ಖಾಸಗಿ ಶಾಲೆಗಳ ಮಕ್ಕಳಂತೆ ಸಮವಸ್ತ್ರ ಧರಿಸಿ ಬಾಲವಾಡಿಯತ್ತ ಹೆಜ್ಜೆ ಹಾಕುವ ಪುಟಾಣಿಗಳು, ಗೋಡೆಗಳ ಮೇಲೆ ಪ್ರಾಣಿ–ಪಕ್ಷಿಗಳ ಬಣ್ಣಬಣ್ಣದ ಚಿತ್ತಾರ, ನೀತಿಕಥೆಗಳ ಬೋಧನೆ, ಯಾವುದೇ ಖಾಸಗಿ ನರ್ಸರಿಗೂ ಕಡಿಮೆ ಇಲ್ಲದಂತೆ ಕಾಣುವ ಅಂಗನವಾಡಿ ಕೇಂದ್ರ...
ಮೈಸೂರಿನ ಶಾರದೇವಿನಗರದ ಬಳಿ ಇರುವ ಜನತಾನಗರದ ಅಂಗನವಾಡಿ ಕೇಂದ್ರದ ಚಿತ್ರಣವಿದು. 11 ವರ್ಷಗಳಿಂದ ಇರುವ ಈ ಕೇಂದ್ರವು ಸುವ್ಯವಸ್ಥಿತವಾಗಿ ಸಜ್ಜುಗೊಂಡು ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಈ ಕೇಂದ್ರದ ಗೋಡೆಗಳ ಮೇಲೆ ಪರಿಸರ ಕಾಳಜಿ ಮೂಡಿಸುವ ಗೋಡೆ ಬರಹ, ಪ್ರಾಣಿ-ಪಕ್ಷಿಗಳ ಚಿತ್ರಗಳು ಮಕ್ಕಳನ್ನು ಆಕರ್ಷಿಸುತ್ತಿವೆ.
ಅರಣ್ಯ ನಾಶ,ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ಮಾನವ ಕೃತ್ಯಗಳಿಂದಾಗಿ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಪ್ರಾಣಿ ಸಂಕುಲ ಅಪಾಯದ ಸ್ಥಿತಿಗೆ ತಲುಪಿವೆ. ಪರಿಸರ, ಪಾಣಿ– ಪಕ್ಷಿ ಸಂಕುಲ ಉಳಿವಿನ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಅಂಗನವಾಡಿ ಕೇಂದ್ರದ ಗೋಡೆಗಳ ಮೇಲೆ ಆನೆ, ಹುಲಿ, ಸಿಂಹ, ಮೊಲ, ಮೊಸಳೆ ಚಿತ್ರಗಳನ್ನು ಬಿಡಿಸಲಾಗಿದೆ. ಮಕ್ಕಳಿಗೆ ಆಟೋಪಕರಣಗಳನ್ನು ಕಲ್ಪಿಸಲಾಗಿದೆ. ಸುಸಜ್ಜಿತ ಅಡುಗೆ ಕೋಣೆ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯನ್ನೂ ಒದಗಿಸಲಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆ ಮಮತಾ ರಾಜೇಶ್ ತಿಳಿಸುತ್ತಾರೆ.
ಖಾಸಗಿ ಶಾಲೆಗಳಿಗೆ ದುಬಾರಿ ಶುಲ್ಕ ತೆತ್ತು ತಮ್ಮ ಮಕ್ಕಳನ್ನು ಸೇರಿಸುವ ಪೋಷಕರು, ಒಮ್ಮೆ ಇತ್ತ ತಿರುಗಿ ನೋಡಬೇಕು.
ಶಿಶು ಅಭಿವೃದ್ಧಿ ಯೋಜನೆಯ ಬಾಲಸ್ನೇಹಿ ಕಾರ್ಯಕ್ರಮದಡಿ ಮೈಸೂರು ಜಿಲ್ಲೆಯಲ್ಲಿರುವ 2,860 ಕೇಂದ್ರಗಳಲ್ಲಿ ತಿ.ನರಸೀಪುರ 33, ಹುಣಸೂರು 332, ಎಚ್.ಡಿ.ಕೋಟೆ 341, ಮೈಸೂರು ನಗರ 214,ನಂಜನಗೂಡು 283, ಬಿಳ್ಳಿಗೆರೆ 262, ಪಿರಿಯಾಪಟ್ಟಣ 322, ಕೆ.ಆರ್.ನಗರ 283, ಮೈಸೂರು ಗ್ರಾಮಾಂತರದಲ್ಲಿ 316 ಅಂಗನವಾಡಿ ಕೇಂದ್ರಗಳಲ್ಲಿ ಗೋಡೆಗಳ ಮೇಲೆ ಬಾಲಸ್ನೇಹದ ಚಿತ್ರಗಳನ್ನು ಬಿಡಿಸಲಾಗಿದೆ. ಇದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾ ಅವರ ಮಾರ್ಗದರ್ಶನವಿದೆ.
ಕಾನ್ವೆಂಟ್‌ಗಳಂತೆ ಈ ಅಂಗನವಾಡಿ ಕೇಂದ್ರದ ಮಕ್ಕಳು ಸಮವಸ್ತ್ರ ಧರಿಸುತ್ತಾರೆ. ಕಾನ್ವೆಂಟ್‌ಗಳಲ್ಲಿ ನೀಡುವಂತಹ ಪಾಠ ಪ್ರವಚನಗಳನ್ನು ಇಲ್ಲೂ ನೀಡಲಾಗುತ್ತಿದೆ. ಈ ಹಿಂದೆ ಇಲ್ಲಿ ಬೋಧಕಿಯಾಗಿದ್ದ ಲಕ್ಷ್ಮಿ ಅವರಿಗೆ 2008ರಲ್ಲಿ ರಾಜ್ಯ ಸರ್ಕಾರವು ‘ಅತ್ಯುತ್ತಮ ಬೋಧಕಿ ಪ್ರಶಸ್ತಿ’ ನೀಡಿ ಗೌರವಿಸಿದೆ ಎಂದು ಪದ್ಮಾ ತಿಳಿಸಿದರು.
‘ಅಂಗನವಾಡಿ ಕೇಂದ್ರವನ್ನು ಈ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಿದ್ದೇವೆ. ಆದರೆ, ನಮಗೆ ಮೂರು ತಿಂಗಳಿಂದ ಗೌರವಧನ ನೀಡಿಲ್ಲ. ಸಾಲ ಮಾಡಿ ಜೀವನ ನಿರ್ವಹಿಸುವಂತಾಗಿದೆ. ಈ ಗೌರವಧನವನ್ನು ಮತ್ತಷ್ಟು ಹೆಚ್ಚಿಸಬೇಕು’ ಎಂದು ಇಲ್ಲಿನ ಕಾರ್ಯಕರ್ತೆಯರು ಒತ್ತಾಯಿಸಿದ್ದಾರೆ.
ಇಲ್ಲಿದ್ದಾರೆ 36 ಮಕ್ಕಳು: ಈ ಬಾಲವಾಡಿಯಲ್ಲಿ 36 ಮಕ್ಕಳು ಕಲಿಯುತ್ತಿದ್ದಾರೆ. 6 ತಿಂಗಳಿನಿಂದ 3 ವರ್ಷದ 60 ಮಕ್ಕಳು ಆಹಾರ ಪದಾರ್ಥಗಳನ್ನು ಪಡೆಯುತ್ತಿದ್ದಾರೆ. ಈ ಕೇಂದ್ರಕ್ಕೆ ರಾಜರಾಜೇಶ್ವರಿ ನಗರ, ಜನತಾನಗರ, ಪ್ರಶಾಂತನಗರ, ಕುವೆಂಪುನಗರ, ರಾಮಕೃಷ್ಣ ನಗರ, ದಟ್ಟಗಳ್ಳಿ ಕಡೆಯಿಂದ ಮಕ್ಕಳು ಬರುತ್ತಿದ್ದಾರೆ ಎಂದು 4ನೇ ವೃತ್ತದ ಮೇಲ್ವಿಚಾರಕಿ ಭಾಗ್ಯಶ್ರೀ ತಿಳಿಸಿದರು.
ಇಷ್ಟಲ್ಲದೆ, ಹೆಣ್ಣುಮಕ್ಕಳಿಗೆ ₹1 ಲಕ್ಷದ ಭಾಗ್ಯಲಕ್ಷ್ಮಿ ಬಾಂಡ್ ನೀಡಲಾಗುತ್ತಿದೆ. ಮಾತೃ ವಂದನಾ ಫಲಾನುಭವಿಗಳಿಗೆ ₹5 ಸಾವಿರ ಹಾಗೂ ಮಾತೃಶ್ರೀ ಫಲಾನುಭವಿಗಳಿಗೆ ₹6 ಸಾವಿರ ನೀಡಲಾಗುತ್ತಿದೆ. ಒಟ್ಟು 35 ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.