ADVERTISEMENT

ದಶಕ ಕಳೆದರೂ ಕೆರೆಗಿಲ್ಲ ‘ಅಭಿವೃದ್ಧಿ ಭಾಗ್ಯ’

ಸಾಲಿಗ್ರಾಮದ ದೊಡ್ಡಕೆರೆ ಕಾಮಗಾರಿ ಸ್ಥಗಿತ; ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷ್ಯ– ಆರೋಪ

ಸಾಲಿಗ್ರಾಮ ಯಶವಂತ್
Published 4 ಸೆಪ್ಟೆಂಬರ್ 2021, 3:42 IST
Last Updated 4 ಸೆಪ್ಟೆಂಬರ್ 2021, 3:42 IST
ಸಾಲಿಗ್ರಾಮ ಪಟ್ಟಣದ ದೊಡ್ಡಕೆರೆಯ ನೋಟ
ಸಾಲಿಗ್ರಾಮ ಪಟ್ಟಣದ ದೊಡ್ಡಕೆರೆಯ ನೋಟ   

ಸಾಲಿಗ್ರಾಮ: ಪಟ್ಟಣದ ಹೆಬ್ಬಾಗಿಲ ಬಳಿ ಇರುವ ದೊಡ್ಡಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ದಶಕ ಕಳೆದರೂ ಪೂರ್ಣಗೊಂಡಿಲ್ಲ. ಅನುದಾನದ ಕೊರತೆ, ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿ ಕುಂಟುತ್ತಾ ಸಾಗಿದೆ.

85 ಎಕರೆ ವಿಸ್ತೀರ್ಣ ಹೊಂದಿರುವ ದೊಡ್ಡಕೆರೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ಕೇಂದ್ರವನ್ನಾಗಿ ಮಾಡಲು 2010ರಲ್ಲಿ ₹65 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

ಕೆರೆಯಂಗಳವನ್ನು ಸ್ವಚ್ಛಗೊಳಿಸಿ, ಕೆರೆ ಸುತ್ತ ಏರಿ ಹಾಗೂ ಮಧ್ಯಭಾಗದಲ್ಲಿ ‘ನಡುಗಡ್ಡೆ’ ನಿರ್ಮಿಸಲಾಗಿತ್ತು. ಬಳಿಕ ಕಾಮಗಾರಿ ಸ್ಥಗಿತಗೊಂಡಿತ್ತು.

ADVERTISEMENT

ನಡುಗಡ್ಡೆ ಸುತ್ತಲೂ ಕಲ್ಲುಗಳ ಅಳವಡಿಕೆ, ಕುಳಿತುಕೊಳ್ಳಲು ಬೆಂಚ್‌ಗಳ ವ್ಯವಸ್ಥೆ, ತಂತಿ ಬೇಲಿ ನಿರ್ಮಾಣ, ನಡಿಗೆ ಪಥ, ದೋಣಿ ವಿಹಾರಕ್ಕೆ ಅಗತ್ಯವಿರುವ ಕಾಮಗಾರಿಗಾಗಿ 2016ರಲ್ಲಿ ₹1.65 ಕೋಟಿ ಮಂಜೂರಾಗಿತ್ತು. ಆದರೆ, ಗುತ್ತಿಗೆದಾರರು ಹಣದ ಕೊರತೆ ನೆಪವೊಡ್ಡಿ ಕಾಮಗಾರಿ ಸ್ಥಗಿತಗೊಳಿ ಸಿದ್ದರು. ಈ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಶಾಸಕ ಸಾ.ರಾ.ಮಹೇಶ್ ಎಂಜಿನಿಯರ್‌ಗಳಿಗೆ ಸೂಚಿಸಿದ್ದರು.

‘ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವನಾಗಿದ್ದಾಗ ದೊಡ್ಡಕೆರೆ ಅಭಿವೃದ್ದಿಗೆ ₹15 ಕೋಟಿ ಅನುದಾನ ನೀಡಿದ್ದೆ. ಆದರೆ, ಸಮ್ಮಿಶ್ರ ಸರ್ಕಾರ ಪತನಗೊಂಡಿತು. ಬಿಜೆಪಿ ಸರ್ಕಾರವು ಈ ಪೈಕಿ ₹5 ಕೋಟಿಯನ್ನು ಮಂಜೂರು ಮಾಡಿದೆ. ಆದರೆ, ಅಭಿವೃದ್ಧಿ ಕಾಮಗಾರಿ ಆರಂಭವಾಗಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಹಾರಂಗಿ ಎಡದಂಡೆ ನಾಲೆ ಮೂಲಕ ಕಾಟ್ನಾಳ್‌ ಗ್ರಾಮದ ಕೆರೆಗೆ ನೀರು ತುಂಬಿಸಿ, ಅಲ್ಲಿಂದ ಕುಂಬಾರಕಟ್ಟೆ ಕೆರೆ ಮೂಲಕ ಸಾಲಿಗ್ರಾಮದ ದೊಡ್ಡಕೆರೆಗೆ ನೀರು ಹರಿಸಲಾಗುತ್ತದೆ. 150 ಎಕರೆ ಅಚ್ಚುಕಟ್ಟು ಪ್ರದೇಶವುಳ್ಳ ಕೆರೆ ಕೋಡಿ ಬಿದ್ದಾಗ ನೀರು
ಚಾಮರಾಜ ಎಡದಂಡೆ ನಾಲೆಗೆ ಸೇರುತ್ತದೆ. ಈ ಭಾಗದ ರೈತರಿಗೂ ಕೆರೆ ಜೀವನಾಡಿ. ಈ ಕೆರೆಯಿಂದಾಗಿ ಸುತ್ತಲಿನ ಗ್ರಾಮಗಳ ಅಂತರ್ಜಲಮಟ್ಟ ವೃದ್ಧಿಯಾಗಿದ್ದು, ಕೊಳವೆಬಾವಿಗಳ ಪುನಶ್ಚೇತನಕ್ಕೂ ಕಾರಣವಾಗಿದೆ.

‘ನಿರ್ವಹಣೆ ಕೊರತೆಯಿಂದ ಕೆರೆಯ ಏರಿ ಮೇಲೆ ಗಿಡಗಂಟಿಗಳು ಬೆಳೆದಿವೆ. ವಾಯುವಿಹಾರಕ್ಕೂ ತೊಂದರೆ ಯಾಗಿದೆ. ಕೆರೆಯಂಗಳದಲ್ಲಿ ಜನರು ಬಹಿರ್ದೆಸೆಗೆ ಹೋಗುತ್ತಾರೆ. ಜನರ ಓಡಾಟಕ್ಕೂ ತೊಂದರೆಯಾಗಿದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಿಕಾ ದೂರಿದರು.

‘ದೊಡ್ಡಕೆರೆಯಲ್ಲಿ ದೋಣಿ ವಿಹಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಹಾರಂಗಿ ವಿಭಾಗದ ಎಂಜಿನಿಯರ್‌ಗಳು ಕಾರ್ಯಪ್ರವೃತ್ತರಾಗಬೇಕು’ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಧಾ ರೇವಣ್ಣ ಆಗ್ರಹಿಸಿದರು.

‘ಬೆಂಗಳೂರು– ಜಳಸೂರು ರಾಜ್ಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿ ರುವುದರಿಂದ ದೊಡ್ಡಕೆರೆ ಕಾಮಗಾರಿ ಸ್ಥಗಿತಗೊಂಡಿದೆ. ಕೆರೆ ಏರಿ ಮೇಲೆ ಬೆಳೆದಿರುವ ಗಿಡಗಂಟಿಗಳನ್ನು ಕೂಡಲೇ ತೆಗೆಸಲಾಗುವುದು’ ಎಂದು ಹಾರಂಗಿ ನೀರಾವರಿ ವಿಭಾಗದ ಎಂಜಿನಿಯರ್ ಈಶ್ವರ್ ತಿಳಿಸಿದರು.

6 ಎಕರೆ ಒತ್ತುವರಿ ತೆರವು

ಸಾಲಿಗ್ರಾಮ ತಾಲ್ಲೂಕಿನಲ್ಲಿ ಕಾಟ್ನಾಳ್‌, ಕುಂಬಾರಕಟ್ಟೆ, ಮೊಂಡೂರು ಗ್ರಾಮದ ಗೆಂಡೆಕೆರೆ, ಹರದನಹಳ್ಳಿ ಕೆರೆ, ಭೇರ್ಯ ಕೆರೆಗಳು ಪ್ರಮುಖವಾದವು.

ಕಾಟ್ನಾಳ್‌, ಕುಂಬಾರಕಟ್ಟೆ ಕೆರೆಯಲ್ಲಿ ಹೂಳು ತೆಗೆಯಲಾಗಿದೆ. ಗೆಂಡೆಕೆರೆ, ಹರದನಹಳ್ಳಿ ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದು, ತೆರವುಗೊಳಿಸಬೇಕಿದೆ. ಹರದನಹಳ್ಳಿ ಕೆರೆಯ ಸುಮಾರು 6 ಎಕರೆ ಒತ್ತುವರಿಯಾಗಿದ್ದು, ಹಿಂದಿನ ತಿಂಗಳು ತೆರವುಗೊಳಿಸಲಾಗಿದೆ.

***

ಅಧಿಕಾರಿಗಳ ನಿರ್ಲಕ್ಷ್ಯದಿಂದ ದೊಡ್ಡಕೆರೆ ಅಭಿವೃದ್ಧಿಗೊಂಡಿಲ್ಲ. ಬಯಲು ಬಹಿರ್ದೆಸೆಯಿಂದಾಗಿ ಪಾದಚಾರಿಗಳಿಗೆ ತೊಂದರೆಯಾಗಿದೆ.

–ನಾಗೇಂದ್ರ, ಸಾಲಿಗ್ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.