ADVERTISEMENT

ಮೈಲ್ಯಾಕ್‌ನಿಂದ ವಸ್ತುಪ್ರದರ್ಶನ ಪ್ರಾಧಿಕಾರಕ್ಕೆ ಸ್ಥಾನ ಬದಲಿಸಿಕೊಂಡ ಅಯೂಬ್ ಖಾನ್

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 11:10 IST
Last Updated 29 ಫೆಬ್ರುವರಿ 2024, 11:10 IST
   

ಮೈಸೂರು: ಮೈಸೂರಿನ ಮಾಜಿ ಮೇಯರ್ ಅಯೂಬ್ ಖಾನ್ ಅವರಿಗೆ ನೀಡಿದ್ದ ಅಧ್ಯಕ್ಷ ಸ್ಥಾನ ಬದಲಾಗಿದೆ.

ಅವರನ್ನು ಇಲ್ಲಿನ ಮೈಲ್ಯಾಕ್ (ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ) ಅಧ್ಯಕ್ಷ ಸ್ಥಾನಕ್ಕೆ ನೇಮಿಸಿರುವ ಬಗ್ಗೆ ಗುರುವಾರ ಬೆಳಿಗ್ಗೆ ಆದೇಶ ಹೊರಡಿಸಲಾಗಿತ್ತು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಅಯೂಬ್, ಆ ಹುದ್ದೆಯಲ್ಲಿ ಸಾರ್ವಜನಿಕರ ಒಡನಾಟ ಇರುವುದಿಲ್ಲ, ಅಲ್ಲದೇ ಹೆಚ್ಚಿನ ಚಟುವಟಿಕೆಗಳೂ ಇಲ್ಲ. ಆದ್ದರಿಂದ ಹುದ್ದೆ ಬದಲಿಸಿಕೊಡಿ, ಇಲ್ಲವಾದಲ್ಲಿ ಯಾವುದೇ ಸ್ಥಾನಮಾನವೂ ನನಗೆ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ, ಅಯೂಬ್ ಖಾನ್ ಅವರನ್ನು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ (ಕೆಇಎ) ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.

ಹುದ್ದೆ ಬದಲಾವಣೆ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಆಗಿರುವುದನ್ನು ಸ್ವತಃ ಅಯೂಬ್‌ಖಾನ್ ಪ್ರಜಾವಾಣಿಗೆ ಖಚಿತಪಡಿಸಿದರು.

ADVERTISEMENT

'ನನ್ನ ಕೋರಿಕೆ ಮೇರೆಗೆ ಮುಖ್ಯಮಂತ್ರಿ ಹುದ್ದೆ ಬದಲಾವಣೆ ಮಾಡಿಕೊಟ್ಟಿದ್ದಾರೆ. ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಎರಡು ವರ್ಷಗಳವರೆಗೆ ಅಧಿಕಾರದ ಅವಧಿಯನ್ನು ನೀಡಲಾಗಿದೆ. ಮಾರ್ಚ್ 2ರಂದು ಅಧಿಕಾರ ಸ್ವೀಕರಿಸುತ್ತೇನೆ' ಎಂದು ತಿಳಿಸಿದರು.

ಅಯೂಬ್ ಖಾನ್, ಹೋದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದರು. ಟಿಕೆಟ್ ಕೈತಪ್ಪಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದರು. ಅವರನ್ನು ತಮ್ಮ ಮನೆಗೆ ಕರೆಸಿಕೊಂಡಿದ್ದ ಸಿದ್ದರಾಮಯ್ಯ ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿದ್ದರು.

ಮುಖ್ಯಮಂತ್ರಿ ಅವರ ಮತ್ತೊಬ್ಬ ಆಪ್ತ,‌ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯರೂ ಆಗಿರುವ ಕೆ.ಮರೀಗೌಡ ಅವರನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.