ಹಂಪಾಪುರ: ಸ್ಟುಡಿಯೊ ಇಟ್ಟುಕೊಂಡು ನಷ್ಟ ಕಾಣುತ್ತಿದ್ದ ಛಾಯಾಗ್ರಾಹಕರೊಬ್ಬರು ಕ್ಯಾಮೆರಾ ಬಿಟ್ಟು ನೇಗಿಲು ಹಿಡಿದು ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಮಿಶ್ರ ಬೆಳೆ ಪದ್ಧತಿ ಮೂಲಕ ವಾರ್ಷಿಕ ₹ 8 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆ.
ಸಮೀಪದ ಎಂ.ಕನ್ನೇನಹಳ್ಳಿ ಗ್ರಾಮದ ಪುಟ್ಟಲಿಂಗಪ್ಪ (ಪ್ರಸಾದ್) ಅವರು ತಮ್ಮ 9 ಎಕರೆ ಪ್ರದೇಶದಲ್ಲಿ 400 ತೆಂಗಿನಗಿಡಗಳು, ರೇಷ್ಮೆ, ಬಾಳೆ, ತರಕಾರಿ, ದ್ವಿದಳ ಧಾನ್ಯಗಳನ್ನು ಮಿಶ್ರ ಬೆಳೆಯಾಗಿ ಬೆಳೆದಿದ್ದಾರೆ. ಆ ಮೂಲಕ ನಷ್ಟದ ಹಳಿಯಿಂದ ಲಾಭದ ಹಳಿಗೆ ಹೊರಳಿದ್ದಾರೆ.
ತೆಂಗಿನ ಮಧ್ಯೆ ಟ್ರಾಕ್ಟರ್‌ನಲ್ಲಿ ಉಳುಮೆ ಮಾಡಿದ್ದಾರೆ. ಮೂರು ಎಕರೆಯಲ್ಲಿ ಹಿಪ್ಪುನೇರಳೆ ಗಿಡಗಳನ್ನು 8 ಅಡಿ ಅಂತರದಲ್ಲಿ ಹಾಕಿರುವುದರಿಂದ ಮಧ್ಯದಲ್ಲಿ ಅಡಕೆ, ಅಲಸಂದೆ, ಕಡಲೆ, ಹೆಸರು, ಉದ್ದು ಇಷ್ಟೂ ಬೆಳೆಗಳನ್ನು ಹಾಕಿದ್ದಾರೆ.
ಬಾಳೆಯನ್ನು 3 ಎಕರೆ ತೆಂಗಿನ ತೋಟದಲ್ಲಿ ಹಾಕಿರುವ ಅವರು, ಅದರ ಮಧ್ಯೆ ತರಕಾರಿ ಹಾಗೂ ಹಸುಗಳಿಗಾಗಿ ಹುಲ್ಲು ಬೆಳೆಯುತ್ತಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಸಮೀಪದ ಗದ್ದಿಗೆಯಲ್ಲಿ ಕಳೆದ 30 ವರ್ಷಗಳಿಂದ ಸ್ಟುಡಿಯೊ ಇಟ್ಟುಕೊಂಡು ಫೋಟೊಗ್ರಫಿ ಮಾಡುತ್ತಿದ್ದೆ. ಡಿಜಿಟಲ್ ಬಂದ ಬಳಿಕ ಸ್ಪರ್ಧೆ ಹೆಚ್ಚಾಗಿ ಛಾಯಾಗ್ರಹಣದಿಂದ ಆದಾಯ ಕಡಿಮೆಯಾಯಿತು. ಮೊಬೈಲ್ ಹಿಡಿದವರು ಫೋಟೋ ಗ್ರಾಫರ್‌ಅನ್ನೇ ಸ್ಮೈಲ್ ಪ್ಲೀಸ್ ಎಂದು ಹೇಳಿ ಫೋಟೊ ತೆಗೆಯುವಂತಾಯಿತು. ಇದರಿಂದಾಗಿ ಕೃಷಿಯಲ್ಲಿ ಸಂಪೂರ್ಣ ತೊಡಗಿಸಿಕೊಂಡೆ’ ಎಂದು ತಮ್ಮ ಅನುಭವವನ್ನು ಬಿಚ್ಚಿಟ್ಟರು.
‘2 ರೀತಿಯ ಹಿಪ್ಪುನೇರಳೆ ಗಿಡಗಳಿಂದ 2 ಬ್ಯಾಚ್ ಆಗಿ ಮಾಡಿಕೊಂಡಿದ್ದು ಒಮ್ಮೆಗೆ 150 ರೇಷ್ಮೆಮೊಟ್ಟೆಗಳನ್ನು ತಂದು ಸಾಕುತ್ತೇನೆ. ಇದರಿಂದ 100ರಿಂದ 110 ಕೆಜಿವರೆಗೂ ಇಳುವರಿ ಬರುತ್ತಿದ್ದು, ಈಚೆಗೆ ₹ 600ರಂತೆ ಕೆ.ಜಿಗೆ ದರ ಸಿಕ್ಕಿದೆ. ಇದು ನಷ್ಟವಾಗದ ಹಾಗೆ ಕೈಹಿಡಿದಿದೆ’ ಎಂದು ಅವರು ತಿಳಿಸಿದರು.
‘ನಾನೂ ಹಾಗೂ ಪತ್ನಿ ಆರತಿ ಇಬ್ಬರೇ ಈ ರೇಷ್ಮೆ ಕೃಷಿ ಮಾಡುತ್ತಿದ್ದೇವೆ. ಸಂಪೂರ್ಣವಾಗಿ ತೊಡಗಿಸಿಕೊಂಡರೆ ನಷ್ಟವಾಗದು’ ಎಂದು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.