ಮೈಸೂರು: ‘ದೇಶದಲ್ಲಿ ಆಡಳಿತ ಸುಗಮವಾಗಿ ನಡೆಸಲು ಆರ್ಯರು ಹೊರಗಿನಿಂದ ಬಂದರು ಎಂಬ ವಾದವನ್ನು ಬ್ರಿಟಿಷರು ಹುಟ್ಟುಹಾಕಿದರು’ ಎಂದು ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಪ್ರತಿಪಾದಿಸಿದರು.
ನಗರದಲ್ಲಿ ಸಾಮಾಜಿಕ ನ್ಯಾಯ ವೇದಿಕೆ ಹಾಗೂ ಸಾಹಿತ್ಯ ಪ್ರಕಾಶನ ವತಿಯಿಂದ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಅಜಕ್ಕಳ ಗಿರೀಶ ಭಟ್ ಅವರ ‘ಬಹುವಚನಕ್ಕೊಂದೇ ತತ್ತ್ವ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು,
‘ಕ್ವಿಟ್ ಇಂಡಿಯಾ ಚಳವಳಿ ತೀವ್ರವಾಗಿದ್ದಾಗ ಆರ್ಯರ ವಾದ ಮುನ್ನಲೆಗೆ ಬಂದಿತು. ಅದನ್ನೇ ಜವಹರಲಾಲ್ ನೆಹರೂ ಅವರು ಡಿಸ್ಕವರಿ ಆಫ್ ಇಂಡಿಯಾದಲ್ಲಿ ಹೇಳಿದರು’ ಎಂದರು.
‘ಸಾವರ್ಕರ್ ಹಾಗೂ ನೆಹರೂ ಇಬ್ಬರೂ ಜೈಲು ಅನುಭವಿಸಿದ್ದಾರೆ. ನೆಹರೂ ಐಷಾರಾಮಿಯ ನೈನಿತಾಲ್ ಜೈಲಿಗೆ ಕಳುಹಿಸಿದರೆ, ಸಾವರ್ಕರ್ ಅಂಡಮಾನ್ ಜೈಲಿನಲ್ಲಿ ದೀರ್ಘ ಕಾಲ ನರಕಯಾತನೆ ಅನುಭವಿಸಿದರು. ರಾಜಕೀಯ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬ್ರಿಟಿಷರಿಗೆ ಪತ್ರ ಬರೆದು ಬಿಡುಗಡೆಯಾದರು. ಅದನ್ನೇ ಕ್ಷಮೆಯಾಚಿಸಿದರು ಎಂದು ಟೀಕಿಸಲಾಗುತ್ತದೆ. ನೆಹರೂ ಹಾಗೂ ಸಾವರ್ಕರ್ ಅವರಿಗೆ ಹೋಲಿಕೆ ಸಾಧ್ಯವೇ’ ಎಂದು ಪ್ರಶ್ನಿಸಿದರು.
ಲೇಖಕ ರೋಹಿತ್ ಚಕ್ರತೀರ್ಥ, ‘ವಲಸಿಗರಾದ ಆರ್ಯರು ಸ್ಥಳೀಯರ ಮೇಲೆ ಆಕ್ರಮಣ ಮಾಡಿದರು ಎಂಬ ಸುಳ್ಳುಗಳನ್ನು ಬಿತ್ತಲಾಗಿದೆ. ಇದೀಗ ನಿಜವಾದ ಇತಿಹಾಸ ಏನು ಎಂಬುದು ಭಾರತೀಯರಿಗೆ ಅರ್ಥವಾಗಿದೆ’ ಎಂದರು.
ಕಾರ್ಯಕ್ರಮದಲ್ಲಿ ವಕೀಲ ಒ.ಶಾಮ ಭಟ್, ಮಹಾರಾಜ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಎಸ್. ಮುರಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.