ಮೈಸೂರು: ಎಲ್ಲ ದುಡಿಯುವ ವರ್ಗಗಳಿಗೆ ₹ 18 ಸಾವಿರ ಕನಿಷ್ಠ ವೇತನ ನಿಗದಿಗೊಳಿಸುವಂತೆ ಒತ್ತಾಯಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಎದುರು ಸೇರಿದ ಎಐಟಿಯುಸಿ ಕಾರ್ಯಕರ್ತರು, ಬಿಜೆಪಿ ಸರ್ಕಾರವು ಬಂಡವಾಳ ಶಾಹಿಗಳ ಪರವಾಗಿ ಓಲೈಕೆ ರಾಜಕಾರಣ ಮಾಡುತ್ತಿದೆ. ಕಂಪನಿಗಳಿಗೆ ಕೋಟ್ಯಂತರ ರೂಪಾಯಿ ದೇಣಿಗೆ ನೀಡಿ ಕಾರ್ಮಿಕರಿಗೆ ವೇತನ ನೀಡಲು ಮೀನ ಮೇಷ ಎಣಿಸುತ್ತಿದೆ ಎಂದು ಆರೋಪಿಸಿ ಧಿಕ್ಕಾರ ಕೂಗಿದರು.
ಕಾರ್ಪೊರೇಟ್ ಕಂಪನಿಗಳ ಪರವಾದ ನೀತಿಗಳನ್ನು ಅನುಸರಿಸಿದರೆ ದೇಶಕ್ಕೆ ಅನುಕೂಲವಿಲ್ಲ. ಈ ಸತ್ಯ ಬಿಜೆಪಿಗೆ ಗೊತ್ತಿದ್ದೂ ಜನವಿರೋಧಿ ಚಟುವಟಿಕೆಯಲ್ಲಿ ತೊಡಗಿದೆ. ಇನ್ನು ಮುಂದಾದರೂ ಜನಪರವಾದ ನೀತಿಗಳನ್ನು ಅಳವಡಿಸಿಕೊಳ್ಳದೇ ಇದ್ದಲ್ಲಿ ಜನರು ದಂಗೆಯೇಳಬೇಕಾಗುತ್ತದೆ ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶೇಷಾದ್ರಿ ಎಚ್ಚರಿಸಿದರು.
2013ರ ಲೋಕಸಭಾ ಚುನಾವಣೆ ವೇಳೆ ಹಲವು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ತನ್ನ ಅಧಿಕಾರಾವಧಿಯಲ್ಲಿ ಜನವಿರೋಧಿ ನೀತಿ ಪ್ರದರ್ಶನ ಮಾಡಿತು. ಅಲ್ಲದೇ ಕಾರ್ಮಿಕರನ್ನು ಕಾಲ ಕಸದಂತೆ ನಡೆಸಿಕೊಂಡಿತು. ಕಾರ್ಮಿಕರನ್ನು ಗುಲಾಮರಂತೆ ನಡೆಸಿಕೊಂಡರೆ ದೇಶದ ಅಭಿವೃದ್ಧಿಗೆ ಮಾರಕ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕಾರ್ಮಿಕ ಕಾನೂನುಗಳ ಸುಧಾರಣೆ ಹೆಸರಿನಲ್ಲಿ ಬಂಡವಾಳಶಾಯಿಗಳನ್ನು ಓಲೈಸಲಾಗುತ್ತಿದೆ. ಕಾರ್ಪೊರೇಟ್ ವಲಯದ ಪರವಾರ ಕಾನೂನುಗಳಿಗೆ ತಿದ್ದುಪಡಿ ತರಬೇಕು. ಸಮರ್ಪಕ ಉದ್ಯೋಗ ನೀತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ರಾಜು, ಮುಖಂಡರಾದ ರೇವಣ್ಣ, ಶಿವಣ್ಣ, ರಾಮು, ಎಚ್.ಬಿ.ರಾಮಕೃಷ್ಣ, ಡಿ.ಸುರೇಶ್, ಬಸವರಾಜು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.