ADVERTISEMENT

ಮೈಸೂರು: ಅಪಾರ್ಟ್‌ಮೆಂಟ್ ‘ಫ್ಲ್ಯಾಟ್’ ಬೆಲೆಯೂ ಹೆಚ್ಚಳ

ಎಂ.ಮಹೇಶ
Published 6 ಸೆಪ್ಟೆಂಬರ್ 2024, 5:19 IST
Last Updated 6 ಸೆಪ್ಟೆಂಬರ್ 2024, 5:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ನಗರದಲ್ಲಿ ದುಬಾರಿ ‘ಅಪಾರ್ಟ್‌ಮೆಂಟ್‌ ಸಂಸ್ಕೃತಿ’ ಸದ್ದಿಲ್ಲದೆ ಹಬ್ಬುತ್ತಿದೆ. ನಗರ ಹೊರವಲಯದ ಯಾವ ದಿಕ್ಕಿಗೆ ಹೋದರೂ ಅಲ್ಲೊಂದು ಅಪಾರ್ಟ್‌ಮೆಂಟ್‌ ಕಾಣಿಸುವುದು ಸಹಜ ಎಂಬಂತೆ ಆಗಿದೆ. ಆದರೆ ಅದು ಬಹುತೇಕ ಸ್ಥಳೀಯರಿಗೆ ಸುಲಭ ದರಕ್ಕೆ ದಕ್ಕುವ ಪರಿಸ್ಥಿತಿಯಂತೂ ಇಲ್ಲ.

ಉತ್ತಮ ಹವಾಗುಣ, ಸಾರಿಗೆ ಸೌಲಭ್ಯ ಹಾಗೂ ವೇಗವಾಗಿ ಬೆಳೆಯುತ್ತಿರುವ ಕಾರಣದಿಂದ ನಗರಕ್ಕೆ ‘ಹೊರಗಿನವರು’ ಹೆಚ್ಚು ಬಂದು ನೆಲೆಸುತ್ತಿದ್ದಾರೆ. ಅಂಥವರಿಂದ ‘ಪ್ಲಾಟ್‌’ಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಬೆಲೆಯೂ ಹೆಚ್ಚಾಗುತ್ತಿದೆ.

ನಗರದಲ್ಲಿ ಕೆಲವು ವರ್ಷಗಳಿಂದೀಚೆಗೆ ಹಲವು ಕಂಪನಿಗಳು ಬಹುಮಹಡಿಯ ವಸತಿ ಸಂಕೀರ್ಣಗಳನ್ನು ನಿರ್ಮಿಸಿ, ವಿವಿಧ ಅಳತೆಯ ಪ್ಲಾಟ್‌ಗಳನ್ನು ಮಾರುತ್ತಿವೆ. ನಗರದ ಹಲವೆಡೆ, ಹೊರವಲಯದಲ್ಲಿ, ಮುಖ್ಯರಸ್ತೆಗಳಿಗೆ ಹೊಂದಿಕೊಂಡಂತೆ ಹಾಗೂ ಸ್ವಚ್ಛಂದ ವಾತಾವರಣದ ಸ್ಥಳದಲ್ಲಿ ಗಗನಚುಂಬಿ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತಿವೆ.

ADVERTISEMENT

ಬಹು ಕೋಟಿ ರೂಪಾಯಿ ಬೆಲೆಯ ಐಷಾರಾಮಿ ಪ್ಲಾಟ್‌ಗಳನ್ನೂ ಕೆಲವು ಕಂಪನಿಗಳು ಪರಿಚಯಿಸಿವೆ. ಎರಡು ವರ್ಷಗಳಿಂದೀಚೆಗೆ ಪ್ಲಾಟ್‌ಗಳ ಬೆಲೆ ಶೇ 50ರಷ್ಟು ಜಾಸ್ತಿಯಾಗಿದೆ ಎನ್ನುತ್ತಾರೆ ಭಾರತೀಯ ರಿಯಲ್‌ ಎಸ್ಟೇಟ್‌ ಅಭಿವೃದ್ಧಿದಾರರ ಸಂಸ್ಥೆಗಳ ಒಕ್ಕೂಟದವರು (ಕ್ರೆಡಾಯ್‌).

200ಕ್ಕೂ ಹೆಚ್ಚು: ಅಂದಾಜಿನ ಪ್ರಕಾರ, ನಗರದಲ್ಲೀಗ 200ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳಿವೆ. 2–3 ವರ್ಷಗಳ ಅವಧಿಯಲ್ಲಿ ಅಪಾರ್ಟ್‌ಮೆಂಟ್‌ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿವೆ.

ಕೋವಿಡ್‌ ಸಂಕಷ್ಟದ ಪರಿಸ್ಥಿತಿಯ ನಂತರ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಚೇತರಿಕೆ ಕಂಡುಬರುತ್ತಿದೆ. ವಿಶೇಷವಾಗಿ ಗೋಕುಲಂ ಭಾಗದಲ್ಲಿ, ಕೆಆರ್‌ಎಸ್‌ ರಸ್ತೆಯಲ್ಲಿ ಹೆಚ್ಚಿನ ಅಪಾರ್ಟ್‌ಮೆಂಟ್‌ಗಳು ಬರುತ್ತಿವೆ. ಕೆಲವ ವರ್ಷಗಳ ಹಿಂದೆ ಬನ್ನೂರು ಮುಖ್ಯರಸ್ತೆಯಲ್ಲಿ (ಮಹದೇಶ್ವರ ದೇವಸ್ಥಾನದ ರಸ್ತೆ) ಒಂದು ಅಪಾರ್ಟ್‌ಮೆಂಟ್‌ ಮಾತ್ರವೇ ಇತ್ತು. ಅಲ್ಲೀಗ ಐದಕ್ಕೂ ಹೆಚ್ಚು ನಿರ್ಮಾಣಗೊಂಡಿವೆ. ಕೆಲವು ಇನ್ನೂ ನಿರ್ಮಾಣದ ಹಂತದಲ್ಲಿವೆ.

ಚಾಮರಾಜ ಮೊಹಲ್ಲಾ, ಸಿದ್ಧಾರ್ಥನಗರ, ಹೆಬ್ಬಾಳು, ಹುಣಸೂರು ರಸ್ತೆ ಮೊದಲಾದ ಕಡೆಗಳಲ್ಲಿ ಹಲವು ಅಪಾರ್ಟ್‌ಮೆಂಟ್‌ಗಳು ತಲೆ ಎತ್ತಿವೆ; ಎತ್ತುತ್ತಿವೆ. ಜೆ.ಪಿ.ನಗರ ಭಾಗದಲ್ಲೂ ಈ ಸಂಸ್ಕೃತಿ ಕಂಡುಬರುತ್ತಿದೆ. ದಶಕದ ಹಿಂದೆ ನಗರದಲ್ಲಿ ಕೆಲವೇ ಅಪಾರ್ಟ್‌ಮೆಂಟ್‌ಗಳಿದ್ದವು. ಈಗ ಅವೆಲ್ಲ ಹಳೆಯದಾಗಿವೆ. 

ಈಗ 2 ಬಿಎಚ್‌ಕೆ ಪ್ಲಾಟ್‌ಗೆ ಸರಾಸರಿ ₹50 ಲಕ್ಷ ದರವಿದೆ. ಹಳೆಯ ಅಪಾರ್ಟ್‌ಮೆಂಟ್‌ಗಳಲ್ಲಿ ಬೆಲೆ ಕೊಂಚ ಕಡಿಮೆ ಹೇಳುತ್ತಾರೆ. ಹೊಸದಾಗಿ ನಿರ್ಮಾಣವಾದ, ಹತ್ತು ಹಲವು ಸೌಲಭ್ಯಗಳಿರುವ ವಸತಿ ಸಂಕೀರ್ಣದಲ್ಲಿ ಬೆಲೆ ಇನ್ನೂ ಹೆಚ್ಚಿದೆ. ಕೆಆರ್‌ಎಸ್‌ ರಸ್ತೆ ಸೇರಿದಂತೆ ಅಲ್ಲಲ್ಲಿ ವಿಲ್ಲಾಗಳು ಕೂಡ ನಿರ್ಮಾಣವಾಗಿವೆ. ಅವುಗಳನ್ನು ಖರೀದಿಸಲು ಕೋಟ್ಯಧೀಶರಿಂದ ಮಾತ್ರವೇ ಸಾಧ್ಯ!

ಎರಡೂ ಇವೆ: ‘ಮೈಸೂರಿನಲ್ಲೂ ಅಪಾರ್ಟ್‌ಮೆಂಟ್ ಸಂಸ್ಕೃತಿ ಜಾಸ್ತಿಯಾಗುತ್ತಿದೆ. ನಗರದೊಳಗೆ ಮನೆಗಳನ್ನು ಕಟ್ಟುವಂಥ ನಿವೇಶನಗಳು ಕೈಗೆಟಕುವ ದರದಲ್ಲಿ ಸಿಗುತ್ತಿಲ್ಲ. ಹೀಗಾಗಿ, ಉಳ್ಳವರು ಅಪಾರ್ಟ್‌ಮೆಂಟ್‌ಗಳಲ್ಲಿ ಪ್ಲಾಟ್‌ ಖರೀದಿಗೆ ಮುಂದಾಗುತ್ತಾರೆ. ಸುರಕ್ಷತೆಯ ದೃಷ್ಟಿಯಿಂದಲೂ ಹಲವು ಅನುಕೂಲಗಳಿವೆ. ಬ್ಯಾಂಕ್‌ಗಳಿಂದ ಸಾಲವೂ ಸಿಗುತ್ತದೆ. ಇದರಿಂದಾಗಿ ಬೆಲೆಯಲ್ಲಿ ಏರಿಕೆಯಾಗುತ್ತಿದೆ’ ಎಂದು ಭಾರತೀಯ ಬಿಲ್ಡರ್‌ಗಳ ಸಂಘದ ಮಾಜಿ ಅಧ್ಯಕ್ಷ ನಾಗರಾಜ್ ವಿ.ಬೈರಿ ತಿಳಿಸಿದರು.

ನಾಗರಾಜ್ ವಿ.ಬೈರಿ

‘ಪ್ರತಿ ತಿಂಗಳೂ ಸರಾಸರಿ ₹ 3ಸಾವಿರ ನಿರ್ವಹಣಾ ಶುಲ್ಕವನ್ನು ಕಟ್ಟಬೇಕಾಗುತ್ತದೆ. ಅನುಕೂಲದೊಂದಿಗೆ ಕೆಲವು  ಅನನುಕೂಲಗಳೂ ಇವೆ. ಆದರೂ ಹಲವರು ಪ್ಲಾಟ್‌ ಖರೀದಿಗೆ ಮುಂದಾಗುತ್ತಿರುವುದು ಕಂಡುಬಂದಿದೆ. ಕೆಲವೆಡೆ, ಸಾಧಾರಣ ಸೌಲಭ್ಯವಿರುವ 2ಬಿಎಚ್‌ಕೆ ಪ್ಲಾಟ್‌ ಸರಾಸರಿ ₹25ಲಕ್ಷದಿಂದ ₹ 30ಲಕ್ಷಕ್ಕೂ ಸಿಗುತ್ತದೆ’ ಎನ್ನುತ್ತಾರೆ ಅವರು.

ಶ್ರೀಹರಿ

ಹಲವು ಕಾರಣದಿಂದ...

‘ಫ್ಲಾಟ್‌ಗಳು ಉತ್ತಮ ಗುಣಮಟ್ಟದ್ದಾಗಿದ್ದರೆ ಗ್ರಾಹಕರು ಖರೀದಿಸಲು ಮುಂದಾಗುತ್ತಾರೆ. ಬೆಂಗಳೂರು ಚೆನ್ನೈ ಮುಂಬೈ ಮೊದಲಾದ ಮೆಟ್ರೋ ನಗರಗಳಿಂದ ಬಂದವರು ಇಲ್ಲಿ ಮನೆ ಕಟ್ಟುವ ಬದಲಿಗೆ ಪ್ಲಾಟ್‌ಗಳನ್ನು ಖರೀದಿಸುತ್ತಿದ್ದಾರೆ. ಭದ್ರತೆ ಸುರಕ್ಷತೆ ಈಜುಕೊಳ ಜಿಮ್‌ ಸೌಲಭ್ಯಗಳು ದೊರೆಯುವುತ್ತವೆಂಬುದು ಪ್ರಮುಖ ಕಾರಣ. ದುಡಿಯುವ ದಂಪತಿ ವೃದ್ಧರಿಗೆ ಅನುಕೂಲಕರ. ಹೀಗಾಗಿ ಖರೀದಿ ಪ್ರಮಾಣ ಹೆಚ್ಚಾಗುತ್ತಿದೆ’ ಎಂದು ಕ್ರೆಡಾಯ್ ಮೈಸೂರು ಅಧ್ಯಕ್ಷ ಶ್ರೀಹರಿ ತಿಳಿಸಿದರು. ‘ನಿವೇಶನದ ಬೆಲೆ ಜಾಸ್ತಿಯಾಗಿರುವುದರಿಂದ ಪ್ಲಾಟ್‌ಗಳ ಬೆಲೆಯಲ್ಲೂ ಏರಿಕೆಯಾಗಿದೆ. ಇತ್ತೀಚಿನ ಅಪಾರ್ಟ್‌ಮೆಂಟ್‌ಗಳಲ್ಲಿ ಸರಾಸರಿ ₹ 1 ಕೋಟಿಯಿಂದ ₹ 4 ಕೋಟಿ ಮೌಲ್ಯದ ಪ್ಲಾಟ್‌ಗಳಿವೆ. ಹೊರವಲಯದಲ್ಲಿ ಅರ್ಧ ಕೋಟಿ ರೂಪಾಯಿಗೆ ಪ್ಲಾಟ್‌ಗಳು ಸಿಗುತ್ತವೆ. ನಗರದೊಳಗೆ ಚ.ಅಡಿ.ಗೆ ₹10ಸಾವಿರ ಇದ್ದರೆ ನಗರದ ಹೊರವಲಯದಲ್ಲಿ ಸರಾಸರಿ ₹2500 ಇದೆ. ಬೋಗಾದಿ ರಸ್ತೆಯಲ್ಲಿ ₹ 50 ಲಕ್ಷದ ಪ್ಲಾಟ್‌ಗಳು ಲಭ್ಯ ಇವೆ’ ಎನ್ನುತ್ತಾರೆ ಅವರು.

ಜಿ+2 ನಿಂದ ಜಿ+8ವರೆಗೆ..

ನಗರದಲ್ಲಿ ರಸ್ತೆಯ ಅಳತೆ ಆಧರಿಸಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಜಿ+2 ಜಿ+3 ಜಿ+4ನಿಂದ ಹಿಡಿದು ಸರಾಸರಿ ಜಿ+7ವರೆಗೂ ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗಿವೆ. ಅಲ್ಲಲ್ಲಿ ಜಿ+8 ಕೂಡ ಇವೆ. ‘ಒಂದು ಎಕರೆ ಜಾಗ ಸಿಕ್ಕರೆ ಬೃಹತ್ತಾಗಿ ನಿರ್ಮಿಸುವುದು ಕಂಡುಬರುತ್ತಿದೆ. ಜಿ+13 ಕೂಡ ಇದೆ’ ಎನ್ನುತ್ತಾರೆ ಕ್ರೆಡಾಯ್ ಪ್ರತಿನಿಧಿಗಳು. ಐಷಾರಾಮಿ ಸೌಲಭ್ಯಗಳು ಹಾಗೂ ಅಕರ್ಷಕ ವಿನ್ಯಾಸವಿದ್ದರೆ ಬೆಲೆ ಜಾಸ್ತಿಯಾಗುತ್ತದೆ. ವಿವಿಧ ಮಹಡಿ (ಜಿ+10 ಜಿ+12) ಹಾಗೂ ಟವರ್‌ಗಳಲ್ಲಿ ನಿರ್ಮಾಣವಾಗಿರುವ ಅಪಾರ್ಟ್‌ಮೆಂಟ್‌ಗಳೂ ಇಲ್ಲಿವೆ. 2 3 ಮತ್ತು 4 ಬೆಡ್‌ರೂಂ ಪ್ಲಾಟ್‌ಗಳೂ ಲಭ್ಯ ಇವೆ. ಮಳೆ ನೀರು ಸಂಗ್ರಹ ವ್ಯವಸ್ಥೆ ದಿನದ 24 ಗಂಟೆಯೂ ಭದ್ರತೆ ವ್ಯವಸ್ಥೆ ಕ್ಲಬ್‌ಹೌಸ್ ಈಜು ಕೊಳ ದಿನಸಿ ಅಂಗಡಿಯಂಥ ಸೌಲಭ್ಯಗಳೂ ಇವೆ’ ಎಂದು ಮಾಹಿತಿ ನೀಡಿದರು.

ಏರಿಕೆಗೆ ಕಾರಣವೇನು?
ಪ್ಲಾಟ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದು ನಿವೇಶನಗಳು ದುಬಾರಿ ಆಗಿರುವುದು ಸಿಮೆಂಟ್ ಕಬ್ಬಿಣ ಮರಳು ಬಣ್ಣ  ಮೊದಲಾದ ಕಚ್ಚಾ ಸಾಮಗ್ರಿಗಳ ಬೆಲೆಯಲ್ಲಿ ಏರಿಕೆಯಾಗಿರುವುದು ಕೂಲಿ ಯಂತ್ರೋಪಕರಣಗಳ ಬಾಡಿಗೆಯು ದುಪ್ಪಪ್ಟಾಗಿರುವುದು ಸೇರಿ ಹಲವು ಕಾರಣಗಳಿಂದ ನಿರ್ಮಾಣಕ್ಕೆ ಹೆಚ್ಚಿನ ಹಣ ವ್ಯಯಿಸಬೇಕು. ಹೀಗಾಗಿ ಅಪಾರ್ಟ್‌ಮೆಂಟ್‌ಗಳಲ್ಲಿನ ಪ್ಲಾಟ್‌ಗಳ ಬೆಲೆಯೂ ಜಾಸ್ತಿಯಾಗಿದೆ. ಐಷಾರಾಮಿ ಸೌಲಭ್ಯವುಳ್ಳ ಪ್ಲಾಟ್‌ಗಳು ಕೂಡ ಲಭ್ಯ ಇವೆ. ಹಲವು ಕಂಪನಿಗಳು ಇಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುತ್ತಿವೆ’ ಎನ್ನುತ್ತಾರೆ ಆ ವಲಯದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.