ADVERTISEMENT

ಹುಣಸೂರು: ಅನುದಾನವಿದ್ದರೂ ವಿದ್ಯಾರ್ಥಿನಿ ನಿಲಯವಿಲ್ಲ

ಹುಣಸೂರು ಉಪವಿಭಾಗದ ಎಸ್.ಸಿ, ಎಸ್‌.ಟಿ ದೌರ್ಜನ್ಯ ಪ್ರತಿಬಂಧಕ ಜಾಗೃತಿ ಸಭೆ; ವಿವಿಧ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 15:32 IST
Last Updated 9 ಜುಲೈ 2024, 15:32 IST
ಹುಣಸೂರು ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಉಪವಿಭಾಗಾಧಿಕಾರಿ (ಪ್ರಭಾರ) ವೆಂಕಟರಾಜು ಅವರ ಅಧ್ಯಕ್ಷತೆಯಲ್ಲಿ ಎಸ್.ಸಿ ಮತ್ತು ಎಸ್ಟಿ ದೌರ್ಜನ್ಯ ಪ್ರತಿಬಂಧಕ ಜಾಗೃತಿ ಸಭೆ ನಡೆಯಿತು
ಹುಣಸೂರು ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಉಪವಿಭಾಗಾಧಿಕಾರಿ (ಪ್ರಭಾರ) ವೆಂಕಟರಾಜು ಅವರ ಅಧ್ಯಕ್ಷತೆಯಲ್ಲಿ ಎಸ್.ಸಿ ಮತ್ತು ಎಸ್ಟಿ ದೌರ್ಜನ್ಯ ಪ್ರತಿಬಂಧಕ ಜಾಗೃತಿ ಸಭೆ ನಡೆಯಿತು   

ಹುಣಸೂರು: ಪರಿಶಿಷ್ಟ ಜಾತಿ ಬಾಲಕಿಯರ ವಸತಿ ನಿಲಯ ನಿರ್ಮಾಣಕ್ಕೆ 2019ರಲ್ಲಿ ಅನುದಾನ ಬಿಡುಗಡೆಯಾಗಿದ್ದರೂ ನಿವೇಶನ ಗುರುತಿಸುವಲ್ಲಿ ಸಂಬಂಧಿಸಿದ ಇಲಾಖೆ ವಿಫಲವಾಗಿದೆ ಎಂದು ಎಚ್.ಡಿ.ಕೋಟೆ ತಾಲ್ಲೂಕಿನ ಎಸ್.ಸಿ ಮತ್ತು ಎಸ್‌.ಟಿ ದೌರ್ಜನ್ಯ ಪ್ರತಿಬಂಧಕ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಕ್ಯಾತನಹಳ್ಳಿ ನಾಗರಾಜ್ ಸಭೆ ಗಮನ ಸೆಳೆದರು.

ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಇದರಿಂದಾಗಿ ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಬಾಲಕಿಯರ ವ್ಯಾಸಂಗಕ್ಕೆ ಹಿನ್ನಡೆಗಾಗಿದೆ. ವಿದ್ಯಾರ್ಥಿನಿಯರು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ’ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಉಪವಿಭಾಗಾಧಿಕಾರಿ ವೆಂಕಟರಾಜು (ಪ್ರಭಾರ) ಉತ್ತರಿಸಿ, ಮುಂದಿನ ಆಗಸ್ಟ್ ಅಂತ್ಯದೊಳಗಾಗಿ ಪಟ್ಟಣ ವ್ಯಾಪ್ತಿಯಲ್ಲಿ ನಿವೇಶನ ಗುರುತಿಸಿ ಮುಂದಿನ ಕ್ರಮಕೈಗೊಳ್ಳುವಂತೆ ತಹಶೀಲ್ದಾರ್ ಶ್ರೀನಿವಾಸ್‌ಗೆ ಸೂಚಿಸಿದರು.

ADVERTISEMENT

‘ಅಸ್ಪೃಶ್ಯತೆ ನಿವಾರಣೆ ಜನ ಜಾಗೃತಿ ಅಭಿಯಾನಕ್ಕೆ ಈ ಹಿಂದೆ ‘ಕಮ್ಮಟ’ ಆರಂಭಿಸಲಾಗಿತ್ತು. ಒಂದೆರಡು ಯಶಸ್ವಿಯಾಗಿ ನಡೆದು ಸ್ಥಗಿತಗೊಂಡಿದೆ’ ಎಂದು ಸಮಿತಿ ಸದಸ್ಯ ನಿಂಗರಾಜ್ ಮಲ್ಲಾಡಿ ಹೇಳಿದರು. ಉಪವಿಭಾಗಾಧಿಕಾರಿ ಉತ್ತರಿಸಿ, ‘ಕಮ್ಮಟಗಳಿಂದ ಜಾಗೃತಿಗೊಳಿಸಲು ಸಾಧ್ಯವೇ ? ಮೇಲ್ವರ್ಗದ ಜನರ ಮನಸ್ಸು ಗೆಲ್ಲುವ ಕೆಲಸ ಮಾಡಬೇಕು’ ಎಂದರು.

ಇದಕ್ಕೆ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಗೂ ಸಮಿತಿ ಸದಸ್ಯ ಹೊಸೂರು ಕುಮಾರ್ ಪ್ರತಿಕ್ರಿಯಿಸಿ, ‘ಕಮ್ಮಟದಿಂದ ಜಾಗೃತಗೊಂಡ ದೊಡ್ಡಹೆಜ್ಜೂರು ಗ್ರಾಮಸ್ಥರು ಗ್ರಾಮದ ಜಾತ್ರೆಯಲ್ಲಿ ದಲಿತ ಸಮುದಾಯ ಭಾಗವಹಿಸಲು ಸಹಕಾರ ನೀಡಿದ್ದರು’ ಎಂದು ಜ್ಞಾಪಿಸಿದರು.

ಸ್ಮಶಾನ: ‘ಗ್ರಾಮಗಳಲ್ಲಿ ದಲಿತರಿಗೆ ಪ್ರತ್ಯೇಕವಾದ ಸ್ಮಶಾನ ನಿರ್ಮಿಸಿ ಅಭಿವೃದ್ಧಿಗೊಳಿಸಲು ಅಧಿಕಾರಿಗಳ ಇಚ್ಚಾಶಕ್ತಿ ಕೊರತೆ ಕಾಣುತ್ತಿದೆ’ ಎಂದು ಉಪವಿಭಾಗಾಧಿಕಾರಿ ತರಾಟೆಗೆ ತೆಗೆದುಕೊಂಡರು. ‘ತಾಲ್ಲೂಕಿನ 211 ಗ್ರಾಮಗಳಲ್ಲಿ ಕೇವಲ 88 ಗ್ರಾಮಗಳಲ್ಲಿ ಸ್ಮಶಾನಗಳನ್ನು ಅಭಿವೃದ್ಧಿಪಡಿಸಿ ಪಂಚಾಯಿತಿಗೆ ಹಸ್ತಾಂತರಿಸಲಾಗಿದೆ. ಈ ವಿಚಾರದಲ್ಲಿ ಉಪವಿಭಾಗವೂ ಅತ್ಯಂತ ಕಳಪೆ ಸಾಧನೆ ತೋರಿದೆ’ ಎಂದು ಆಕ್ಷೇಪಿಸಿದರು.

ಕಟ್ಟೆಮಳಲವಾಡಿ ಗ್ರಾಮದ ಸ್ಮಶಾನಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲಿಸಲು ಶನಿವಾರ ಗ್ರಾಮಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು.

‘ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಗ್ರಾಮದಲ್ಲಿ 84 ಕುಟುಂಬಗಳು ಮನೆ ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಈ ನಿವಾಸಿಗರಿಗೆ ದಾಖಲೆ ಪತ್ರ ನೀಡದೆ ಕಾನೂನು ಸವಾಲು ಎದುರಿಸುವಂತಾಗಿದೆ’ ಎಂದು ನಿಂಗರಾಜ್ ಮಲ್ಲಾಡಿ ಹೇಳಿದರು. ಈ ಸಂಬಂಧ ಉಪವಿಭಾಗಾಧಿಕಾರಿ ಉತ್ತರಿಸಿ, ‘ಜುಲೈ 10ರಂದು ಸ್ಥಳಕ್ಕೆ ದಾಖಲಾತಿ ಸಮೇತ ಭೇಟಿ ನೀಡಿ ಸ್ಥಳಪರಿಶೀಲಿಸಿ ಸಮಸ್ಯೆಗೆ ಅಂತ್ಯ ಹಾಡುತ್ತೇನೆ’ ಎಂದು ತಿಳಿಸಿದರು.

ಸಭೆಯಲ್ಲಿ ಉಪವಿಭಾಗದ ತಹಶೀಲ್ದಾರ್ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಅನೇಕ ಗ್ರಾಮಗಳಲ್ಲಿ ಸ್ಮಶಾನವಿಲ್ಲ; ಆಕ್ರೋಶ ಮನೆ ದಾಖಲೆ ಪತ್ರಕ್ಕೆ ಆಗ್ರಹ ಅಸ್ಪೃಶ್ಯತೆ ನಿವಾರಣೆ; ಜಾಗೃತಿ ಮುಂದುವರಿಸಿ

ತಾಲ್ಲೂಕಿನ 211 ಗ್ರಾಮಗಳಲ್ಲಿ 167 ಗ್ರಾಮದಲ್ಲಿ ಸ್ಮಶಾನಕ್ಕೆ ಭೂಮಿ ಗುರುತಿಸಲಾಗಿದ್ದು 88 ಸ್ಮಶಾನಗಳಷ್ಟೇ ಅಭಿವೃದ್ಧಿಯಾಗಿದೆ. ಈ ಸಾಧನೆ ತೃಪ್ತಿಕರವಾಗಿಲ್ಲ

-ವೆಂಕಟರಾಜು ಉಪವಿಭಾಗಾಧಿಕಾರಿ (ಪ್ರಭಾರ)

ಮದ್ಯದಂಗಡಿ: ಪರ ವಿರೋಧ ಚರ್ಚೆ

‘ಕಟ್ಟೆಮಳಲವಾಡಿ ಗ್ರಾಮದಲ್ಲಿ ಹೊಸ ಮದ್ಯದಂಗಡಿಗೆ ವಿರೋಧವಿದ್ದರೂ ಅಬಕಾರಿ ಇಲಾಖೆ ಹೊಸದಾಗಿ ಪರವಾನಿಗೆ ನೀಡಿದೆ. ಈಗಿರುವ ಅಂಗಡಿಯಿಂದಲೇ ದುಡಿಯುವ ಕೈಗಳು ಮದ್ಯ ವ್ಯಸನಿಗರಾಗಿದ್ದಾರೆ. ಸಂಸಾರ ಬೀದಿ ಪಾಲಾಗುತ್ತಿದೆ’ ಎಂದು ನಿಂಗರಾಜ್ ಮಲ್ಲಾಡಿ ಆಕ್ರೋಶ ವ್ಯಕ್ತಪಡಿಸಿದರು. ‘ಗ್ರಾಮದಲ್ಲಿ 15 ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು ಇಲಾಖೆಗೆ ಮಾಹಿತಿ ನೀಡಿದರೆ ಮಾಹಿತಿದಾರರ ಹೆಸರು ಬೆಳಕಿಗೆ ಬರುತ್ತಿದೆ. ಅಕ್ರಮ ಮಾರಾಟ ನಿಯಂತ್ರಣಕ್ಕೆ ಅಬಕಾರಿ ಮತ್ತು ಕಂದಾಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಬೇಕು’ ಎಂದು ಆಗ್ರಹಿಸಿದರು. ಈ ಮಧ್ಯೆ ಧ್ವನಿಯೆತ್ತಿದ ಕಟ್ಟೆಮಳಲವಾಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಿಬ್ಬರು ‘ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಮದ್ಯದಂಗಡಿ ಬೇಕಿದೆ. ಹೆಚ್ಚಿನ ಬೇಡಿಕೆ ಇರುವುದರಿಂದಲೇ ಮನೆಗಳಲ್ಲಿ ಅಕ್ರಮ ಮಾರಾಟ ನಡೆದಿದ್ದು ಹೆಚ್ಚುವರಿ ಅಂಗಡಿ ತೆರೆಯಬೇಕು’ ಎಂದು ಒತ್ತಾಯಿಸಿದರು. ಅಬಕಾರಿ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನಸ್ವಾಮಿ ಉತ್ತರಿಸಿ ‘ಇಲಾಖೆ ಆದೇಶದಂತೆ ತೆರೆಯಬೇಕಾಗಿದೆ. ಪರವಾನಿಗೆ ಸೇರಿದಂತೆ ಇತರ ಎಲ್ಲ ಕ್ರಮಗಳನ್ನು ನಿಯಮಾನುಸಾರ ತೆಗೆದುಕೊಳ್ಳಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.