ಮೈಸೂರು: ರಾಜ್ಯದ ಪ್ರಮುಖ ಮೃಗಾಲಯಗಳಲ್ಲಿ ಒಂದಾದ ಚಾಮರಾಜೇಂದ್ರ ಮೃಗಾಲಯವು ಪ್ರವಾಸಿಗರ ಅನುಕೂಲಕ್ಕಾಗಿ ವಾಟ್ಸ್‌ಆ್ಯಪ್ ಮೂಲಕ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವ ಯೋಜನೆ ಆರಂಭಿಸಿದೆ.
ಮೃಗಾಲಯಕ್ಕೆ ತೆರಳಬೇಕಾದವರು ಪ್ರಾಧಿಕಾರವು ನೀಡಿರುವ ಮೊ.ಸಂ 96866 68818ಗೆ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳಿಸಿದರೆ ಅಗತ್ಯ ಮಾಹಿತಿ ರವಾನಿಸಲಾಗುತ್ತದೆ. ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡಿದ ಬಳಿಕ ಪ್ರವೇಶ ಶುಲ್ಕ ಪಾವತಿಸುವ ವ್ಯವಸ್ಥೆ ಮಾಡಲಾಗಿದ್ದು, ನಂತರ ನೀವು ನೇರವಾಗಿ ಮೃಗಾಲಯಕ್ಕೆ ಪ್ರವೇಶಿಸಬಹುದು.
ಮೃಗಾಲಯದ ಪ್ರವೇಶ ದ್ವಾರ ಹಾಗೂ ಟಿಕಟ್ ಕೌಂಟರ್ ಬಳಿ ‘ಕ್ಯೂ ಆರ್ ಕೋಡ್’ ಅಳವಡಿಸಲಾಗಿದ್ದು, ಅದನ್ನು ಬಳಸಿಯೂ ಟಿಕೆಟ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ನಗರದ ಪ್ರವಾಸಿ ತಾಣಗಳಿಗೆ ದಿನ ಕಳೆದಂತೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಶಾಲಾ– ಕಾಲೇಜು ಪ್ರವಾಸದ ಬಸ್ಸುಗಳೂ ಇತ್ತ ಬರುತ್ತಿವೆ. ಇದರಿಂದ ಸಹಜವಾಗಿ ಟಿಕೆಟ್ ಕೌಂಟರ್‌ಗಳಲ್ಲಿ ಜನ ತುಂಬಿರುತ್ತಾರೆ. ಅದಕ್ಕಾಗಿ ಸಮಯ ವ್ಯಯಿಸುವ ಬಗ್ಗೆ ಪ್ರವಾಸಿಗರೂ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಡಿಜಿಟಲ್ ವ್ಯವಸ್ಥೆಯು ಹೆಚ್ಚು ಸಹಾಯಕವಾಗಿದೆ.
‘ಕಾಲೇಜುಗಳಿಂದ ಪ್ರವಾಸ ಬರುವವರಿಗೆ ಅನುಕೂಲ ಆಗಲೆಂಬ ಕಾರಣಕ್ಕೆ ವಾಟ್ಸ್‌ಆ್ಯಪ್ ನೋಂದಣಿ ವ್ಯವಸ್ಥೆ ಮಾಡಿದ್ದೆವು. ಹೊಸ ವ್ಯವಸ್ಥೆಗೆ ಪ್ರವಾಸಿಗರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿತ್ಯ ನೂರಕ್ಕಿಂತ ಹೆಚ್ಚು ನೋಂದಣಿಗಳು ನಡೆಯುತ್ತಿವೆ. ಮೆಸೇಜ್ ಮೂಲಕ ಟಿಕೆಟ್ ಪಡೆಯುವ ಬಗ್ಗೆ ಮಾಹಿತಿ ನೀಡುವುದರಿಂದ ಎಲ್ಲರೂ ಸರಳವಾಗಿ ಈ ವ್ಯವಸ್ಥೆಯ ಉಪಯೋಗ ಪಡೆಯಬಹುದು. ಟಿಕೆಟ್‌ಗಾಗಿ ಕಾಯುವ ಸಮಯ ಉಳಿತಾಯವಾಗಲಿದೆ’ ಎಂದು ಮೃಗಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಎಲ್ಲೆಡೆ ಡಿಜಿಟಲ್ ವ್ಯವಸ್ಥೆ ಬರುತ್ತಿರುವಾಗ ಪ್ರವಾಸಿ ತಾಣದಲ್ಲಿ ಟಿಕೆಟ್ ಕಾಯ್ದಿರಿಸಲು ಮಾಡಿರುವ ವ್ಯವಸ್ಥೆ ಅನುಕೂಲಕರವಾಗಿದೆ. ವಾಟ್ಸ್‌ಆ್ಯಪ್ ಮೂಲಕ ಟಿಕೆಟ್ ಕಾಯ್ದಿರಿಸುವ ವಿಷಯದ ಜೊತೆಗೆ ಮೃಗಾಲಯದ ಬಗೆಗಿನ ಮಾಹಿತಿ ಕುರಿತ ಪ್ರಶ್ನೆಗಳಿಗೂ ಉತ್ತರ ದೊರೆಯುವಂತಾದರೆ ಹೆಚ್ಚು ಅನುಕೂಲವಾಗುತ್ತದೆ’ ಎಂದು ಪ್ರವಾಸಿಗ ಚಂದನ್ ಪ್ರತಿಕ್ರಿಯಿಸಿದರು.
ವಾಟ್ಸ್‌ಆ್ಯಪ್ ಮೂಲಕ ಟಿಕೆಟ್ ಕಾಯ್ದಿರಿಸುವುದರಿಂದ ಸಮಯ ಉಳಿತಾಯವಾಗಿದೆ. ಪ್ರವಾಸಿ ತಾಣಗಳಲ್ಲಿ ಡಿಜಿಟಲ್ ವ್ಯವಸ್ಥೆ ಉಪಯೋಗಿಸಿದರೆ ಹೆಚ್ಚು ಅನುಕೂಲವಾಗುತ್ತದೆ.ಕಿಲನ್ ಕುಮಾರ್ ಪ್ರವಾಸಿಗ
‘5 ಲಕ್ಷಕ್ಕೂ ಹೆಚ್ಚು ಪ್ರವಾಸಿಗರ ಭೇಟಿ’
‘ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಬೇಸಿಗೆ ರಜೆ ಕಳೆಯಲು ಅತ್ಯಧಿಕ ಸಂಖ್ಯೆಯಲ್ಲಿ ಮೈಸೂರಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದು ಮೇ ತಿಂಗಳಲ್ಲಿ ಮೃಗಾಲಯಕ್ಕೆ 5 ಲಕ್ಷ ಹಾಗೂ ಕಾರಂಜಿ ಕೆರೆಗೆ 3 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಬೇಸಿಗೆಯ ಝಳ ಹೆಚ್ಚಿದರೂ ಪ್ರವಾಸಿಗರ ಭೇಟಿ ಹೆಚ್ಚಿತ್ತು. ಆದಾಯವೂ ಉತ್ತಮವಾಗಿದೆ’ ಎಂದು ಮೃಗಾಲಯ ಸಿಇಒ ಮಹೇಶ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.