ADVERTISEMENT

ಎಐಯುಟಿಯುಸಿಯ 4ನೇ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 16:29 IST
Last Updated 26 ಅಕ್ಟೋಬರ್ 2024, 16:29 IST
ಮೈಸೂರಿನ ಪುರಭವನ ಆವರಣದಲ್ಲಿ ಶನಿವಾರ ಎಐಯುಟಿಯುಸಿ ನೇತೃತ್ವದಲ್ಲಿ ನಡೆದ 4ನೇ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದವರು – ಪ್ರಜಾವಾಣಿ ಚಿತ್ರ
ಮೈಸೂರಿನ ಪುರಭವನ ಆವರಣದಲ್ಲಿ ಶನಿವಾರ ಎಐಯುಟಿಯುಸಿ ನೇತೃತ್ವದಲ್ಲಿ ನಡೆದ 4ನೇ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದವರು – ಪ್ರಜಾವಾಣಿ ಚಿತ್ರ   

ಮೈಸೂರು: ದುಡಿಯುವ ಎಲ್ಲರಿಗೂ ಕಾಯಂ ಉದ್ಯೋಗ ನೀಡಬೇಕು, ₹35 ಸಾವಿರ ಕನಿಷ್ಠ ವೇತನ ನಿಗದಿಪಡಿಸಬೇಕು, ಕೆಲಸದ ಸಮಯವನ್ನು 8ರಿಂದ 12 ಗಂಟೆಗೆ ಏರಿಸುವ ಪ್ರಸ್ತಾವ ಕೈಬಿಡಬೇಕು ಎಂಬುದು ಸೇರಿ ವಿವಿಧ ಹಕ್ಕೊತ್ತಾಯದ ನಿರ್ಣಯಗಳನ್ನು ಶನಿವಾರ ಇಲ್ಲಿ ಆರಂಭವಾದ 4ನೇ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು.

ಎಐಯುಟಿಯುಸಿ ನೇತೃತ್ವದಲ್ಲಿ ಪುರಭವನದ ಮೈದಾನದಲ್ಲಿ ನಡೆದ ಬಹಿರಂಗ ಅಧಿವೇಶನವು ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಸರ್ಕಾರವನ್ನು ಒತ್ತಾಯಿಸಿತು.

ಗುತ್ತಿಗೆ ಕಾರ್ಮಿಕರ ಸೇವೆ ಕಾಯಂ ಮಾಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಅಂಗನವಾಡಿ, ಆಶಾ, ಅಕ್ಷರ ದಾಸೋಹ ಕಾರ್ಯಕರ್ತೆಯರೂ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಕಾರ್ಮಿಕರನ್ನೂ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿತು.

ADVERTISEMENT

ಹೊಸ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್‌) ಹಿಂಪಡೆದು, ಹಳೆ ಪಿಂಚಣಿ ವ್ಯವಸ್ಥೆಯನ್ನು (ಒಪಿಎಸ್‌) ಮರು ಜಾರಿಗೊಳಿಸಬೇಕು. ಜಿಲ್ಲೆಗೊಂದು ಇಎಸ್‌ಐ ಆಸ್ಪತ್ರೆ ತೆರೆಯಬೇಕು. ಹಿಂದಿನಂತೆ ಪ್ರತ್ಯೇಕ ಕಾರ್ಮಿಕ ನ್ಯಾಯಾಲಯ ಸ್ಥಾಪಿಸಿ ಕಾರ್ಮಿಕರ ವ್ಯಾಜ್ಯಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು ಎಂಬ ಒತ್ತಾಯವನ್ನು ಮಂಡಿಸಲಾಯಿತು.

ಬಾಂಗ್ಲಾ ಮಾದರಿ ಹೋರಾಟ:

ಉದ್ಘಾಟಿಸಿದ ಎಐಯುಟಿಯುಸಿ ಅಧ್ಯಕ್ಷ ಕೆ. ರಾಧಾಕೃಷ್ಣ ಮಾತನಾಡಿ, ‘ದೇಶದಲ್ಲಿನ 44 ಕಾರ್ಮಿಕ ಕಾನೂನುಗಳ ಪೈಕಿ ಈಗ 29 ಮಾತ್ರ ಉಳಿದಿವೆ. ಈ ಎಲ್ಲವನ್ನೂ ರದ್ದುಪಡಿಸಿ ಕೇವಲ 4 ಕಾರ್ಮಿಕ ಸಂಹಿತೆ ಜಾರಿಗೆ ಕೇಂದ್ರ ಸರ್ಕಾರ ಪ್ರಯತ್ನ ನಡೆಸಿದೆ. ಸಂಪತ್ತೆಲ್ಲ ಬಂಡವಾಳಶಾಹಿಗಳ ಕೈವಶ ಆಗುತ್ತಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಭಾರತದಲ್ಲೂ ಬಾಂಗ್ಲಾದೇಶ ಮಾದರಿ ಹೋರಾಟ ನಡೆಸಬೇಕಾದ ದಿನಗಳು ದೂರವೇನಿಲ್ಲ’ ಎಂದು ಎಚ್ಚರಿಸಿದರು.

‘ಜಾತಿ-ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವವರ ವಿರುದ್ಧ ನಿಲ್ಲಬೇಕು‌’ ಎಂದು ಕೋರಿದರು.

ಎಐಯುಟಿಯುಸಿ ಪ್ರಧಾನ ಕಾರ್ಯದರ್ಶಿ ಶಂಕರ್ ದಾಸ್‌ಗುಪ್ತ, ‘ದೇಶದ ಪ್ರಜಾಪ್ರಭುತ್ವ ಸಂದಿಗ್ಧ ಪರಿಸ್ಥಿತಿಯಲ್ಲಿದ್ದು, ಕಾರ್ಮಿಕ ಸಂಘಟನೆಗಳು ಒಗ್ಗೂಡಿ ಹೋರಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಡಿಸೆಂಬರ್‌ನಲ್ಲಿ ಭುವನೇಶ್ವರದಲ್ಲಿ ಅಖಿಲ ಭಾರತ ಮಟ್ಟದ ಕಾರ್ಮಿಕರ ಸಮ್ಮೇಳನ ಆಯೋಜಿಸಲಾಗಿದ್ದು, ವಿಶ್ವ ಕಾರ್ಮಿಕ ಒಕ್ಕೂಟಗಳ ಪ್ರತಿನಿಧಿಗಳೂ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ಎಐಯುಟಿಯುಸಿ ರಾಜ್ಯ ಘಟಕದ ಅಧ್ಯಕ್ಷ ಕೆ. ಸೋಮಶೇಖರ್, ರಾಜ್ಯ ಸೆಕ್ರೆಟೇರಿಯಟ್‌ ಸದಸ್ಯ ಚಂದ್ರಶೇಖರ್ ಮೇಟಿ, ರಾಜ್ಯ ಕಾರ್ಯದರ್ಶಿ ಕೆ. ಸೋಮಶೇಖರ್ ಯಾದಗಿರಿ, ಸ್ವಾಗತ ಸಮಿತಿ ಅಧ್ಯಕ್ಷ ಉಗ್ರನರಸಿಂಹೇಗೌಡ, ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ಕೆ. ಉಮಾ ಪಾಲ್ಗೊಂಡಿದ್ದರು.

ಸೂಕ್ತಿ ಮತ್ತು ಛಾಯಾಚಿತ್ರ ಪ್ರದರ್ಶನವನ್ನು ಸ್ವಾಗತ ಸಮಿತಿ ಗೌರವಾಧ್ಯಕ್ಷ ಕೆ. ಕಾಳಚನ್ನೇಗೌಡ ಉದ್ಘಾಟಿಸಿದರು.

ಇದಕ್ಕೂ ಮುನ್ನ, ನಂಜರಾಜ ಬಹದ್ದೂರ್‌ ಛತ್ರದಿಂದ ಪುರಭವನದವರೆಗೆ ಕಾರ್ಮಿಕರ ಮೆರವಣಿಗೆ ನಡೆಯಿತು.

ಬಾಂಗ್ಲಾದಲ್ಲಿ ಅಂಬಾನಿ ಅದಾನಿ ಕಡೆಯಿಂದ ಹೂಡಿಕೆ ಆಗಿದೆ. ಹೂಡಿಕೆಯನ್ನು ರಕ್ಷಿಸಲೆಂದೇ ಭಾರತ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಆಶ್ರಯ ನೀಡಿದೆ
ಕೆ. ರಾಧಾಕೃಷ್ಣ ಅಧ್ಯಕ್ಷ ಎಐಯುಟಿಯುಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.