ADVERTISEMENT

ಕಾರ್ಮಿಕ ಕಾನೂನು: ಜಾಗೃತಿ ಅಗತ್ಯ; ನ್ಯಾಯಾಧೀಶ ರವೀಂದ್ರ ಹೆಗಡೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 6:36 IST
Last Updated 26 ಅಕ್ಟೋಬರ್ 2024, 6:36 IST
<div class="paragraphs"><p>ಮೈಸೂರಿನ ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕಾರ್ಮಿಕ ಕಾಯ್ದೆಗಳು, ಯೋಜನೆಗಳ ಪರಿಣಾಮಕಾರಿ ಅನುಷ್ಠಾನ’ ಕುರಿತ ಜಿಲ್ಲಾ ಮಟ್ಟದ ಕಾರ್ಯಗಾರವನ್ನು ರವೀಂದ್ರ ಹೆಗಡೆ ಉದ್ಘಾಟಿಸಿದರು </p></div>

ಮೈಸೂರಿನ ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕಾರ್ಮಿಕ ಕಾಯ್ದೆಗಳು, ಯೋಜನೆಗಳ ಪರಿಣಾಮಕಾರಿ ಅನುಷ್ಠಾನ’ ಕುರಿತ ಜಿಲ್ಲಾ ಮಟ್ಟದ ಕಾರ್ಯಗಾರವನ್ನು ರವೀಂದ್ರ ಹೆಗಡೆ ಉದ್ಘಾಟಿಸಿದರು

   

–ಪ್ರಜಾವಾಣಿ ಚಿತ್ರ

ಮೈಸೂರು: ‘ಕಾರ್ಮಿಕರಿಗೆ ಸಂಬಂಧಿಸಿದ ಕಾನೂನುಗಳ ಜಾಗೃತಿ ಅಗತ್ಯವಾಗಿದೆ. ಕಾಯ್ದೆಗಳು ಹಾಗೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ವ್ಯಾಜ್ಯಗಳು ಕಡಿಮೆಯಾಗಿ, ನ್ಯಾಯಾಲಯಗಳ ಮೇಲಿನ ಹೊರೆ ತಗ್ಗುತ್ತದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ರವೀಂದ್ರ ಹೆಗಡೆ ಹೇಳಿದರು.

ADVERTISEMENT

ಇಲ್ಲಿನ ವಿದ್ಯಾರಣ್ಯಪುರಂನ ಬಿಲ್ಡರ್‌ಗಳ ಚಾರಿಟಬಲ್ ಟ್ರಸ್ಟ್‌ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಜಿಲ್ಲೆಯ ಸರ್ಕಾರಿ ಅಧಿಕಾರಿಗಳು, ಉದ್ಯೋಗದಾತರು, ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಮಿಕರಿಗೆ ಕಾರ್ಮಿಕ‌ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಕಾಯ್ದೆಗಳು ಹಾಗೂ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಾರ್ಮಿಕರಿಗೆ ಇಂತಹ ಜಾಗೃತಿ ಕಾರ್ಯಕ್ರಮಗಳು ಅತ್ಯಗತ್ಯ. ಬಹಳ ಸಂದರ್ಭಗಳಲ್ಲಿ ಕಾನೂನು ಅರಿಯದೆ ತಪ್ಪುಗಳನ್ನು ಮಾಡುತ್ತೇವೆ. ಬದಲಾದ ಕಾಲಘಟ್ಟದಲ್ಲಿ ಕಾಯ್ದೆಗಳ ಬಗ್ಗೆ ತಿಳಿದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಅರಿಯಬೇಕು: ‘ಸುರಕ್ಷತೆ ಹಾಗೂ ಭದ್ರತೆ ಬಹಳ ಮುಖ್ಯ. ಇದಕ್ಕಾಗಿ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಇದು ಉದ್ಯೋಗದಾತರಿಗೂ ಅನ್ವಯಿಸುತ್ತದೆ. ಪಿಎಫ್ ಸೇರಿದಂತೆ ಎಲ್ಲವನ್ನೂ ಪಾವತಿಸಬೇಕು. ಉದ್ಯೋಗದಾತರು ಕಾರ್ಮಿಕರನ್ನು ಕಬ್ಬು ಎಂದು ತಿಳಿದು ಹಿಂಡಬಾರದು. ಅಂತೆಯೇ ಕಾರ್ಮಿಕರು, ಉದ್ಯೋಗದಾತರನ್ನು ಚಿನ್ನದ ಮೊಟ್ಟೆ ಇಡುವ ಕೋಳಿ ಎಂದು ಭಾವಿಸದೇ ಸಮನ್ವಯದಿಂದ ಸಾಗಬೇಕು. ಕೈಗಾರಿಕಾ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿಯೂ ಆಗುತ್ತದೆ ಎಂಬುದನ್ನು ಮರೆಯಬಾರದು’ ಎಂದು ತಿಳಿಸಿದರು.

ಕಾರ್ಮಿಕ ಇಲಾಖೆಯ ಆಯುಕ್ತ ಎಚ್.ಎನ್. ಗೋಪಾಲಕೃಷ್ಣ ಮಾತನಾಡಿ, ‘ಕೃಷಿಯ ನಂತರ ಕಾರ್ಮಿಕರ ಪಾತ್ರ ಪ್ರಮುಖವಾದುದು. ಹೀಗಾಗಿ, ಉದ್ಯೋಗದಾತರು ಹಾಗೂ ಕಾರ್ಮಿಕರು ಸಮನ್ವಯದಿಂದ ಹೋಗಲು ಇಲಾಖೆಯಿಂದ ಶ್ರಮಿಸಲಾಗುತ್ತಿದೆ. ಜಾಗೃತಿ ಕಾರ್ಯಕ್ರಮಗಳನ್ನು ನಿಯಮಿತವಾಗಿ ನಡೆಸಲಾಗುತ್ತಿದೆ’ ಎಂದರು.

‘ರಾಜ್ಯದಲ್ಲಿ ನೇಕಾರರು, ಕುಂಬಾರರು, ಶಾಮಿಯಾನ ಕೆಲಸಗಾರರು ಮೊದಲಾದ 23 ಅಸಂಘಟಿತ ವರ್ಗದಲ್ಲಿ 55 ಲಕ್ಷ ಮಂದಿ ಇದ್ದಾರೆ. ಅವರಿಗೂ ವಿಮೆ ಜಾರಿಗೊಳಿಸಲಾಗಿದೆ. ₹250 ಕೋಟಿಯಿಂದ ₹300 ಕೋಟಿ ದೊರೆತರೆ ಅವರಿಗೂ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೊಳಿಸಬಹುದು. ಸಿನಿಮಾ, ಟಿವಿ ಮಾಧ್ಯಮದವರು ಒಳಗೊಂಡಂತೆ ಸಿನಿ ವರ್ಕರ್ಸ್ ಮಸೂದೆ ಸಿದ್ಧಪಡಿಸಲಾಗಿದೆ. ಅದಕ್ಕೂ ಹಣ ಹೊಂದಿಸಲು ಕ್ರಮ ವಹಿಸಲಾಗುತ್ತಿದೆ. ಸೆಸ್ ಅನ್ನು ಹೇಗೆ ಸಂಗ್ರಹಿಸಬೇಕೆಂದು ಚಿಂತಿಸಲಾಗುತ್ತಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯಿತ್ರಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ. ದಿನೇಶ್ ಮಾತನಾಡಿದರು.

ಮೈಸೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ಎಸ್.ಬಿ.ವೀಣಾ ಹಾಗೂ ಕಾರ್ಮಿಕ ಅಧಿಕಾರಿ ಚೇತನ್‌ಕುಮಾರ್‌, ಸರ್ಕಾರಿ ಅಧಿಕಾರಿಗಳು, ಉದ್ಯೋಗದಾತರು, ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಮಿಕರು ಪಾಲ್ಗೊಂಡಿದ್ದರು.

‘ಗ್ರಾಚ್ಯುಟಿ ಬಗ್ಗೆ ದೂರು’

‘ಗ್ರಾಚ್ಯುಟಿ ಕೊಡದಿರುವ ಬಗ್ಗೆ ಕಾರ್ಮಿಕರಿಂದ ಬಹಳಷ್ಟು ದೂರುಗಳು ಬರುತ್ತಿವೆ. ಇದಕ್ಕೆ ಅವಕಾಶ ಆಗದಂತೆ ಉದ್ಯೋಗದಾತರು ನೋಡಿಕೊಳ್ಳಬೇಕು. ಪರಿಶಿಷ್ಟ ನಿರುದ್ಯೋಗಿ ಪದವೀಧರರು ಐಟಿಐ ಹಾಗೂ ಡಿಪ್ಲೊಮಾ ವಿದ್ಯಾರ್ಹತೆಯವರು ಹಾಗೂ ಶಿಕ್ಷಣವನ್ನು ಮೊಟಕುಗೊಳಿಸಿದ ಅಭ್ಯರ್ಥಿಗಳಿಗೆ ಕೌಶಲ ತರಬೇತಿ ನೀಡಲು ತಗಲುವ ವೆಚ್ಚವನ್ನು ಆಶಾದೀಪ ಯೋಜನೆಯಡಿ ಹೆಚ್ಚಿಸಲಾಗಿದೆ’ ಎಂದು ಗೋಪಾಲಕೃಷ್ಣ ತಿಳಿಸಿದರು. ‘ಸರ್ಕಾರದ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನವನ್ನು ಸಮರ್ಪಕವಾಗಿ ಕೊಡುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಗುತ್ತಿಗೆದಾರರಿಗೆ ನೀಡಲು ಟೆಂಡರ್ ಡಾಕ್ಯುಮೆಂಟ್ ‌ಸಿದ್ಧಪಡಿಸುವಾಗ ಕಾರ್ಮಿಕ ಅಧಿಕಾರಿಗಳ‌ ನೆರವನ್ನು ಸಂಬಂಧಿಸಿದ ಅಧಿಕಾರಿಗಳು ಪಡೆದುಕೊಳ್ಳಬೇಕು’ ಎಂದು ಸೂಚಿಸಿದರು.

ಮಾರ್ಗದರ್ಶನ

ಜಂಟಿ ಕಾರ್ಮಿಕ ಆಯುಕ್ತ ಎಸ್.ಬಿ. ರವಿಕುಮಾರ್‌ ಎಲ್‌ಐಸಿಯ ಹಿರಿಯ ಶಾಖಾ ವ್ಯವಸ್ಥಾಪಕ ಎಚ್‌.ಆರ್. ಸತೀಶ್ ಇಎಸ್‌ಐಸಿ ಉಪ ಪ್ರಾದೇಶಿಕ ಕಚೇರಿಯ ಉಪನಿರ್ದೇಶಕ ಮಾಂಗ್ಮಿಲಾಲ್ ಸಿತಾವು ಇಎಸ್‌ಐ ಆಸ್ಪತ್ರೆ ಕಚೇರಿ ಅಧೀಕ್ಷಕ ಹರೀಶ್ ಕಾರ್ಖಾನೆ ಮತ್ತು ಬಾಯ್ಲರ್‌ಗಳ ಇಲಾಖೆ ಜಂಟಿ ನಿರ್ದೇಶಕ ನರೇಂದ್ರಬಾಬು ಹಾಗೂ ಸಹಾಯಕ ಭವಿಷ್ಯ ನಿಧಿ ಆಯುಕ್ತ ಪಿ.ಮುರಳೀಧರನ್ ಕಾರ್ಮಿಕರಿಗೆ ಅನುಕೂಲವಾಗುವ ವಿವಿಧ ವಿಷಯಗಳ ಕುರಿತು ಮಾರ್ಗದರ್ಶನ ನೀಡಿದರು.

ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದವರು
ರಾಜ್ಯದಲ್ಲಿ ಎಲ್ಲರಿಗೂ ಸರ್ಕಾರವೇ ನೌಕರಿ ಕೊಡಲಾಗದು. ಆದ್ದರಿಂದ ಉದ್ಯೋಗ ಸೃಷ್ಟಿಗೆ ಪೂರಕವಾದ ವಾತಾವರಣವನ್ನು ಸರ್ಕಾರದಿಂದ ಸೃಷ್ಟಿಸಲಾಗುತ್ತಿದೆ
-ಎಚ್‌.ಎನ್. ಗೋಪಾಲಕೃಷ್ಣ ಆಯುಕ್ತ ಕಾರ್ಮಿಕ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.