ADVERTISEMENT

ಪ್ರವೇಶ ಪತ್ರ ತಡ: ವಿದ್ಯಾರ್ಥಿಗಳ ಪರದಾಟ

ಗಂಗೂಬಾಯಿ ಹಾನಗಲ್‌ ಸಂಗೀತ ವಿ.ವಿಯ ಸಂಗೀತ, ನೃತ್ಯ, ತಾಳವಾದ್ಯ ಲಿಖಿತ ಪರೀಕ್ಷೆ

ಸಿ.ಮೋಹನ್‌ ಕುಮಾರ್‌
Published 23 ಜುಲೈ 2024, 19:19 IST
Last Updated 23 ಜುಲೈ 2024, 19:19 IST
ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ
ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ   

ಮೈಸೂರು: ಇಲ್ಲಿನ ‘ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ’ವು ನಡೆಸುವ ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯಗಳ ಲಿಖಿತ ಪರೀಕ್ಷೆಗೆ ನಾಲ್ಕು ದಿನವಿದ್ದಾಗ ಪ್ರವೇಶ ಪತ್ರ ಸಿಕ್ಕಿದೆ. ಅಲ್ಲದೆ ಹತ್ತಿರದ ಪರೀಕ್ಷಾ ಕೇಂದ್ರಗಳು ಸಿಗದೇ ವಿದ್ಯಾರ್ಥಿಗಳು ಪರದಾಡುವಂತೆ ಆಗಿದೆ.

ರಾಜ್ಯದಾದ್ಯಂತ 17 ಸಾವಿರ ಮಂದಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಈ ಮೊದಲು ಶಿಕ್ಷಣ ಇಲಾಖೆಯು ಪರೀಕ್ಷೆಗಳನ್ನು ನಡೆಸುತ್ತಿತ್ತು. ಸರ್ಕಾರವು ಈಗ ಉಸ್ತುವಾರಿಯನ್ನು ಸಂಗೀತ ವಿಶ್ವವಿದ್ಯಾಲಯಕ್ಕೆ ನೀಡಿದೆ.

ಅದರಂತೆ, ಇದೇ 27, 28ರಂದು ಗಾಯನ, ವಾದ್ಯ ಸಂಗೀತ, ನೃತ್ಯ, ತಾಳವಾದ್ಯದ ಜ್ಯೂನಿಯರ್‌ ಹಾಗೂ ಸೀನಿಯರ್‌ (ವಿದ್ವತ್‌ ಪೂರ್ವ, ವಿದ್ವತ್ ಅಂತಿಮ) ಪರೀಕ್ಷೆಗಳು ನಡೆಯುವುದಾಗಿ ವಿಶ್ವವಿದ್ಯಾಲಯವು ಪ್ರಕಟಿಸಿತ್ತು. ಆದರೆ, ಪ್ರವೇಶ ಪತ್ರ ಜುಲೈ 23ರ ಮಧ್ಯಾಹ್ನದಿಂದ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ‍ಲಭ್ಯವಾಗಿದೆ.

ADVERTISEMENT

ರಾಜ್ಯದ 18 ಕೇಂದ್ರಗಳಲ್ಲಿ ಪರೀಕ್ಷೆಯನ್ನು ಆಯೋಜಿಸಲಾಗಿದ್ದು, ಪ್ರತಿಕೇಂದ್ರದಲ್ಲೂ ಜ್ಯೂನಿಯರ್ ವಿಭಾಗದ 245 ಹಾಗೂ ಸೀನಿಯರ್‌, ವಿದ್ವತ್ ವಿಭಾಗದ 737 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವಂತೆ ಎಲ್ಲ ಕೇಂದ್ರಗಳ ‍ಪ್ರಾಂಶುಪಾಲರಿಗೆ ಜುಲೈ 8ರಂದು ‌ಕುಲಪತಿ ಪ್ರೊ.ನಾಗೇಶ್‌ ವಿ.ಬೆಟ್ಟಕೋಟೆ ‍ಪತ್ರ ಬರೆದಿದ್ದರು. 

‘ಪರೀಕ್ಷೆ‌ಗೆ ವಾರವಿದ್ದರೂ ವೆಬ್‌ಸೈಟ್‌ನಲ್ಲಿ ಪ್ರವೇಶ ಪತ್ರ ಸಿಗದಿದ್ದರಿಂದ ಆದ ತೊಂದರೆ ಬಗ್ಗೆ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ. ವಿಶ್ವವಿದ್ಯಾಲಯದ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಸಂಗೀತ ಶಿಕ್ಷಕರು ಧ್ವನಿ ಎತ್ತಿದ್ದರು. 23ರಿಂದ ಆ ಗ್ರೂಪ್‌ನಲ್ಲಿ ಸಂದೇಶ ಕಳುಹಿಸದಂತೆ ಮಾಡಲಾಗಿತ್ತು’ ಎಂದು ನೃತ್ಯಗಾರ್ತಿ ಶೀತಲ್ ‘ಪ್ರಜಾವಾಣಿ’ ಜೊತೆ ಬೇಸರ ವ್ಯಕ್ತಪಡಿಸಿದರು.

‘ಏಪ್ರಿಲ್‌– ಮೇನಲ್ಲೇ ಪರೀಕ್ಷೆ ನಡೆದಿದ್ದರೆ ಮಕ್ಕಳಿಗೆ ಅನುಕೂಲವಾಗುತ್ತಿತ್ತು. ಇದೀಗ ಶಾಲೆಗಳು ನಡೆಯುತ್ತಿರುವಾಗ ಪರೀಕ್ಷೆ ಆಯೋಜಿಸಲಾಗಿದೆ. ಬೆಂಗಳೂರು, ಮುಂಬೈ ಸೇರಿದಂತೆ ವಿವಿಧೆಡೆ ನೆಲೆಸಿರುವವರು ದೂರದ ಊರಿನ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆಯುವಂತಾಗಿದೆ’ ಎಂದು ಹೇಳಿದರು.

‘ಆನ್‌ಲೈನ್‌ ತರಗತಿ ತೆಗೆದುಕೊಂಡಿರುವ ಅಹಮದಾಬಾದ್‌ನ ನನ್ನ ವಿದ್ಯಾರ್ಥಿಯೊಬ್ಬರು ಬೆಂಗಳೂರು ಹಾಗೂ ಮಂಗಳೂರಿಗೆ ಎರಡು ವಿಮಾನ ಟಿಕೆಟ್‌ ಕಾಯ್ದಿರಿಸಬೇಕಾಯಿತು. ವಿಶ್ವವಿದ್ಯಾಲಯ ವ್ಯವಸ್ಥಿತವಾಗಿ ಪರೀಕ್ಷೆಯನ್ನು ಆಯೋಜಿಸುತ್ತಿಲ್ಲ. ಒಂದೇ ಅವಧಿಯಲ್ಲಿ ಎರಡೆರಡು ಪರೀಕ್ಷೆಗಳಿವೆ’ ಎಂದರು.

ಬೆಂಗಳೂರಿನಲ್ಲಿ ಎರಡೇ ಕೇಂದ್ರ: ‘ಸಂಗೀತ ವಿಶ್ವವಿದ್ಯಾಲಯವು ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಕ್ಯಾಂಪಸ್‌ ಹಾಗೂ ದೇವನಹಳ್ಳಿ ಕೇಂದ್ರಗಳಲ್ಲಿ ಪರೀಕ್ಷೆ ನಡೆಸುತ್ತಿದೆ. ರಾಜ್ಯದ ವಿವಿಧೆಡೆಯ ಹೆಚ್ಚು ಅಭ್ಯರ್ಥಿಗಳು ಬೆಂಗಳೂರಿನಲ್ಲಿದ್ದಾರೆ. ಇನ್ನಷ್ಟು ಕೇಂದ್ರಗಳನ್ನು ತೆರೆಯಬೇಕಿತ್ತು. ಹತ್ತಿರದ ಕೇಂದ್ರ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬೇಕಿತ್ತು’ ಎಂದು ಶೀತಲ್‌ ಹೇಳಿದರು.

‘ಅರ್ಜಿ ಭರ್ತಿ ಮಾಡುವಾಗ ಕಾಯಂ ವಿಳಾಸವಷ್ಟೇ ಕೊಟ್ಟಿದ್ದರು. ಹೀಗಾಗಿ ಉಡುಪಿ ಮನೆ ವಿಳಾಸ ಕೊಟ್ಟಿದ್ದೆ. ಇದೀಗ ನನ್ನಿಬ್ಬರು ಮಕ್ಕಳಿಗೆ ಉಡುಪಿ ಕೇಂದ್ರ ಸಿಕ್ಕಿದೆ. ಮೂರು ದಿನದಲ್ಲಿ, ಅದೂ ಮಳೆಯಲ್ಲಿ ತೆರಳಬೇಕು’ ಎಂದರು.

‘ಮಲೆನಾಡಿನಲ್ಲಿ ಹೆಚ್ಚು ಮಳೆ, ಭೂ ಕುಸಿತ ಉಂಟಾಗುತ್ತಿದೆ. ನಾಲ್ಕು ದಿನವಿರುವಾಗ ಪ್ರಯಾಣ ತಯಾರಿ ಹೇಗೆ ಮಾಡುವುದು. ಮಡಿಕೇರಿ– ಸುಳ್ಯ ಭಾಗದಲ್ಲಿ ಭಾರಿ ಮಳೆ ಕಾರಣ ರಸ್ತೆ ಸಂಪರ್ಕ ಕಡಿತಗೊಂಡಿದೆ. ಪರೀಕ್ಷಾ ಕೇಂದ್ರಕ್ಕೆ ಹೋಗುವುದು ಹೇಗೆ’ ಎಂದು ವಿದ್ಯಾರ್ಥಿನಿ ಸ್ನೇಹಾ ಪ್ರಶ್ನಿಸಿದರು.

‘ವಿಶ್ವವಿದ್ಯಾಲಯದವರು ಉತ್ತರಿಸುತ್ತಿಲ್ಲ’

‘ಐವರು ಶಿಷ್ಯಂದಿರು ಪರೀಕ್ಷೆ ಬರೆಯುತ್ತಿದ್ದಾರೆ. ನಮಗೆ ಜ್ಞಾನಭಾರತಿ ಕೇಂದ್ರ ಹತ್ತಿರವಾಗುತ್ತಿತ್ತು. ಆದರೆ ದೂರದ ದೇವನಹಳ್ಳಿ ಕೇಂದ್ರಕ್ಕೆ ಹೋಗಬೇಕಾಗಿದೆ. ವಿಶ್ವವಿದ್ಯಾಲಯಕ್ಕೆ ಫೋನ್ ಮಾಡಿದರೆ ಸ್ವೀಕರಿಸುವುದಿಲ್ಲ’ ಎಂದು ಬೆಂಗಳೂರಿನ ದಾಸರಹಳ್ಳಿ 8ನೇ ಮೈಲಿಯಲ್ಲಿರುವ ಸಂಗೀತ ಶಿಕ್ಷಕಿ ಗಾಯತ್ರಿ ಅಳಲು ತೋಡಿಕೊಂಡರು. ‘ಮಕ್ಕಳೂ ಫೋನ್ ಮಾಡುತ್ತಿದ್ದಾರೆ. ಏನೂ ಪ್ರಯೋಜನವಾಗಿಲ್ಲ. ನನಗೆ ಕಾಲಿನ ಶಸ್ತ್ರಚಿಕಿತ್ಸೆಯಾಗಿದೆ. ಇಲ್ಲಿಂದ ದೇವನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೇಂದ್ರಕ್ಕೆ ಕರೆದೊಯ್ಯಲು ₹ 1500 ಟ್ಯಾಕ್ಸಿ ಬಾಡಿಗೆಯಾಗುತ್ತದೆ. ಪರೀಕ್ಷೆಯನ್ನು ವಿಶ್ವವಿದ್ಯಾಲಯವು ಸರಿಯಾಗಿ ಆಯೋಜಿಸಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.