ADVERTISEMENT

ಚಾಮುಂಡಿಬೆಟ್ಟಕ್ಕೆ ಬೇಕು ಆಂಬುಲೆನ್ಸ್

ಮೋಹನ್ ಕುಮಾರ ಸಿ.
Published 15 ಸೆಪ್ಟೆಂಬರ್ 2023, 7:04 IST
Last Updated 15 ಸೆಪ್ಟೆಂಬರ್ 2023, 7:04 IST
   

ಮೈಸೂರು: ನಗರದ ಅರಮನೆ, ಮೃಗಾಲಯದ ನಂತರ ಅತಿ ಹೆಚ್ಚು ಜನರು ಭೇಟಿ ನೀಡುವ ಸ್ಥಳವಾದ ಚಾಮುಂಡಿ ಬೆಟ್ಟದಲ್ಲಿ ಆಂಬುಲೆನ್ಸ್ ಸೇವೆ ಇಲ್ಲ. ಹೃದಯಾಘಾತವಾದ ಸಂದರ್ಭದಲ್ಲಿ ಹಲವು ಭಕ್ತರಿಗೆ ಸಕಾಲಕ್ಕೆ ತುರ್ತು ಚಿಕಿತ್ಸೆ ಸಿಗದೇ ಮೃತಪಟ್ಟಿರುವ ಪ್ರಕರಣಗಳು ನಡೆದಿವೆ. ಇದು ಆತಂಕಕ್ಕೆ ಕಾರಣವಾಗಿದೆ. ಜೊತೆಗೆ ಭಕ್ತರ ಸುರಕ್ಷತೆಗೆ ಆದ್ಯತೆ ನೀಡದಿರುವುದಕ್ಕೆ ಕನ್ನಡಿ ಹಿಡಿದಿದೆ.

ಆಷಾಢ ಶುಕ್ರವಾರ, ದಸರೆ ವೇಳೆ ಅತಿಹೆಚ್ಚು ಜನರು ಬರುತ್ತಾರೆ. ನೂಕು ನುಗ್ಗಲು ಉಂಟಾಗುತ್ತದೆ. ಎದೆನೋವು ಕಾಣಿಸಿಕೊಂಡರೆ, ಅಸ್ವಸ್ಥ ಗೊಂಡರೆ ಸ್ಪಂದಿಸುವ ತುರ್ತು ಚಿಕಿತ್ಸಾ ಘಟಕವಿಲ್ಲ ಎಂಬುದು ಸಾರ್ವಜನಿಕರ ದೂರು.

‘ದೇವಸ್ಥಾನದಲ್ಲಿ ಮಂಗಳವಾದ್ಯ ತಂಡದಲ್ಲಿದ್ದ ನಾದಸ್ವರ ನುಡಿಸುವ ನೌಕರರೊಬ್ಬರು 2 ವರ್ಷದ ಹಿಂದೆ ಕರ್ತವ್ಯದಲ್ಲಿರುವಾಗಲೇ ಮೃತಪಟ್ಟಿದ್ದರು. ಸಕಾಲಕ್ಕೆ ಚಿಕಿತ್ಸೆ ಸಿಗಲಿಲ್ಲ. ದೇವಸ್ಥಾನ ನೌಕರರ ಸಂಘದಿಂದ ಪರಿಹಾರ ಸಿಕ್ಕಿತ್ತು’ ಎಂದು ಗ್ರಾಮದ ನಿವಾಸಿ ರಮೇಶ್‌ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಹತ್ತಾರು ಸರದಿ ಸಾಲಿರುತ್ತವೆ. ಗಂಟೆಗಟ್ಟಲೆ ಸಾಲಿನಲ್ಲಿ ಕಾಯಬೇಕು. ಈ ವೇಳೆ ಹೆಚ್ಚು ಕಡಿಮೆಯಾದರೆ ಮೈಸೂರಿನ ಆಸ್ಪತ್ರೆಗಳಿಗೆ ತೆರಳಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ಅಲ್ಲಿ ಪ್ರಥಮ ಚಿಕಿತ್ಸೆಗಷ್ಟೇ ವ್ಯವಸ್ಥೆಗಳಿವೆ. ಆಮ್ಲಜನಕದ ಸಿಲಿಂಡರ್‌ ಸೌಲಭ್ಯವಿಲ್ಲ. ಆಂಬುಲೆನ್ಸ್‌ ಮೈಸೂರಿನಿಂದ ಬರುವುದನ್ನೇ ಕಾಯಬೇಕಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬೆಟ್ಟಕ್ಕೆ ಆಷಾಢ ಹಾಗೂ ದಸರೆ ವೇಳೆ ಕೋಟ್ಯಂತರ ರೂಪಾಯಿ ಆದಾಯ ಬರುತ್ತದೆ. 2015ರ ದಸರೆಯಲ್ಲಿ ₹29 ಲಕ್ಷವಿದ್ದ ಆದಾಯ, 2022ರ ಆಷಾಢ ದಲ್ಲಿ ₹3.37 ಕೋಟಿಗೆ ಏರಿತ್ತು. ಆದರೆ, ಭಕ್ತರಿಂದಲೇ ಸಂಗ್ರಹ ವಾಗುವ ಹಣ, ಭಕ್ತರಿಗೆ ವಿನಿಯೋಗವಾಗುತ್ತಿಲ್ಲ. ವಿಶೇಷ ಸೌಲಭ್ಯಗಳನ್ನು ಕಲ್ಪಿಸಿಲ್ಲ ಎಂಬುದು ಅವರ ದೂರು.

‘ಎದೆನೋವು ಕಾಣಿಸಿಕೊಂಡರೆ, ನಿತ್ರಾಣರಾಗಿದ್ದರೆ ತಕ್ಷಣ ಸ್ಪಂದಿಸುವ ವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿ ಇಲ್ಲವೇ ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಇಲಾಖೆಯು ಮಾಡಿಲ್ಲ. ಈಗಾಗಲೇ ಹಲವರು ಪ್ರಾಣ ಕಳೆದು ಕೊಂಡಿ ದ್ದಾರೆ. ದಾಸೋಹ ಭವನದ ಎದುರು ಕುಳಿತಿದ್ದ ಹಿರಿಯ ರೊಬ್ಬರು ಅಸ್ವಸ್ಥ ಗೊಂಡಿದ್ದರು. ಚಿಕಿತ್ಸೆಗೆ ಮೈಸೂರಿಗೆ ದಾಖಲಿಸುವ ವೇಳೆ ಗಾಗಲೇ ಮೃತಪಟ್ಟರು’ ಎಂದು ಸ್ಥಳೀಯ ನಿವಾಸಿ ರಾಜು ತಿಳಿಸಿದರು.

‘ಆರೋಗ್ಯ ಕೇಂದ್ರವನ್ನು ಉನ್ನತೀ ಕರಿಸಬೇಕು. ಆಂಬುಲೆನ್ಸ್‌ ಸೇವೆ ನೀಡಬೇಕು’ ಎಂದು ಒತ್ತಾಯಿಸಿದರು.

‘ದೇವಸ್ಥಾನದ ಖಾತೆಯಲ್ಲಿ ₹140 ಕೋಟಿ ಇದೆ. ಅದನ್ನು ಭಕ್ತರ ಸೌಲಭ್ಯ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ವಿನಿಯೋಗಿಸುತ್ತಿಲ್ಲ’ ಎಂದು ರಮೇಶ್ ದೂರಿದರು.

ಹಾವು ಕಚ್ಚಿತ್ತು: ಚಾಮುಂಡಿ ಬೆಟ್ಟದ ಮಹಿಷಾಸುರ ‍ಪ್ರತಿಮೆ ಬಳಿ ಟೀ ಅಂಗಡಿ ಇಟ್ಟುಕೊಂಡಿರುವ ವ್ಯಾಪಾರಿ ಫರ್ಮಾನ್ ಅವರಿಗೆ ತಿಂಗಳ ಹಿಂದೆಯಷ್ಟೇ ಹಾವು ಕಚ್ಚಿತ್ತು. ಅರ್ಧ ಗಂಟೆಯಲ್ಲಿ ಕೆ.ಆರ್‌.ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ‍ಪಡೆದರು.

‘ಇನ್ನೊಂದು 15 ನಿಮಿಷ ತಡವಾಗಿದ್ದರೆ ಕಷ್ಟವಾಗುತ್ತಿತ್ತು ಎಂದು ವೈದ್ಯರು ಹೇಳಿದ್ದರು. ನಾನು ಸ್ನೇಹಿತರ ಬೈಕಿನಲ್ಲಿ ತಕ್ಷಣವೇ ಹೋಗಿದ್ದರಿಂದ ಬದುಕುಳಿದೆ. ಆಂಬುಲೆನ್ಸ್‌ಗೆ ಕಾದು ಕುಳಿತಿದ್ದರೆ ನಾನು ಬದುಕುಳಿಯುತ್ತಿರಲಿಲ್ಲ’ ಎಂದು ಫರ್ಮಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಚಿಕಿತ್ಸೆಗೆ ಮೈಸೂರಿಗೆ ಹೋಗಬೇಕು
‘ಬೆಟ್ಟದಿಂದ ಮೈಸೂರಿನ ಆಸ್ಪತ್ರೆಗಳಿಗೆ 10ರಿಂದ 12 ಕಿ.ಮೀ ಆಗುತ್ತದೆ. ನಗರದಲ್ಲಿ ಟ್ರಾಫಿಕ್ ಸಮಸ್ಯೆಯೂ ಇದೆ. ಖಾಸಗಿ ವಾಹನಗಳಲ್ಲಿ ಬೆಟ್ಟದಿಂದ ತುರ್ತು ಚಿಕಿತ್ಸೆ ಪಡೆಯಲು ಹೋಗುವುದು ತಡವಾಗುತ್ತಿದೆ. ಆಷಾಢ ಅಥವಾ ಇತರೆ ಸಂದರ್ಭದಲ್ಲೂ ಹೃದಯಾಘಾತದಿಂದ ಹಲವರು ಮೃತಪಟ್ಟಿದ್ದಾರೆ’ ಎಂದು ಚಾಮುಂಡಿ ಬೆಟ್ಟದ ಗ್ರಾಮದ ಮುಖಂಡ ರಮೇಶ್ ಬಾಬು ಹೇಳಿದರು. ‘ರಸ್ತೆಯಲ್ಲಿ ಅಪಘಾತವಾದರೂ ಗೊತ್ತಾಗುವುದಿಲ್ಲ. ಚಿಕ್ಕದಾದರೂ ಆಂಬುಲೆನ್ಸ್‌ ಒದಗಿಸಿದರೆ ಹಲವರ ಪ್ರಾಣ ಉಳಿಯುತ್ತದೆ. ಕುಟುಂಬಗಳನ್ನು ರಕ್ಷಿಸಿದಂತಾಗುತ್ತದೆ. ಗ್ರಾಮ ಪಂಚಾಯಿತಿ ಅಥವಾ ಮುಜರಾಯಿ ಇಲಾಖೆ ಸ್ಪಂದಿಸಬೇಕು. ಜಿಲ್ಲಾಡಳಿತ ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಬೇಕು’ ಎಂದರು.
ವಿಶೇಷ ಸಂದರ್ಭದಲ್ಲಿ ನಿಯೋಜನೆ
‘ದಸರೆ, ಆಷಾಢ ಮಾಸ ಸೇರಿದಂತೆ ವಿಶೇಷ ಸಂದರ್ಭದಲ್ಲಿ ಎರಡು ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿತ್ತು. ಜನಸಂದಣಿ ಇರುವಾಗೆಲ್ಲ ಸೇವೆ ಕಲ್ಪಿಸಲಾಗಿದೆ’ ಎಂದು ಡಿಎಚ್‌ಒ ಡಾ.ಪಿ.ಸಿ.ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ‍ಪ್ರತಿಕ್ರಿಯಿಸಿದರು. ‘ಬೆಟ್ಟದ ತಪ್ಪಲಿನಲ್ಲಿಯೇ ಆಸ್ಪತ್ರೆಯಿದ್ದು, ಡಾ.ನವೀನ್‌ ಎಂಬುವರು ಆಂಬುಲೆನ್ಸ್ ಸೇವೆಯನ್ನು ಒದಗಿಸುತ್ತಿದ್ದಾರೆ. ಶಾಶ್ವತ ಸೇವೆಯನ್ನು ಕಲ್ಪಿಸಲು ಪರಿಶೀಲಿಸಿ ಕ್ರಮವಹಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.