ADVERTISEMENT

ಅಕ್ಕ ಸಾಗಿದ ಹಾದಿ, ಧೈರ್ಯ ಎಲ್ಲರಿಗೂ ಸ್ಫೂರ್ತಿ: ಡಾ.ಸುಧಾ ಮೂರ್ತಿ ಹೇಳಿಕೆ

ಇನ್ಫೋಸಿಸ್‌ ಫೌಂಡೇಷನ್‌ ಸಂಸ್ಥಾಪಕಿ ಡಾ.ಸುಧಾಮೂರ್ತಿ ಅಭಿಮತ

​ಪ್ರಜಾವಾಣಿ ವಾರ್ತೆ
Published 23 ಮೇ 2023, 13:59 IST
Last Updated 23 ಮೇ 2023, 13:59 IST
ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮತ್ತು ಕದಳಿ ಮಹಿಳಾ ವೇದಿಕೆ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಡಾ.ಸುಧಾಮೂರ್ತಿ ಉದ್ಘಾಟಿಸಿದರು. ಶಾರದಾ ಶಿವಲಿಂಗಸ್ವಾಮಿ, ಡಾ.ಇಂದುಮತಿ, ಮ.ಗು.ಸದಾನಂದಯ್ಯ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹೆಳವರಹುಂಡಿ ಸಿದ್ದಪ್ಪ ಇದ್ದರು –ಪ್ರಜಾವಾಣಿ ಚಿತ್ರ
ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮತ್ತು ಕದಳಿ ಮಹಿಳಾ ವೇದಿಕೆ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಡಾ.ಸುಧಾಮೂರ್ತಿ ಉದ್ಘಾಟಿಸಿದರು. ಶಾರದಾ ಶಿವಲಿಂಗಸ್ವಾಮಿ, ಡಾ.ಇಂದುಮತಿ, ಮ.ಗು.ಸದಾನಂದಯ್ಯ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹೆಳವರಹುಂಡಿ ಸಿದ್ದಪ್ಪ ಇದ್ದರು –ಪ್ರಜಾವಾಣಿ ಚಿತ್ರ   

ಮೈಸೂರು: ‘ಮಹಿಳೆಯರು ಧೈರ್ಯ ಕುಂದಿದಾಗ ಅಕ್ಕಮಹಾದೇವಿಯ ಸಾಧನೆ ಹಾದಿ ನೆನಪಿಸಿಕೊಳ್ಳಬೇಕು. 800 ವರ್ಷಗಳ ಹಿಂದೆ ತನ್ನ ಗುರಿ ಸಾಧಿಸಲು ಆಕೆ ಸಾಗಿದ ಹಾದಿ ಮತ್ತು ತೋರಿದ ಧೈರ್ಯ ನಮಗೆ ಸ್ಫೂರ್ತಿ ನೀಡುತ್ತದೆ’ ಎಂದು ಇನ್ಫೋಸಿಸ್‌ ಫೌಂಡೇಷನ್‌ ಸಂಸ್ಥಾಪಕಿ ಡಾ.ಸುಧಾ ಮೂರ್ತಿ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆಯು ಮಂಗಳವಾರ ಜೆಎಸ್‌ಎಸ್‌ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.

‘ಇನ್ಫೋಸಿಸ್‌ ಸಂಸ್ಥೆ ಕಟ್ಟಲು ನಿರ್ಧರಿಸಿದಾಗ ನನ್ನಲ್ಲಿ ಧೈರ್ಯವಿರಲಿಲ್ಲ. ಆ ವೇಳೆ ಅಕ್ಕಮಹಾದೇವಿಯ ವಚನಗಳಿಂದ ಸ್ಫೂರ್ತಿ ಪಡೆದೆ. ಧೈರ್ಯವು ನಮ್ಮ ಬದುಕಿನ ಹಾದಿಯನ್ನು ಬದಲಾಯಿಸಬಹುದು. ಆದ್ದರಿಂದ ಸಮಾಜದಲ್ಲಿ ಇತರರು ಏನು ತಿಳಿದುಕೊಳ್ಳುತ್ತಾರೋ ಎಂಬ ಅಂಜಿಕೆ ಬಿಟ್ಟು ನ್ಯಾಯಯುತ ಹಾದಿಯಲ್ಲಿ ಸಾಗಿದಾಗ ಗೆಲುವು ನಮ್ಮದಾಗುತ್ತದೆ. ಇಷ್ಟ ದೇವನನ್ನು ನಂಬದೆ ಎಷ್ಟು ಹಣ ಮಾಡಿದರೂ ಪ್ರಯೋಜನವಿಲ್ಲ ಎಂಬುದನ್ನು ಅಕ್ಕನ ವಚನಗಳು ಪ್ರತಿಪಾದಿಸುತ್ತವೆ’ ಎಂದರು.

ADVERTISEMENT

‘ಬದುಕಿನ ತಪ್ಪು, ಒಪ್ಪುಗಳ ಬಗ್ಗೆ ವಚನಗಳ ಮೂಲಕ ಸರಳವಾಗಿ ಜನರಿಗೆ ತಿಳಿಸುವ ಕೆಲಸವನ್ನು ಅಕ್ಕಮಹಾದೇವಿ ಮಾಡಿದ್ದಾರೆ. ಏಕಾಗ್ರತೆ, ಜೀವನದ ಏಳುಬೀಳಿನ ಹಾದಿ ತಿಳಿಯುವುದಕ್ಕಾಗಿ ವಚನಗಳನ್ನು ಅಭ್ಯಾಸ ಮಾಡಬೇಕು. ಅವು ಪಠ್ಯ ಪುಸ್ತಕಕ್ಕಿಂತ ಹೆಚ್ಚಿನ ಮಾಹಿತಿ ನೀಡುತ್ತವೆ. ಆದ್ದರಿಂದ ಮಕ್ಕಳಿಗೆ ವಚನಗಳನ್ನು ಹೇಳಿಕೊಡಬೇಕು. ಅವರ ಬದುಕಿನುದ್ದಕ್ಕೂ ಅವು ಬೆಂಗಾವಲಾಗಿ ನಿಲ್ಲುತ್ತವೆ’ ಎಂದು ಸಲಹೆ ನೀಡಿದರು.

ಈ ವೇಳೆ ಅಂಗವಿಕಲೆಯೊಬ್ಬರಿಗೆ ಗಾಲಿಕುರ್ಚಿ ಹಾಗೂ ಸಂಘಕ್ಕೆ ಸಹಾಯಧನ ವಿತರಿಸಲಾಯಿತು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಶ್ರಾಂತ ಕುಲಪತಿ ಡಾ.ಎಸ್‌.ಇಂದುಮತಿ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ನಗರಾಧ್ಯಕ್ಷ ಮ.ಗು.ಸದಾನಂದಯ್ಯ, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ ಇದ್ದರು.

‘ಸಂಸ್ಕೃತಿಯ ರಾಯಭಾರಿ ಮಹಿಳೆ’

‘ಮಹಿಳೆ ಸಂಸ್ಕೃತಿಯ ರಾಯಭಾರಿ. ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸಲು ಆಕೆಯಿಂದ ಮಾತ್ರ ಸಾಧ್ಯ. ನಮ್ಮ ಮನೆಯ ಪದ್ಧತಿಗಳನ್ನು ಮಕ್ಕಳಿಗೆ ಹೇಳಿ ಕೊಟ್ಟು ಅವರನ್ನು ದೇಶದ ಶಕ್ತಿಗಳಾಗಿ ಬೆಳೆಸಬೇಕಿದೆ. ಸುತ್ತೂರು ಮಠದ ಸ್ವಾಮೀಜಿ 12ನೇ ಶತಮಾನದಲ್ಲಿ ಬಸವಣ್ಣ ಮಾಡಿದಂತೆ ಸಮಾಜಕ್ಕೆ ದಾರಿ ತೋರಿಸುವ ಕಾರ್ಯ ಮಾಡುತ್ತಿದ್ದಾರೆ. ಅವರ ಪ್ರೇರಣಾ ಮಾತುಗಳನ್ನು ಅನುಸರಿಸಿ ಪರಂಪರೆಯನ್ನು ಉಳಿಸುವ ಕೆಲಸ ಮಾಡೋಣ. ಕಠಿಣ ಪರಿಶ್ರಮದ ಜೊತೆಗೆ ಗುರುವಿನ ಮಾರ್ಗದರ್ಶನವಿದ್ದಾಗ ಸಾಧನೆಯ ಮೆಟ್ಟಿಲು ಏರಲು ಸಾಧ್ಯ’ ಎಂದು ಡಾ.ಸುಧಾ ಮೂರ್ತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.