ADVERTISEMENT

ಎಸ್‌ಸಿ, ಎಸ್‌ಟಿ, ಒಬಿಸಿಗಳೆಲ್ಲಾ ಬೌದ್ಧರು: ಜ್ಞಾನಪ್ರಕಾಶ ಸ್ವಾಮೀಜಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2024, 2:58 IST
Last Updated 1 ನವೆಂಬರ್ 2024, 2:58 IST
ಮೈಸೂರಿನ ರಮಾಗೋವಿಂದ ರಂಗಮಂದಿರದಲ್ಲಿ ಬುಧವಾರ ನಡೆದ 68ನೇ ಧಮ್ಮ ದೀಕ್ಷಾ ವರ್ಷಾಚರಣೆಯಲ್ಲಿ ವಿವಿಧ ಜಿಲ್ಲೆಗಳ ಸಾಧಕರಿಗೆ ‘ರಾಜ್ಯಮಟ್ಟದ ಧಮ್ಮ ಸೇವಾರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಚಿಕ್ಕ ಜವರಪ್ಪ, ಎ.ಆರ್.ಕಾಂತರಾಜು, ಡಿ.ರವಿಶಂಕರ್‌, ಜ್ಞಾನಪ್ರಕಾಶ ಸ್ವಾಮೀಜಿ, ಬಿ.ಹರ್ಷವರ್ಧನ್‌, ಎಚ್.ವಾಸು, ಲಕ್ಷ್ಮಿರಾಮ್‌ ಭಾಗವಹಿಸಿದ್ದರು
ಮೈಸೂರಿನ ರಮಾಗೋವಿಂದ ರಂಗಮಂದಿರದಲ್ಲಿ ಬುಧವಾರ ನಡೆದ 68ನೇ ಧಮ್ಮ ದೀಕ್ಷಾ ವರ್ಷಾಚರಣೆಯಲ್ಲಿ ವಿವಿಧ ಜಿಲ್ಲೆಗಳ ಸಾಧಕರಿಗೆ ‘ರಾಜ್ಯಮಟ್ಟದ ಧಮ್ಮ ಸೇವಾರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಚಿಕ್ಕ ಜವರಪ್ಪ, ಎ.ಆರ್.ಕಾಂತರಾಜು, ಡಿ.ರವಿಶಂಕರ್‌, ಜ್ಞಾನಪ್ರಕಾಶ ಸ್ವಾಮೀಜಿ, ಬಿ.ಹರ್ಷವರ್ಧನ್‌, ಎಚ್.ವಾಸು, ಲಕ್ಷ್ಮಿರಾಮ್‌ ಭಾಗವಹಿಸಿದ್ದರು   

ಮೈಸೂರು: ‘ಕಲ್ಲಿನೊಳಗೆ ದೇವರಿದ್ದಾನೆ ಎಂದು ನಂಬಿಸುವ ಧರ್ಮ ಒಂದೆಡೆ ಇದ್ದರೆ, ಮನುಷ್ಯನೊಳಗೆ ಮನುಷ್ಯ ಇದ್ದಾನೆ ಎಂದು ಸಾಬೀತುಪಡಿಸಿದ ಬುದ್ಧನ ಧಮ್ಮ ಇನ್ನೊಂದೆಡೆ ಇದೆ. ಕಲ್ಲೊಳಗಿನ ದೇವರು ವಿಜೃಂಭಿಸಿದರೆ, ಮನುಷ್ಯ ಕುಗ್ಗುತ್ತಿದ್ದಾನೆ’ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ತನುಮನ ಸಂಸ್ಥೆಯಿಂದ 68ನೇ ಧಮ್ಮ ದೀಕ್ಷಾ ವರ್ಷಾಚರಣೆ ಪ್ರಯುಕ್ತ ಇಲ್ಲಿನ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಬುಧವಾರ ನಡೆದ ಧಮ್ಮ ಸಂಗೀತೋತ್ಸವ, ರಾಜ್ಯಮಟ್ಟದ ಧಮ್ಮ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.

‘ಮನುಷ್ಯ ಒಳಗಿನಿಂದ ವಿಕಾಸವಾಗಬೇಕು. ಮೊಟ್ಟೆ ಒಳಗಿನಿಂದ ಒಡೆದರೆ ಮಾತ್ರ ಜೀವನ. ಇದುವೇ ಬುದ್ಧನ ಧಮ್ಮ, ಪ್ರೀತಿ ಮತ್ತು ಪ್ರಜ್ಞೆಯನ್ನು ಹೊಂದಿರುವ ಸದ್ಧಮ್ಮ’ ಎಂದು ಪ್ರತಿಪಾದಿಸಿದರು.

ADVERTISEMENT

‘ಸ್ವಾಮಿ ವಿವೇಕಾನಂದರು ಈ ದೇಶದ ಶೇ 66ರಷ್ಟು ಜನ ಬೌದ್ಧರು ಎಂದು ಹೇಳಿದ್ದರು. ಇಲ್ಲಿ ಹಿಂದೂಗಳು, ಮುಸ್ಲಿಮರು, ಕ್ರೈಸ್ತ, ಜೈನರಿದ್ದರು. ಅವರೆಲ್ಲರೂ ಈಗಲೂ ಇದ್ದಾರೆ. ಆದರೆ, ಬೌದ್ಧರೆಲ್ಲಿ ಹೋದರು?, ಈ ದೇಶದ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳೇ ಬೌದ್ಧ ಧಮ್ಮಕ್ಕೆ ಸೇರಿದವರು’ ಎಂದು ಹೇಳಿದರು.

‘ಇಂತಹ ಬುದ್ಧ ಧಮ್ಮವನ್ನು 500 ಅಡಿ ಆಳಕ್ಕೆ ತಳ್ಳಿ ಮುಚ್ಚಿದ್ದಾರೆ. ಹಿಂದೆ 84,000 ಸ್ಥೂಪಗಳಿದ್ದವು. ಇಂದು ಬಹುತೇಕ ಎಲ್ಲವೂ ನಾಶವಾಗಿವೆ. ಅಂಥ ಧಮ್ಮಕ್ಕೆ ಮತ್ತೆ ಚೈತನ್ಯ ನೀಡಿದ್ದು ಬಿ.ಆರ್.ಅಂಬೇಡ್ಕರ್’ ಎಂದರು.

‘ಇಂದು ಬೆಂಕಿಯನ್ನು ಆರಿಸುವ ಧರ್ಮ ಬೇಕಿದೆ. ನಮ್ಮ ದೇಶದ ಪ್ರಧಾನಿಯೇ ‘ನಾವು ಯುದ್ಧದ ಭೂಮಿಯಿಂದ ಬಂದಿಲ್ಲ, ಬುದ್ಧ ಭೂಮಿಯಿಂದ ಬಂದಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ. ಸಾಮ್ರಾಟ್ ಅಶೋಕ ಕ್ರಿಸ್ತ ಪೂರ್ವದಲ್ಲಿ ಆರಂಭಿಸಿದ್ದ ದೀಪಾವಳಿಗೆ ಹೊಸ ಕಥೆ ಕಟ್ಟಲಾಗಿದೆ. ನಮ್ಮ ಚರಿತ್ರೆಯನ್ನೇ ತಿರುಚಿ ಕಲ್ಲಿನೊಳಗಿನ ದೇವರನ್ನು ವಿಜೃಂಭಿಸುವ ಮನುಸ್ಮೃತಿ ಹಾರಾಡುತ್ತಿದ್ದು, ಬುದ್ಧನ ತತ್ವ ಪಾಲನೆ ಮಾಡುವ ಅನಿವಾರ್ಯವಿದೆ’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಿ.ರವಿಶಂಕರ್‌ ಮಾತನಾಡಿ, ‘ದೇಶದ ಜನರು ನೆಮ್ಮದಿಯಿಂದ ಜೀವನ ಸಾಗಿಸಲು ಅಗತ್ಯ ವಾತಾವರಣ ಕಲ್ಪಿಸಿದವರು ಬಿ.ಆರ್.ಅಂಬೇಡ್ಕರ್. ಸಂವಿಧಾನದ ಮೂಲಕ, ಧಮ್ಮ ದೀಕ್ಷೆಯ ಮೂಲಕ ಶೋಷಿತರಿಗೆ ಧ್ವನಿ ನೀಡಿದ ಮಹಾನ್ ವ್ಯಕ್ತಿ’ ಎಂದರು.

ಗಾಯಕ ಲಕ್ಷ್ಮಿರಾಮ್‌ ತಂಡದಿಂದ ಧಮ್ಮ ಸಂಗೀತೋತ್ಸವ ನಡೆಯಿತು. ಎಪಿಎಂಸಿ ಮಾಜಿ ಉಪಾಧ್ಯಕ್ಷ ಚಿಕ್ಕ ಜವರಪ್ಪ 31 ಸಾಧಕರಿಗೆ ಧಮ್ಮ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಹರ್ಷವರ್ಧನ್‌, ಅಶೋಕಪುರಂ ಮುಖಂಡ ಎಚ್.ವಾಸು, ಕೆಪಿಸಿಸಿ ಕಾನೂನು ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಆರ್.ಕಾಂತರಾಜು ಪಾಲ್ಗೊಂಡರು.

ಅಂಬೇಡ್ಕರ್‌ ಅವರ ಸಂವಿಧಾನ ಇಲ್ಲದಿದ್ದರೆ ಇಂದಿಗೂ ಕೆಲ ಜಾತಿಗಳು ಜೀತದಲ್ಲಿರಬೇಕಿತ್ತು
ಡಿ.ರವಿಶಂಕರ್‌ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.