ಹುಣಸೂರು: ನೀರು ಕೇಳುವ ನೆಪದಲ್ಲಿ ಮಹಿಳೆಯ ಕೊರಳಿನಲ್ಲಿನ ಚಿನ್ನದ ಸರ ಅಪಹರಿಸಿದ್ದ ಘಟನೆಯಲ್ಲಿ ಆರೋಪಿಗಳನ್ನು ಹುಣಸೂರು ಗ್ರಾಮಾಂತರ ಪೊಲೀಸ್ ವಶಕ್ಕೆ ಪಡೆಯುವಲ್ಲಿ ಸಫಲರಾಗಿದ್ದಾರೆ.
ಘಟನೆ ವಿವರ: ತಾಲ್ಲೂಕಿನ ಹರವೆ ಕಲ್ಲಹಳ್ಳಿ ನಿವಾಸಿ ಜಯರಾಮೇಗೌಡ ಅವರ ನಿವಾಸಕ್ಕೆ ಅಪರಿಚಿತ ವ್ಯಕ್ತಿ ಕುಡಿಯಲು ನೀರು ಕೇಳಿದ್ದು, ಜಯರಾಮೇಗೌಡರ ಪತ್ನಿ ಶಿವಲಿಂಗಮ್ಮ ನೀರು ನೀಡಲು ಮುಂದಾಗಿದ್ದರು. ಆ ಸಮಯದಲ್ಲಿ ಆಕೆಯ ಬಾಯಿ ಮುಚ್ಚಿ ಕೊರಳಿನಲ್ಲಿದ್ದ 40 ಗ್ರಾಂ ಚಿನ್ನದ ಸರ ಅಪಹರಿಸಿದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬಂಧನ: ಡಿವೈಎಸ್ಪಿ ಗೋಪಾಲಕೃಷ್ಣ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸರ್ಕಲ್ ಇನ್ ಸ್ಪೆಕ್ಟರ್ ಮುನಿಯಪ್ಪ ಮತ್ತು ತಂಡ ಆರೋಪಿಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಸಾಲಿಗ್ರಾಮ ನಿವಾಸಿ ವಸಂತ ಮತ್ತು ಗಿರೀಶ್. ದಸ್ತುಗಿರಿ ಮಾಡಿ ಆರೋಪಿಗಳು ಅಡವಿಟ್ಟಿದ್ದ ಚಿನ್ನದ ಸರವನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಎಸ್ಐ ರಾಮು, ಎಎಸ್ಐ ಆಂಥೋಣಿ ಕ್ರೂಸ್, ಸೈಯದ್ ಹಿದಾಯತ್, ಇಬ್ರಾನ್ ಷರೀಫ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.