ADVERTISEMENT

ಅಗತ್ಯ ಬಿದ್ದರೆ ಜಮೀರ್ ವಿರುದ್ಧ ಕ್ರಮ: ಪರಮೇಶ್ವರ್

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2024, 22:34 IST
Last Updated 18 ನವೆಂಬರ್ 2024, 22:34 IST
ಡಾ.ಜಿ.ಪರಮೇಶ್ವರ್
ಡಾ.ಜಿ.ಪರಮೇಶ್ವರ್   

ಮೈಸೂರು: ‘ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿಕೆ ಉಪಚುನಾವಣೆಯಲ್ಲಿ ಪಕ್ಷಕ್ಕೆ ಹೊರೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರೇ ಹೇಳಿದ್ದಾರೆ. ಅಧ್ಯಕ್ಷರು ಪಕ್ಷದ ಶಿಸ್ತುಪಾಲನಾ ಸಮಿತಿಗೆ ವರದಿ ಕೊಟ್ಟರೆ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಕ್ರಮ ಕೈಗೊಳ್ಳಬಹುದು’ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಅಭಿಪ್ರಾಯ‍ಪಟ್ಟರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಎಐಸಿಸಿ ಶಿಸ್ತುಸಮಿತಿ ಸದಸ್ಯನಾಗಿದ್ದಾಗ, ಪಕ್ಷಕ್ಕೆ ಹಾನಿಯಾಗುವಂಥ ಹೇಳಿಕೆ ಕೊಡುವ ನಾಯಕರು ಎಷ್ಟೇ ದೊಡ್ಡವರಿದ್ದರೂ ನೋಟಿಸ್ ಕೊಟ್ಟು ಕರೆಸುತ್ತಿದ್ದೆವು. ಅಮಾನತು ಸಹ ಮಾಡುತ್ತಿದ್ದೆವು' ಎಂದರು.

‘ಬಿಜೆಪಿ ವಿರುದ್ಧ ಶೇ 40 ಕಮಿಷನ್ ಆರೋಪಕ್ಕೆ ದಾಖಲೆ ಇಲ್ಲ’ ಎಂದು ಲೋಕಾಯುಕ್ತ ತನಿಖೆಯಲ್ಲಿ ಉಲ್ಲೇಖಿಸಿರುವ ಕುರಿತು ಪ್ರತಿಕ್ರಿಯಿಸಿ, ‘ಕೆಂಪಣ್ಣ ಆಯೋಗ ಬರೆದ ಪತ್ರವನ್ನು ಆಧರಿಸಿ ನಾವು ಹೋರಾಡಿದ್ದೆವು. ನಮಗೆ ಅದೇ ದಾಖಲೆ. ಲೋಕಾಯುಕ್ತ ಪೊಲೀಸರು ಯಾವ ಆಧಾರದ‌ಲ್ಲಿ ಸಾಕ್ಷಿ ಇಲ್ಲವೆಂದಿದ್ದಾರೆಂದು ನೋಡಬೇಕು. ಅಗತ್ಯ ಕಂಡರೆ ಮರುತನಿಖೆಗೆ ಸಿದ್ಧರಿದ್ದೇವೆ' ಎಂದರು.

ADVERTISEMENT

‘ಮುಖ್ಯಮಂತ್ರಿ ಬದಲಾವಣೆ ಕುರಿತು ಯಾವುದೇ ಚರ್ಚೆಯಾಗದಿದ್ದರೂ, ಬಿಜೆಪಿ–ಜೆಡಿಎಸ್‌ನವರು​ ಆ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಕಂಡರೆ ಬಿಜೆಪಿಗೆ ಹೊಟ್ಟೆ ಉರಿ. ಹೀಗಾಗಿ ಅವರನ್ನು ಸಿ.ಎಂ. ಸ್ಥಾನದಿಂದ ಇಳಿಸಲು ಡೇಟ್ ಫಿಕ್ಸ್ ಮಾಡುತ್ತಾರೆ. ತಮ್ಮ ಪರ ಜನ ಬೀದಿಗಿಳಿದು ಹೋರಾಡುತ್ತಾರೆ ಎಂದು ಸಿದ್ದರಾಮಯ್ಯ ಹೇಳುವುದು ಸಹಜವಲ್ಲವೇ. ಅವರ ವಿರುದ್ಧ ಸುಮ್ಮನೆ ಆರೋಪಿಸುತ್ತಾರೆಂದರೆ ಜನ ಏನು ಮಾಡುತ್ತಾರೆ ಹೇಳಿ? ಅದನ್ನೇ ಮುಖ್ಯಮಂತ್ರಿ ಹೇಳಿದ್ದಾರೆ’ ಎಂದರು.

ಸಂ‍ಪುಟ ಸಭೆಯಲ್ಲಿ ತೀರ್ಮಾನ:

ಕೋವಿಡ್ ಹಗರಣ ಕುರಿತು ಪ್ರತಿಕ್ರಿಯಿಸಿ, ‘ಕೋವಿಡ್ ವೇಳೆ ಮಾತ್ರೆ ಮತ್ತು ಹಾಸಿಗೆಗಳ ಖರೀದಿಯಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರವಾಗಿದ್ದು, ತನಿಖಾ ವರದಿ ಸರ್ಕಾರದ ಕೈ ಸೇರಿದೆ. ಚೀನಾ ಮೂಲದ ಉತ್ಪನ್ನಗಳಿಗೆ ಭಾರಿ ಬೆಲೆ ನಿಗದಿಪಡಿಸಿ ಅವ್ಯವಹಾರ ಮಾಡಲಾಗಿದೆ. ಹಗರಣವನ್ನು ಎಸ್‌ಐಟಿಗೆ ವಹಿಸಬೇಕೆ ಅಥವಾ ಸಿಬಿಐಗೆ ನೀಡಬೇಕೆ ಎಂಬುದನ್ನು ಸಂಪುಟ ಉಪಸಮಿತಿ ಸಭೆಯಲ್ಲಿ ತೀರ್ಮಾನಿಸುತ್ತೇವೆ’ ಎಂದರು.

‘ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು, ಎರಡೆರಡು ಕಾರ್ ಉಳ್ಳವರು ಬಿಪಿಎಲ್ ಕಾರ್ಡ್‌ ಪಡೆದಿದ್ದಾರೆ. ಅಂಥವರು ‌ವಾಪಸು ಕೊಡಬೇಕು. ಸರ್ಕಾರ ಕಾನೂನು ಕ್ರಮ ಕೈಗೊಂಡರೆ ಕಷ್ಟವಾಗುತ್ತದೆ. ಜಿಲ್ಲಾಮಟ್ಟದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ’ ಎಂದರು.

‘ಶಾಲಾ, ಕಾಲೇಜುಗಳ ಬಳಿ ಚಾಕೊಲೇಟ್​ ರೂಪದಲ್ಲಿ ಮಾದಕವಸ್ತು ಮಾರಾಟವಾಗುತ್ತಿದೆ ಎಂಬ ಮಾಹಿತಿ ಇದೆ. ಕೆಲವೆಡೆ ಮೆಡಿಕಲ್ ಸ್ಟೋರ್‌ಗಳಲ್ಲೂ ಮಾತ್ರೆ ರೂಪದಲ್ಲಿ ಸಿಗುತ್ತಿದೆ. ಅಂತಹ ಮಳಿಗೆಗಳ ಲೈಸನ್ಸ್ ರದ್ದು ಮಾಡಲು ಕ್ರಮ ವಹಿಸಲಾಗುವುದು. ಈಗಾಗಲೇ ನೂರಾರು ಕೋಟಿ ಮೌಲ್ಯದ ಮಾದಕವಸ್ತು ವಶಪಡಿಸಿಕೊಳ್ಳಲಾಗಿದೆ. ವಿದೇಶದಿಂದ ಇಲ್ಲಿಗೆ ಬಂದು ದಂಧೆಯಲ್ಲಿ ತೊಡಗಿದ್ದ ಸುಮಾರು 80 ಮಂದಿಯನ್ನು ಅವರ ದೇಶಗಳಿಗೆ ವಾಪಸ್‌ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣ ಹಾಗೂ ಅಂತರ ರಾಜ್ಯ ಗಡಿಗಳಲ್ಲಿ ನಿಗಾ ವಹಿಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.