ADVERTISEMENT

ನಾಲೆಗಳಿಗೆ ನೀರು ಹರಿಸಲು ಬಡಗಲಪುರ ನಾಗೇಂದ್ರ ಒತ್ತಾಯ

‘ಕೃಷಿ ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿ’ ಎಂಬ ಘೋಷವಾಕ್ಯದೊಂದಿಗೆ ಪ್ರತಿಭಟನೆ ಇಂದು

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 8:08 IST
Last Updated 25 ಜೂನ್ 2021, 8:08 IST
ಬಡಗಲಪುರ ನಾಗೇಂದ್ರ
ಬಡಗಲಪುರ ನಾಗೇಂದ್ರ   

ಮೈಸೂರು: ಕೆಆರ್‌ಎಸ್‌ ಜಲಾಶಯದಿಂದ ವಿ.ಸಿ ನಾಲೆಗೆ ನೀರು ಬಿಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.

ಜಲಾಶಯದಲ್ಲಿ ಹಿಂದೆ 74 ಅಡಿ ನೀರಿದ್ದಾಗಲೇ ನಾಲೆಗಳಿಗೆ ನೀರು ಬಿಡಲಾಗಿದೆ. ಈಗ 94 ಅಡಿ ನೀರಿದೆ. ಮಳೆ ಕಡಿಮೆಯಾಗಿರುವುದರಿಂದ ಬೆಳೆಗಳಿಗೆ ನೀರಿನ ಅಗತ್ಯ ಇದೆ. ತಕ್ಷಣವೇ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಬೇಕು ಎಂದು ಇಲ್ಲಿ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.‌

ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಹಳೆಯ ಬಾಕಿ ನೀಡಬೇಕು, ಶ್ರೀರಾಮ ಸಕ್ಕರೆ ಕಾರ್ಖಾನೆ ಅಧೋಗತಿಗೆ ಇಳಿದಿದೆ. ಕೂಡಲೇ ಇದನ್ನು ಸರಿಪಡಿಸಬೇಕು. ಕುಂತೂರು ಸಕ್ಕರೆ ಕಾರ್ಖಾನೆಯನ್ನು ತೆರೆಯಬೇಕು. ಕಬ್ಬು ಬೆಳೆಗೆ ವೈಜ್ಞಾನಿಕವಾದ, ಶಾಸನಬದ್ಧವಾದ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಅವರು ಮನವಿ ಮಾಡಿದರು.

ADVERTISEMENT

ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಮಂಡ್ಯ, ಬೆಳಗಾವಿ ಹಾಗೂ ಬಾಗಲಕೋಟೆ ವ್ಯಾಪ್ತಿಗಳಲ್ಲಿ ‍ಪ್ರತಿಭಟನೆ ನಡೆಸಲಾಗುವುದು. ಬೇಡಿಕೆ ಈಡೇರದೇ ಹೋದರೆ ಸಾವಿರಾರು ಸಂಖ್ಯೆಯಲ್ಲಿ ರೈತರು ವಿಧಾನಸಭೆಗೆ ಮುತ್ತಿಗೆ ಹಾಕಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು.

ಕೇಂದ್ರ ಸರ್ಕಾರ ರೈತರ ಕುತ್ತಿಗೆ ಹಿಸುಕುವ ಕೆಲಸ ಮಾಡುತ್ತಿದೆ. ಫಸಲ್ ವಿಮಾ ಯೋಜನೆ ಆರಂಭವಾದಾಗ ಶೇ 22ರಷ್ಟು ರೈತರನ್ನು ಇದು ಒಳಗೊಂಡಿತ್ತು. ಆದರೆ, ಈಗ ಇದು ಶೇ 13ಕ್ಕೆ ಇಳಿಕೆಯಾಗಿದೆ. ಕ್ರಮೇಣ ಈ ಯೋಜನೆಯನ್ನು ಅಳಿಸಿಹಾಕಲು ಸರ್ಕಾರ ಹೊಂಚು ಹಾಕುತ್ತಿದೆ ಎಂದು ಅವರು ಆರೋಪಿಸಿದರು.

ಕೆರೆ ಉಳಿಸುವ ಕುರಿತು ರಾಜ್ಯ ಸರ್ಕಾರ ಈಚೆಗೆ ಸಂಪುಟ ಸಭೆ ಒಪ್ಪಿಗೆ ನೀಡಿರುವ ಮಸೂದೆ ಮೇಲ್ನೋಟಕ್ಕೆ ಚೆನ್ನಾಗಿದೆ. ಆದರೆ, ಇದರ ಆಂತರ್ಯದಲ್ಲಿ ಭೂಕಬಳಿಕೆದಾರರಿಗೆ ಅನುಕೂಲ ಮಾಡಿಕೊಡುವ ಅಂಶವೂ ಇದೆ. ಈ ಕುರಿತು ಸಾರ್ವಜನಿಕ ಚರ್ಚೆಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

‘ಕೃಷಿ ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿ’ ಎಂಬ ಘೋಷವಾಕ್ಯದೊಂದಿಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಚಳವಳಿಯಲ್ಲಿ ಸಂಘವು ಭಾಗವಹಿಸಲಿದೆ. ಜೂನ್ 26ರಂದು ಬೆಂಗಳೂರಿನ ರಾಜಭವನದ ಮುಂದೆ ಪ್ರತಿಭಟನೆ ನಡೆಯಲಿದೆ. ಜತೆಗೆ, ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ, ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಮುಂಭಾಗ ಧರಣಿ ನಡೆಯಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.