ADVERTISEMENT

ಮೈಸೂರು: ಈ ಅಂಬೇಡ್ಕರ್‌ ಜಯಂತಿಗೂ ಇಲ್ಲ ‘ಭವನ’

ಟೆಂಡರ್‌ ‍ಪ್ರಕ್ರಿಯೆ ಆರಂಭ, ಪೂರ್ಣಗೊಳ್ಳಲು 11 ತಿಂಗಳು ಬೇಕು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 7:15 IST
Last Updated 8 ಫೆಬ್ರುವರಿ 2024, 7:15 IST
ಮೈಸೂರಿನಲ್ಲಿ ಅಂಬೇಡ್ಕರ್‌ ಭವನದ ಕಾಮಗಾರಿ ಪೂರ್ಣಗೊಂಡಿಲ್ಲ
ಮೈಸೂರಿನಲ್ಲಿ ಅಂಬೇಡ್ಕರ್‌ ಭವನದ ಕಾಮಗಾರಿ ಪೂರ್ಣಗೊಂಡಿಲ್ಲ   

ಮೈಸೂರು: ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನವು ಈ ಬಾರಿಯ ಅವರ ಜಯಂತಿ (ಏ.14)ಗೆ ಸಿದ್ಧಗೊಳ್ಳುವ ಸಾಧ್ಯತೆ ಇಲ್ಲ.

ಇಲ್ಲಿನ ದಿವಾನ್ಸ್‌ ರಸ್ತೆ ಬಳಿಯ ದೇವರಾಜ ಪೊಲೀಸ್ ಠಾಣೆ ಸಮೀಪದಲ್ಲಿ ಬಿ.ಆರ್.ಅಂಬೇಡ್ಕರ್ ಭವನದ ಸಿವಿಲ್ ಕಾಮಗಾರಿಯನ್ನು ₹ 20.66 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಉಳಿಕೆ ಕಾಮಗಾರಿಗಳು ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದವು. ಅವುಗಳನ್ನು ಪೂರ್ಣಗೊಳಿಸಲು ₹19 ಕೋಟಿಗೆ ಸರ್ಕಾರವು ಡಿಸೆಂಬರ್‌ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸಲು ಸೂಚಿಸಲಾಗಿದೆ. ಆದರೆ, ಕಾಮಗಾರಿ ಪೂರ್ಣಗೊಳಿಸಲು ಕನಿಷ್ಠ 11 ತಿಂಗಳುಗಳಾದರೂ ಬೇಕಾಗುತ್ತದೆ ಎಂದು ಹೇಳಲಾಗಿದೆ. ಆದ್ದರಿಂದ ದಲಿತ ಸಂಘಟನೆಗಳು ಹಾಗೂ ‘ಬಹುಜನರ’ ಬೇಡಿಕೆಯಂತೆ ಈ ಬಾರಿ ಆ ಭವನದಲ್ಲಿ ಸಂವಿಧಾನ ಶಿಲ್ಪಿಯ ಜಯಂತಿ ಆಚರಿಸುವುದು ಸಾಧ್ಯವಾಗುವುದಿಲ್ಲ ಎಂಬ ಸ್ಥಿತಿ ಇದೆ.

ADVERTISEMENT

ಟೆಂಡರ್‌ ಪ್ರಕ್ರಿಯೆ: ಮೈಸೂರಿನವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಕಾಳಜಿ ವಹಿಸಿದ ಪರಿಣಾಮ ಅನುದಾನ ಬಿಡುಗಡೆಗೆ ಅನುಮೋದನೆ ಸಿಕ್ಕಿದೆ. ಆದರೆ, ಟೆಂಡರ್‌ ಪ್ರಕ್ರಿಯೆ ಮುಗಿಯದೇ ಕಾಮಗಾರಿ ಆರಂಭಿಸಲಾಗದು. ಹೀಗಾಗಿ, ಕಾಮಗಾರಿ ಆರಂಭಕ್ಕೇ ಇನ್ನೂ ಹಲವು ದಿನಗಳು ಬೇಕಾಗಲಿವೆ!

‘ಅನುದಾನ ಒದಗಿಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತ ಹಿನ್ನೆಲೆಯಲ್ಲಿ ಟೆಂಡರ್‌ ಆಹ್ವಾನ ಪ್ರಕ್ರಿಯೆ ಆರಂಭಿಸಲಾಗಿದೆ. ಅತ್ಯಂತ ಕಡಿಮೆ ಕೋಟ್ ಮಾಡಿದವರಿಗೆ ಕಾಮಗಾರಿ ವಹಿಸಲಾಗುವುದು. ಪ್ರಾಧಿಕಾರವೇ ಅನುಷ್ಠಾನ ಏಜೆನ್ಸಿಯಾಗಿದೆ. ಹನ್ನೊಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಟೆಂಡರ್‌ನಲ್ಲಿ ಪ್ರಸ್ತಾಪಿಸಲಾಗಿದೆ’ ಎಂದು ಮುಡಾ ಆಯುಕ್ತ ಜಿ.ಟಿ. ದಿನೇಶ್‌ಕುಮಾರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಇಲ್ಲಿ ಅಕೌಸ್ಟಿಕ್‌ (ಧ್ವನಿ ಮತ್ತು ಬೆಳಕಿನ ವ್ಯವಸ್ಥೆ) ಹಾಗೂ ಆಸನಗಳ ವ್ಯವಸ್ಥೆ, ಗ್ಯಾಪ್‌ಗಳಲ್ಲಿ ಗೋಡೆ ನಿರ್ಮಾಣ, ಪ್ಲಾಸ್ಟರಿಂಗ್ ಹಾಗೂ ಸುಣ್ಣ ಬಣ್ಣ ಮಾಡುವುದು, ಎ.ಸಿ. ಚಿಲ್ಲಿಂಗ್ ಕೊಠಡಿ, ಸಂಪ್‌, ಪಂಪ್‌ಹೌಸ್, ಚರಂಡಿ, ವಿದ್ಯುತ್ ಕೊಠಡಿ, ಒಳಚರಂಡಿ, ಆಂತರಿಕ ರಸ್ತೆಗಳು, ಮಳೆ ನೀರು ಸಂಗ್ರಹ ವ್ಯವಸ್ಥೆ, ಭೂವಿನ್ಯಾಸ ಮಾಡುವುದು, ವಿದ್ಯುದ್ದೀಕರಣ ಹಾಗೂ ಫಾಲ್ಸ್‌ ಸೀಲಿಂಗ್, ಲೈಟಿಂಗ್‌ ಅರೆಸ್ಟರ್‌ ಹಾಗೂ ಅರ್ಥಿಂಗ್ ವ್ಯವಸ್ಥೆ, ಅಗ್ನಿನಿರೋಧಕ ವ್ಯವಸ್ಥೆಗಳನ್ನು ಅಳವಡಿಸುವುದು, ನಾಲ್ಕು ನಿಲುಗಡೆಯ 15 ಮಂದಿ ಸಾಮರ್ಥ್ಯದ 2 ಲಿಫ್ಟ್‌ ಹಾಕುವುದು, ಬೆಳಕು ಮತ್ತು ಧ್ವನಿವರ್ಧಕ ವ್ಯವಸ್ಥೆ ಹಾಗೂ ಸ್ವಯಂಚಾಲಿತ ಪರದೆ ಅಳವಡಿಸುವುದು, ಜನರೇಟರ್‌ ಹಾಗೂ ಪ್ರೊಜೆಕ್ಟರ್‌ ಮೊದಲಾದವುಗಳನ್ನು ಹಾಕುವ ಕೆಲಸ ನಡೆಯಬೇಕಾಗಿದೆ ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ. ಇದಕ್ಕಾಗಿ ₹ 22.30 ಕೋಟಿ ಅನುದಾನ ಒದಗಿಸುವಂತೆ ಕೋರಲಾಗಿತ್ತು.

2012ರಲ್ಲೇ ‍ಪ್ರಾರಂಭ...
ಭವನದ ನಿರ್ಮಾಣ ಕಾಮಗಾರಿಯನ್ನು 2012ರಲ್ಲಿ ಪ್ರಾರಂಭಿಸಲಾಗಿತ್ತು. ಆದರೂ ನಡೆದಿರುವುದು ಕಟ್ಟಡ ನಿರ್ಮಾಣದ ಕೆಲಸವಷ್ಟೆ. ಕಟ್ಟಡದ ಸುತ್ತಲೂ ನಿರ್ವಹಣೆಗೆ ಆದ್ಯತೆ ನೀಡುತ್ತಿಲ್ಲ. ಇದು ಅಂಬೇಡ್ಕರ್‌ ಅನುಯಾಯಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಆರಂಭದಲ್ಲಿ ₹ 14.66 ಕೋಟಿಗೆ ಯೋಜನೆ ರೂಪಿಸಲಾಗಿತ್ತು. ಅದು‍ ಪರಿಷ್ಕರಣೆಗೊಂಡು ₹ 20.66 ಕೋಟಿಗೆ ಏರಿಕೆಯಾಯಿತು. ಮುಡಾದಿಂದ ₹ 10.56 ಕೋಟಿ ಸಮಾಜ ಕಲ್ಯಾಣ ಇಲಾಖೆಯಿಂದ ₹ 6.50 ಕೋಟಿ ಮಹಾನಗರಪಾಲಿಕೆಯಿಂದ ₹ 3 ಕೋಟಿ ಹಾಗೂ ಜಿ.ಪಂ.ಯಿಂದ ₹ 50 ಲಕ್ಷ ನೀಡಲಾಗಿದೆ. ಪರಿಷ್ಕರಿಸಲಾದ ಅಂದಾಜು ಪಟ್ಟಿಗೆ 2018ರ ಜ.8ರಂದು ಆಡಳಿತಾತ್ಮಕ ಅನುಮೋದನೆ ಕೊಡಲಾಗಿದೆ! ಹೊರ ಹಾಗೂ ಒಳಭಾಗದ ಸಿವಿಲ್ ಕಾಮಗಾರಿಗಳು ಶೇ 70ರಷ್ಟು ಮಾತ್ರವೇ ಪೂರ್ಣಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.