ಮೈಸೂರು: ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಶುಕ್ರವಾರ ನಡೆಸಿದ ‘ಕರ್ನಾಟಕ ಬಂದ್’ಗೆ ಶುಕ್ರವಾರ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬಂದ್ ಬಹುತೇಕ ಶಾಂತಿಯುತವಾಗಿತ್ತು. ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಅಲ್ಲಲ್ಲಿ ಪ್ರತಿಭಟನೆಗಳು ನಡೆದವು.
ನಮಗೇ ನೀರಿಲ್ಲದಿರುವುದರಿಂದ ತಮಿಳುನಾಡಿಗೆ ನೀರು ಹರಿಸಬಾರದು ಎಂಬ ಹಕ್ಕೊತ್ತಾಯವನ್ನು ಹೋರಾಟಗಾರರು ಮಂಡಿಸಿದರು.
ರಸ್ತೆಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರವಿರಲಿಲ್ಲ. ಮಾರುಕಟ್ಟೆಗಳಲ್ಲಿ ವ್ಯಾಪಾರ– ವಹಿವಾಟು ನಡೆಯಲಿಲ್ಲ. ಬೆರಳೆಣಿಕೆಯ ಜನರ ಓಡಾಟಕ್ಕಷ್ಟೇ ಸೀಮಿತವಾಗಿದ್ದ ನಗರದ ರಸ್ತೆಗಳು ಬೆಳಿಗ್ಗೆಯಿಂದ ಸಂಜೆವರೆಗೂ ಬಿಕೋ ಎನ್ನುತ್ತಿದ್ದವು. ಕಾವೇರಿ ಉಳಿಸುವಂತೆ ಇಡೀ ಜಿಲ್ಲೆ ಸಂದೇಶ ರವಾನಿಸಿತು.
ಮೆಡಿಕಲ್ ಸ್ಟೋರ್, ಆಸ್ಪತ್ರೆಗಳು, ಪೆಟ್ರೋಲ್ ಬಂಕ್‌ಗಳು ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳು, ಮಳಿಗೆಗಳನ್ನು ವರ್ತಕರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಬೇಕರಿಗಳು, ಫಾಸ್ಟ್ ಫುಡ್, ಟಿಫಾನೀಸ್, ಟೀ– ಕಾಫಿ ಅಂಗಡಿಗಳು, ಹೋಟೆಲ್‌ಗಳೂ ಕೂಡ ತೆರೆಯಲಿಲ್ಲ. ರಸ್ತೆಬದಿ ವ್ಯಾಪಾರಗಳು ಕೂಡ ಬಂದ್ ಬೆಂಬಲಿಸಿದರು. ಕೆಲವೆಡೆ ಊಟ, ಉಪಾಹಾರಕ್ಕೆ ಜನರು ಪರದಾಡುತ್ತಿದ್ದುದು ಕಂಡುಬಂತು. ಕೆಎಸ್‌ಆರ್‌ಟಿಸಿ ಬಸ್‌ಗಳ ಓಡಾಟದ ಬಗ್ಗೆ ಸ್ಪಷ್ಟ ಮಾಹಿತಿ ಇರದೇ ಪ್ರಯಾಣಿಕರು ಪರದಾಡಿದರು.
ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ–ಕಾಲೇಜುಗಳಿಗೆ ಜಿಲ್ಲಾಡಳಿತದಿಂದ ರಜೆ ಘೋಷಿಸಲಾಗಿತ್ತು. ಇದರಿಂದಾಗಿ, ಕ್ಯಾಂಪಸ್‌ಗಳಲ್ಲಿ ಮಕ್ಕಳು–ವಿದ್ಯಾರ್ಥಿಗಳ ಕಲರವ ಕಂಡುಬರಲಿಲ್ಲ. ಅವರನ್ನು ಕರೆತರುವ ವಾಹನಗಳು ಕೂಡ ರಸ್ತೆಗಿಳಿಯಲಿಲ್ಲ. ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ರಸ್ತೆಗಿಳಿಯಲಿಲ್ಲ.
ಕೆಎಸ್‌ಆರ್‌ಟಿಸಿ ಬಸ್‌ಗಳ ಕಾರ್ಯಾಚರಣೆ ಇಲ್ಲದಿದ್ದರಿಂದ ಪ್ರಯಾಣಿಕರು ರೈಲು ನಿಲ್ದಾಣಕ್ಕೆ ತೆರಳಿ ತಮ್ಮ ಊರುಗಳಿಗೆ ಪ್ರಯಾಣಿಸಿದರು. ಗ್ರಾಮಾಂತರ ಹಾಗೂ ಹಾಗೂ ನಗರ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ಪ್ರಯಾಣಿಕರ ಓಡಾಟ ಇಲ್ಲದಿದ್ದರಿಂದ ಆವರಣವನ್ನು ಸಿಬ್ಬಂದಿ ಸ್ವಚ್ಛಗೊಳಿಸುತ್ತಿದ್ದುದು ಕಂಡುಬಂತು. ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ವೃತ್ತಗಳು, ರಸ್ತೆಗಳು ಹಾಗೂ ಮಾರುಕಟ್ಟೆ ಪ್ರದೇಶದಲ್ಲಿ ಬೆರಳೆಣಿಕೆಯಷ್ಟೇ ಜನರು ಕಂಡುಬಂದರು.
ಖಾಸಗಿ ಟ್ರಾವೆಲ್ಸ್ ವಾಹನಗಳು ಕೂಡ ರಸ್ತೆಗಿಳಿಯಲಿಲ್ಲ. ಕೆಲವು ಆಟೊರಿಕ್ಷಾಗಳು ಕೂಡ ಸೇವೆ ನೀಡಿದವು. ಮಧ್ಯಾಹ್ನದ ವೇಳೆಗೆ ಅವುಗಳ ಓಡಾಟವೂ ವಿರಳವಾಗಿತ್ತು. ಸಾರ್ವಜನಿಕರು ಸಂಚಾರಕ್ಕೆ ತಮ್ಮ ಖಾಸಗಿ ವಾಹನಗಳನ್ನು ಆಶ್ರಯಿಸಿದ್ದು ಕಂಡುಬಂತು.
ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದ್ದವು. ಮೈಸೂರು ಅರಮನೆಯಲ್ಲಿ ಬೆರಳೆಣಿಕೆಯ ವಿದೇಶಿಗರಷ್ಟೇ ಕಾಣಿಸಿದರು. ಚಾಮರಾಜೇಂದ್ರ ಮೃಗಾಲಯ, ರೈಲ್ವೆ ವಸ್ತುಸಂಗ್ರಹಾಲಯ, ಚಾಮುಂಡೇಶ್ವರಿ ದೇವಸ್ಥಾನದ ಆವರಣವೂ ಬಿಕೋ ಎನ್ನುತ್ತಿತ್ತು.
ಕೈಗಾರಿಗಳು, ವಾಣಿಜ್ಯ ಮಳಿಗೆಗಳು ಕೂಡ ಕಾರ್ಯ ಸ್ಥಗಿತಗೊಳಿಸಿದ್ದವು. ಲಾರಿ ಹಾಗೂ ಗೂಡ್ಸ್ ವಾಹನಗಳ ಸಂಚಾರವ ವಿರಳವಾಗಿತ್ತು.
ಎಂ.ಜಿ ರಸ್ತೆಯಲ್ಲಿನ ತರಕಾರಿ ಮಾರುಕಟ್ಟೆ ಸ್ತಬ್ಧವಾಗಿತ್ತು. ವರ್ತಕರು ವಹಿವಾಟಿಗಿಳಿಯದೇ ಬಂದ್ ಬೆಂಬಲಿಸಿದರು. ದೇವರಾಜ ಮಾರುಕಟ್ಟೆಯ ವ್ಯಾಪಾರಿಗಳು ಕೂಡ ವ್ಯವಹಾರ ನಡೆಸಲಿಲ್ಲ. ಗ್ರಾಹಕರು ಹಾಗೂ ವ್ಯಾಪಾರಿಗಳಿಂದ ತುಂಬಿ ತುಳುಕುತ್ತಿದ್ದ ರಸ್ತೆಗಳಲ್ಲಿ ಜನರ ಓಡಾಟ ವಿರಳವಾಗಿತ್ತು.
ಮುಂಜಾಗ್ರತಾ ಕ್ರಮವಾಗಿ, ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಂದೂಬಸ್ತ್ ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ಪ್ರತಿಭಟನಾ ಮೆರವಣಿಗೆಗಳು ನಡೆದವು. ಪ್ರಾಧಿಕಾರದ ತೀರ್ಪು ಹಾಗೂ ಸರ್ಕಾರಗಳ ನಡೆಯ ವಿರುದ್ಧ ಘೋಷಣೆಗಳು ಮೊಳಗಿದವು. ಕೆ.ಆರ್. ವೃತ್ತದ ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡಿ ಪ್ರತಿಭಟನಕಾರರನ್ನು ಪೊಲೀಸರು ತಡೆದರು.
ಸಂಜೆಯ ನಂತರ ನಗರ ಸಹಜ ಸ್ಥಿತಿಗೆ ಬಂದಿತು. ವರ್ತಕರು ಅಂಗಡಿಗಳನ್ನು ತೆರೆದು ವ್ಯಾಪಾರ–ವಹಿವಾಟು ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.