ಮೈಸೂರು: ‘ರೆಬಲ್‌ಸ್ಟಾರ್’ ಅಂಬರೀಷ್‌ಗೆ ಮೈಸೂರಿನೊಂದಿಗೂ ನಿಕಟ ನಂಟಿತ್ತು. ಇವರು ‘ಮಂಡ್ಯದ ಗಂಡೇ’ ಆದರೂ ಹುಟ್ಟಿದ್ದು ಮೈಸೂರು. ಹಾಗಾಗಿ, ಮೈಸೂರೆಂದರೆ ಅವರಿಗೆ ವಿಶೇಷ ಅಭಿಮಾನವಿತ್ತು.
ಮೈಸೂರಿನ ಸರಸ್ವತಿಪುರಂನ ತೆಂಗಿನತೋಪು ಬಳಿ ಅಂಬರೀಷ್ ಅವರ ಮನೆಯಿತ್ತು. ಇಲ್ಲಿ ಮನೆ ಮಾತಾಗಿದ್ದ ಪಿಟೀಲು ಚೌಡಯ್ಯ ಅವರ ಮೊಮ್ಮಗನಾಗಿದ್ದ ಅಂಬರೀಷ್ ಅವರಿಗೆ ಕಲೆ ರಕ್ತದಲ್ಲೇ ಬೆರೆತು ಹೋಗಿತ್ತು. ಚೌಡಯ್ಯ ಅವರ ಪುತ್ರಿಯ ಮಗ. ಅದೇ ನಂಟಿನಲ್ಲಿ ಕಲೆಯ ವಾತಾವರಣದಲ್ಲೇ ತಮ್ಮ ಬಾಲ್ಯವನ್ನೂ ಕಳೆದರು.
ಇವರ ವ್ಯಾಸಂಗವೂ ಮೈಸೂರಿನಲ್ಲಿ ಕೆಲಕಾಲ ನಡೆದಿತ್ತು. ಪಿ.ಯು ಶಿಕ್ಷಣದ ಎರಡನೇ ವರ್ಷ ಮೈಸೂರಿನ ಶಾರದಾವಿಲಾಸ ಪಿಯು ಕಾಲೇಜಿನಲ್ಲಿ ನಡೆಯಿತು. ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದ ಅಂಬರೀಷ್ ಕಾಲೇಜಿನಲ್ಲಿ ಎಲ್ಲರ ಮೆಚ್ಚಿನ ವಿದ್ಯಾರ್ಥಿಯಾಗಿದ್ದರು. ನಾಯಕ ನಟನ ರಂಗು ಆಗ ಕಾಲೇಜಿನ ವೇದಿಕೆಗಳಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಿಂಚುತ್ತಿತ್ತು.
ಇವರು ‘ಮೈಸೂರು ಜಾಣ’
ಇವರಿಗೆ ಮೈಸೂರಿನ ಮೇಲೆ ಎಷ್ಟು ಅಭಿಮಾನವಿತ್ತೆಂದರೆ 1992ರಲ್ಲಿ ‘ಮೈಸೂರು ಜಾಣ’ ಎಂಬ ಸಿನಿಮಾದಲ್ಲಿ ಅಭಿನಯಿಸಿದರು. ಬಹುಭಾಷಾ ನಿರ್ದೇಶಕ ಎ.ಟಿ.ರಘು ನಿರ್ಮಾಣ, ನಿರ್ದೇಶನದ ಈ ಚಿತ್ರ ಅಂದಿನ ದಿನಗಳಲ್ಲಿ ಬಾಕ್ಸ್ ಆಫೀಸಿನಲ್ಲಿ ದಾಖಲೆ ಪ್ರದರ್ಶನ ಕಂಡಿತ್ತು. ರಘು ಅವರೊಂದಿಗೆ ಸತತವಾಗಿ ಚರ್ಚಿಸಿ ಮೈಸೂರಿನ ಅಂದವನ್ನು ಕಟ್ಟಿಕೊಡುವಂತೆ ಇವರು ಕೋರಿಕೊಂಡಿದ್ದರು. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಈ ಸಿನಿಮಾಕ್ಕಾಗಿ ‘ಜಾಣ ಜಾಣ ಮೈಸೂರು ಜಾಣ’ ಎಂಬ ಹಾಡು ಹೇಳಿದ್ದು ಅಂಬಿ ಅಭಿಮಾನಿಗಳನ್ನು ಸಂತಸದ ಅಲೆಯಲ್ಲಿ ತೇಲಿಸಿತ್ತು.
ಹಾಗಾಗಿಯೇ, ಅಂಬರೀಷ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ‘ಮೈಸೂರು ಜಾಣ’ ಎಂಬ ಬಿರುದನ್ನು ನೀಡಿದ್ದರು. ‘ಅಂಬರೀಷ್‌ಗೆ ಮೈಸೂರೆಂದರೆ ಜೀವವಾಗಿತ್ತು. ಸದಾ ಮೈಸೂರನ್ನು ಸ್ಮರಿಸುತ್ತಿದ್ದರು. ಹುಟ್ಟಿ–ಬೆಳೆದ ಊರಿನ ನಂಟು ಅವರನ್ನು ಒಳ್ಳೆಯ ಕಲಾವಿದನನ್ನಾಗಿ ರೂಪಿಸಿತ್ತು’ ಎಂದು ಅವರನ್ನು ಬಾಲ್ಯದಿಂದ ಬಲ್ಲ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಮಣ್ಣಿನ ದೋಣಿ’ ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಿಸುವ ಮೂಲಕ ಅಂಬರೀಷ್ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದರು. ಇದಾದ ಬಳಿಕ ಒಟ್ಟು ಏಳು ಚಿತ್ರಗಳನ್ನು ನಿರ್ಮಿಸಿದ್ದರು.
‘ಕುಚ್ಚಿಕು’ ಗೆಳೆಯನ ಅಚ್ಚುಮೆಚ್ಚು
ಅಂಬರೀಷ್ ‘ಕುಚ್ಚಿಕು’ ಗೆಳೆಯ ವಿಷ್ಣುವರ್ಧನ್ ಹುಟ್ಟಿದ ಊರು ಮೈಸೂರಾಗಿದ್ದರಿಂದ ಇಬ್ಬರೂ ಸಾಕಷ್ಟು ಕಾಲ ಮೈಸೂರಿನಲ್ಲೇ ಕಳೆಯುತ್ತಿದ್ದರು. ಮೈಸೂರಿನ ಪ್ರೀಮಿಯರ್ ಸ್ಟುಡಿಯೊ, ಮಾನಸಗಂಗೋತ್ರಿ ಕ್ಯಾಂಪಸ್, ಮಹಾರಾಜ ಕಾಲೇಜು, ಇಲ್ಲಿನ ಬಲಮುರಿ, ಎಡಮುರಿಗಳಲ್ಲಿ ಗೆಳೆಯರೊಂದಿಗೆ ಕಾಲ ಕಳೆಯುವುದು ಇವರಿಗೆ ಅಚ್ಚುಮೆಚ್ಚಿನ ಸಂಗತಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.