ್ಮ ಜಮೀನಿನ ಮೇಲೆ ಹಾದು ಹೋಗಿದೆ. ಆದರೆ, ಅದು ಒತ್ತುವರಿಯಾಗಿದ್ದು ಅದನ್ನು ತೆರವುಗೊಳಿಸಿ ಎಂದು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಕಾಲುದಾರಿಯು ಒಟ್ಟು 17 ಸರ್ವೆ ನಂಬರ್‌ಗಳ ಜಮೀನುಗಳ ಮೇಲೆ ಹಾದು ಹೋಗಿದ್ದು ಉಳಿದ ಎಲ್ಲರನ್ನೂ ಬಿಟ್ಟು ಕೇವಲ ನನಗೆ ಮಾತ್ರ ನೋಟಿಸ್ ನೀಡಿದ್ದಾರೆ’ ಎಂದು ಆರೋಪಿಸಿದ್ದಾರೆ.
‘2016 ಡಿಸೆಂಬರ್‌ನಲ್ಲಿ ತಿಂಗಳಿನಲ್ಲಿ ಕೌಲನಹಳ್ಳಿ ಗ್ರಾಮದ ಸರ್ವೆ ನಂಬರ್ 33 ರಲ್ಲಿ ಸರ್ಕಾರ ಒತ್ತುವರಿ ಮಾಡಿರುವ ನಮ್ಮ ಜಮೀನನ್ನು ಬಿಡಿಸಿಕೊಡವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದೆ. ಆ ಕುರಿತು ಒಂದೂವರೆ ವರ್ಷ ಕಳೆದರೂ ಯಾವುದೇ ಕ್ರಮಕೈಗೊಳ್ಳದ ಅಧಿಕಾರಿಗಳು ಶಾಸಕರು ಸೂಚನೆ ನೀಡಿದ 15 ದಿನಗಳಲ್ಲಿ ಕಾಲುದಾರಿ ತೆರವು ಮಾಡಿ ಎಂದು ನನಗೆ ನೋಟಿಸ್ ನೀಡಿರುವುದರ ಹಿಂದೆ ಶಾಸಕರ ಕೈವಾಡ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ’ ಎಂದು ದೂರಿದ್ದಾರೆ.
‘ವಿಧಾನಸಭಾ ಚುನಾವಣೆಯಲ್ಲಿ ಪಿರಿಯಾಪಟ್ಟಣ ಕ್ಷೇತ್ರದಿಂದ ಜೆಡಿಎಸ್‌ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ವರಿಷ್ಠರ ಸೂಚನೆ ಮೇರೆಗೆ ಸ್ಪರ್ಧೆಯಿಂದ ಹಿಂದೆ ಸರಿದು ಪಕ್ಷದ ಪರ ಕೆಲಸಮಾಡಿದ್ದೆ. ಆದರೆ, ಶಾಸಕರು ನಮ್ಮ ಗ್ರಾಮದಲ್ಲಿ ಕೆಲವರನ್ನು ನನ್ನ ವಿರುದ್ಧ ಎತ್ತಿಕಟ್ಟಿ ಗ್ರಾಮಸ್ಥರಲ್ಲಿ ಒಡಕು ಮೂಡಿಸಿದ್ದಾರೆ. ಈಗ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಪಕ್ಷದ ವರಿಷ್ಠರಿಗೆ ದೂರು ನೀಡುತ್ತೇನೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.