ಮೈಸೂರು: ‘ಮೈಸೂರು ಮಹಾರಾಜರನ್ನು ಎತ್ತಿಕಟ್ಟಿ ಸರ್ ಎಂ.ವಿಶ್ವೇಶ್ವರಯ್ಯ ಅವರನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ. ಇದು ದೇಶವನ್ನು ಹಾಳು ಮಾಡುವ ಕೃತ್ಯ’ ಎಂದು ಸಾಹಿತಿ ಡಾ.ಎಸ್.ಎಲ್.ಭೈರಪ್ಪ ದೂರಿದರು.
ನಗರದಲ್ಲಿ ಶನಿವಾರ ಲೇಖಕ ಡಿ.ಎಸ್.ಜಯಪ್ಪಗೌಡರ ಅಭಿನಂದನಾ ಗ್ರಂಥ ‘ಜಯಸಿರಿ’ಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ವಿಶ್ವೇಶ್ವರಯ್ಯ ಅಪರೂಪದ ವ್ಯಕ್ತಿಗಳು. ಆದರೆ, ಕನ್ನಂಬಾಡಿ ಕಟ್ಟೆ, ಮೈಸೂರು ವಿಶ್ವವಿದ್ಯಾಲಯ, ಕನ್ನಡ ಸಾಹಿತ್ಯ ಪರಿಷತ್ ಅನ್ನು ಮಹಾರಾಜರು ಸ್ಥಾಪಿಸಿದ್ದೇ ವಿನಃ ವಿಶ್ವೇಶ್ವರಯ್ಯನವರಲ್ಲ ಎಂದು ಕೆಲವರು ವಾದಿಸುತ್ತಿದ್ದಾರೆ. ಹಾಗಿದ್ದರೆ, ಅವುಗಳಲ್ಲಿ ವಿಶ್ವೇಶ್ವರಯ್ಯನವರ ಪಾತ್ರವಿಲ್ಲವೇ? ಎಲ್ಲವನ್ನೂ ಮಹಾರಾಜರೇ ಮಾಡಿದ್ದರು ಎಂದು ಹೇಳುತ್ತಾ ಹೋದರೆ ಇಂದಿನ ಪೀಳಿಗೆಗೆ ತಪ್ಪು ಮಾಹಿತಿ ರವಾನಿಸಿದಂತೆ ಆಗುವುದಿಲ್ಲವೇ’ ಎಂದು ಪ್ರಶ್ನಿಸಿದರು.
‘ಪ್ರಜಾಪ್ರತಿನಿಧಿ ಸಭೆಯಲ್ಲಿ ಕನ್ನಡದಲ್ಲೇ ಮಾತನಾಡಬೇಕು ಎಂದುವಿಶ್ವೇಶ್ವರಯ್ಯ ಸೂಚಿಸಿದ್ದರು. ಆಡಳಿತಕ್ಕೆ ಬೇಕಾದ ಕನ್ನಡದ ಶಬ್ದಗಳಿಗಾಗಿ ಸಂಸ್ಥೆಯನ್ನು ಸ್ಥಾಪಿಸಬೇಕೆಂದು ನಿರ್ಧರಿಸಿದ್ದರು. ಅದರ ಫಲವಾಗಿ ಕನ್ನಡ ಸಾಹಿತ್ಯ ಪರಿಷತ್ ಹುಟ್ಟಿತು. ಆದರೆ, ಅದರ ಶ್ರೇಯಸ್ಸನ್ನು ಮಹಾರಾಜರಿಗೆ ನೀಡುತ್ತಿದ್ದಾರೆ. ನಿಜವಾಗಿ ಕೆಲಸ ಮಾಡಿದವರು ಯಾರು ಎಂಬುದನ್ನು ಜನರಿಗೆ ತಿಳಿಸಬೇಕಲ್ಲವೇ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.