ಮೈಸೂರು: ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಅವರ ಮೇಲಿನ ದಾಳಿ ಪೂರ್ವಯೋಜಿತ ಕೃತ್ಯ. ಇದು ಕರ್ನಾಟಕದ ರಾಜಕೀಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಕಿಸಾನ್ ಸಭಾ ರಾಜ್ಯಘಟಕದ ಅಧ್ಯಕ್ಷ ಸಿದ್ಧನಗೌಡ ಪಾಟೀಲ ಒತ್ತಾಯಿಸಿದರು.
ಇಲ್ಲಿ ಮಂಗಳವಾರ ಅಖಿಲ ಭಾರತ ಕಿಸಾನ್ ಸಭಾ, ಎಐಟಿಯುಸಿ, ಸಿಪಿಐ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದಲ್ಲಿ ಈಗ ಸರ್ಕಾರೇತರ ವೇದಿಕೆಗಳಿಂದ ಸರ್ಕಾರವನ್ನೇ ನಿಯಂತ್ರಿಸುವ ಪರಿಪಾಠ ಆರಂಭವಾಗಿದೆ. ಅವರೇ ಆರೋಪಿಸಿ, ತಪ್ಪು ಎಂದು ತೀರ್ಮಾನಿಸಿ, ಶಿಕ್ಷೆಯನ್ನೂ ವಿಧಿಸುತ್ತಿವೆ. ಇಂತಹ ಪುಂಡರ ಪಡೆಗಳು ಹಿಟ್ಲರ್ ಕಾಲದಲ್ಲಿ ಸಕ್ರಿಯವಾಗಿದ್ದವು ಎಂದು ಅವರು ಹೇಳಿದರು.
ಆರ್‌ಎಸ್‌ಎಸ್, ಬಿಜೆಪಿಯನ್ನು ಟೀಕಿಸುವವರ ವಿರುದ್ಧ ಶ್ರೀರಾಮಸೇನೆ, ಬಜರಂಗದಳ, ಭಾರತ ರಕ್ಷಣಾ ವೇದಿಕೆ ಹೀಗೆ ಅನೇಕ ಸಂಘಟನೆಗಳು ದಾಳಿ ನಡೆಸುತ್ತಿವೆ. ಸರ್ಕಾರವನ್ನು ಮಾತ್ರವಲ್ಲ ಜನರ ಬದುಕನ್ನೂ ಅವು ನಿಯಂತ್ರಿಸುತ್ತಿವೆ ಎಂದು ದೂರಿದರು.
ಇಟಲಿಯಲ್ಲಿ ಮುಸೊಲಿನಿ ಕಾಲದಲ್ಲಿ ಸಾಹಿತಿಗಳಿಗೆ ಜೀವ ಬೆದರಿಕೆ ಒಡ್ಡಿದಂತೆ ಈಗಲೂ 61 ಮಂದಿ ಸಾಹಿತಿಗಳ ಪಟ್ಟಿ ಮಾಡಿ ಜೀವಬೆದರಿಕೆ ಹಾಕಲಾಗಿದೆ. ಆದರೆ, ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೇರಳ, ತೆಲಂಗಾಣ, ತಮಿಳುನಾಡಿನಲ್ಲಿ ಸರ್ಕಾರ ಸ್ಥಾಪಿಸಲು ಆಗದಿರುವ ಬಿಜೆಪಿ ಕರ್ನಾಟಕದಲ್ಲಿ ಮುಂದಿನ ಬಾರಿಯೂ ಸರ್ಕಾರ ಸ್ಥಾಪಿಸುವ ಉದ್ದೇಶದಿಂದ ಕೋಮು ವಿಚಾರಗಳನ್ನು ಮುನ್ನೆಲೆಗೆ ತರುತ್ತಿದೆ ಎಂದು ಹೇಳಿದರು.
ಇವನ್ನೂ ಓದಿ
*ರಾಕೇಶ್ ಟಿಕಾಯತ್ ಮೇಲೆ ಹಲ್ಲೆ: ಭಾರತ್ ರಕ್ಷಣಾ ವೇದಿಕೆ ಅಧ್ಯಕ್ಷ ಬಂಧನ
*ಬೆಂಗಳೂರು: ರೈತ ಸಭೆಯಲ್ಲಿ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗೆ ಥಳಿತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.