ADVERTISEMENT

ಮೂಲ ಸೌಕರ್ಯ ನೀಡುವುದೇ ಮೊದಲ ಆದ್ಯತೆ

ನೇಸರ ಕಾಡನಕುಪ್ಪೆ
Published 23 ಜೂನ್ 2018, 17:02 IST
Last Updated 23 ಜೂನ್ 2018, 17:02 IST
ಕೆ.ಮಹದೇವ
ಕೆ.ಮಹದೇವ   

ಮೈಸೂರು: ನಾಲ್ಕು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಕೆ.ಮಹದೇವ ಅವರು ಗ್ರಾಮೀಣ ಹಿನ್ನೆಲೆಯಲ್ಲಿ ಹೆಚ್ಚು ಗುರುತಿಸಿಕೊಂಡವರು. ಹಾಗಾಗಿ, ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಅವರು ಹೆಚ್ಚು ಗಮನ ನೀಡುವ ಆಶಯ ಹೊಂದಿದ್ದಾರೆ. ಹಳ್ಳಿ ಹಳ್ಳಿಗೂ ಒಳ್ಳೆಯ ರಸ್ತೆಗಳಿರಬೇಕು, ನೀರಿನ ಸೌಲಭ್ಯ ಇರಬೇಕು. ಕೃಷಿಕರ ಜಮೀನುಗಳಿಗೆ ನೀರಾವರಿ ಸಿಗುವಂತಾಗಬೇಕು ಎನ್ನುವುದು ಇವರ ಮುಖ್ಯ ಆಶಯ. ಈ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣ ತಾಲ್ಲೂಕಿಗೆ ಮೂಲ ಸೌಕರ್ಯ ದೊರಕಿಸಿಕೊಡಲು ಮಹದೇವ ಬದ್ಧರಾಗಿದ್ದಾರೆ.

ನಿಮ್ಮ ಗೆಲುವಿಗೆ ಪ್ರಮುಖವಾದ ಕಾರಣಗಳು ಏನಿರಬಹುದು?

ಕಳೆದ ವಿಧಾನಸಭೆಯಲ್ಲಿ ನಾನು ಕೆಲವೇ ಮತಗಳ ಅಂತರದಿಂದ ಸೋಲು ಕಂಡಿದ್ದೆ. ಜನರಿಗೆ ಹಿಂದೆ ಇದ್ದ ಶಾಸಕರ ಬಗ್ಗೆ ಬೇಸರ ಮೂಡಿತ್ತು. ಐದು ವರ್ಷಗಳಲ್ಲಿ ಅಭಿವೃದ್ಧಿ ಕಾರ್ಯಗಳೇ ಆಗದಿರುವುದಕ್ಕೆ ಜನತೆ ರೋಸಿಹೋಗಿದ್ದರು. ಬದಲಾವಣೆಯನ್ನು ಬಯಸಿದ ಜನ ನನ್ನನ್ನು ಆಯ್ಕೆ ಮಾಡಿದ್ದಾರೆ.

ADVERTISEMENT

ಅಲ್ಲದೇ, ನಾನೊಬ್ಬ ಸಮರ್ಥ ನಾಯಕ. ನನಗೆ ಕಳೆದ ಚುನಾವಣೆಯಲ್ಲಿ ಆದ ಸೋಲು ತರವಲ್ಲ ಎಂದು ಭಾವಿಸಿ ನನ್ನ ಕೈ ಹಿಡಿದಿದ್ದಾರೆ. ಇದರ ಜತೆಗೆ ನಾನು ಜನರ ಜತೆ ಗುರುತಿಸಿಕೊಂಡವನು. ಜೆಡಿಎಸ್ ಜನರ ಪಕ್ಷ. ಕುಮಾರಸ್ವಾಮಿ ಅವರ ಮೇಲಿನ ಪ್ರೀತಿ ನನಗೂ ಗೆಲುವಿಗೆ ಹತ್ತಿರ ಕರೆದು ತಂದಿದೆ.

ನೀವು ಜನರಿಗೆ ಪ್ರಮುಖವಾಗಿ ನೀಡಿದ್ದ ಭರವಸೆಗಳೇನು?

ಇದು ಸಾಕಷ್ಟು ಹಿಂದುಳಿದಿರುವ ಕ್ಷೇತ್ರವಾಗಿದೆ. ಹಿಂದಿದ್ದ ಶಾಸಕರು ಸೌಕರ್ಯ ನೀಡುವಲ್ಲಿ ವಿಫಲರಾಗಿದ್ದಾರೆ. ಇದನ್ನು ಸರಿ ಪಡಿಸುವೆ. ತಂಬಾಕು ಬೆಳೆಯುತ್ತಿರುವ ನನ್ನ ರೈತರಿಗೆ ಬೆಂಬಲ ಬೆಲೆ ಕೊಡಿಸುವೆ. ರೈತರೊಂದಿಗೆ ನಾನು ಇದ್ದೇನೆ ಎಂದು ಭರವಸೆ ನೀಡಿದ್ದೆ. ನನ್ನ ಪ್ರಕಾರ ಯಾವುದೇ ಕ್ಷೇತ್ರದ ಅಭಿವೃದ್ಧಿ ಆಗಬೇಕಿರುವುದು ಗ್ರಾಮಾಂತರ ಪ್ರದೇಶಗಳಲ್ಲಿ. ಅದನ್ನು ನಾನು ಚುನಾವಣಾ ಪೂರ್ವದಲ್ಲಿ ಜನರ ಮುಂದೆ ಮಂಡಿಸಿದೆ. ಹಳ್ಳಿಗಳ ಶ್ರೇಯಸ್ಸಿಗೆ ದುಡಿಯುವೆ ಎಂದು ಹೇಳಿದ್ದೆ. ಇವು ನನ್ನನ್ನು ಗೆಲುವಿನ ದಡಕ್ಕೆ ಕರೆ ತಂದಿದೆ.

ಕ್ಷೇತ್ರದಲ್ಲಿ ಪ್ರಮುಖವಾಗಿ ಕಾಡುತ್ತಿರುವ ಸಮಸ್ಯೆಗಳೇನು?

ಪಿರಿಯಾಪಟ್ಟಣದಲ್ಲಿರುವ ಮುಖ್ಯ ಸಮಸ್ಯೆಯೆಂದರೆ ಹಳ್ಳಿಗಳ ಬೆಳವಣಿಗೆ ಆಗದೇ ಇರುವುದು. ಇಲ್ಲಿನ ನಾಗರಿಗೆ ಸೌಲಭ್ಯಗಳೇ ಇಲ್ಲ. ನಗರ ಪ್ರದೇಶಗಳಿಗೆ ಮಾತ್ರ ಎಲ್ಲ ನಾಗರಿಕ ಸೌಲಭ್ಯ ಸಿಕ್ಕಿಬಿಟ್ಟರೆ ಸಾಕೇನು? ಹಳ್ಳಿಗರಿಗೆ ಬೇಡವೇನು? ಗ್ರಾಮಾಂತರ ಪ್ರದೇಶಗಳಲ್ಲೂ ಒಳ್ಳೆಯ ರಸ್ತೆ ಇರಬೇಕು. ಒಳಚರಂಡಿ ಸೌಲಭ್ಯ ಚೆನ್ನಾಗಿರಬೇಕು. ಕುಡಿಯಲು ನೀರು ಸಿಗಬೇಕು. ಕುಡಿಯಲು ನೀರು ಕೊಡಬೇಕು. ಇದರಿಂದ ಗ್ರಾಮೀಣರು ವಂಚಿತರಾಗಬಾರದು.

ಜನರು ನಿಮ್ಮನ್ನು ಸಂಪರ್ಕಿಸಬೇಕು ಎಂದರೆ ಏನು ಮಾಡಬೇಕು?

ನನ್ನ ಮೊಬೈಲ್‌ ಫೋನಿಗೆ ಕರೆ ಮಾಡಿದರೆ ಸಾಕು. ಸಮಸ್ಯೆ ಇರುವ ಜಾಗಕ್ಕೆ ನಾನೇ ಹೋಗುತ್ತೇನೆ. ನನ್ನಲ್ಲಿಗೇ ಬರಬೇಕು ಎಂದು ನಾನು ನಿರೀಕ್ಷೆಯನ್ನೇ ಮಾಡುವುದಿಲ್ಲ. ನನ್ನ ಕಚೇರಿ ಜನರಿಗಾಗಿ ಸದಾ ತೆರೆದಿರುತ್ತದೆ. ನಾನು ಕ್ಷೇತ್ರದಲ್ಲಿ ಸದಾಕಾಲ ಲಭ್ಯವಿರುತ್ತೇನೆ. ನಾಗರಿಕರು ತಮ್ಮೆಲ್ಲ ಸಮಸ್ಯೆಗಳನ್ನು ನನ್ನ ಬಳಿ ತೆರೆದಿಟ್ಟರೆ ಸಾಕು. ಅವನ್ನು ಪರಿಹರಿಸಲು ನಾನು ತುಡಿಯುತ್ತೇನೆ. ಇದಕ್ಕಾಗಿ ಅಧಿಕಾರಿಗಳ ಸಂಪರ್ಕದಲ್ಲೂ ನಾನಿದ್ದು, ಅವರಿಂದ ಸಹಕಾರ ಬಯಸುತ್ತೇನೆ.

ಗ್ರಾಮ ವಾಸ್ತವ್ಯ, ಜನತಾ ದರ್ಶನದಂತಹ ಕಾರ್ಯಕ್ರಮಗಳಿವೆಯೇನು?

ಈಗಾಗಲೇ ನಾನು ಗ್ರಾಮ ಸಂಚಾರ ಶುರು ಮಾಡಿದ್ದೇನೆ. ಚುನಾವಣೆಯ ಸಂದರ್ಭದಲ್ಲಿ ಭೇಟಿ ನೀಡಿದ್ದ ಹಳ್ಳಿಗಳಿಗೆಲ್ಲಾ ಆಗಲೇ ಹೋಗುತ್ತಿದ್ದೇನೆ. ತಾಲ್ಲೂಕಿನ ಎಲ್ಲ ಹಳ್ಳಿಗಳಲ್ಲೂ ಸಂಚರಿಸಿ ಜನರನ್ನು ಭೇಟಿ ಮಾಡಿ ಸಮಸ್ಯೆಯನ್ನು ಖುದ್ದಾಗಿ ಆಲಿಸುವುದು ನನ್ನ ಆದ್ಯತೆ.

ಮಂದಗತಿಯಲ್ಲಿ ಸಾಗಿದೆ ನೀರು ತುಂಬುವ ಕಾಮಗಾರಿ

ಮೈಸೂರು: ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಪ್ರಮುಖವಾಗಿ ಕಾಡುತ್ತಿರುವುದು ನೀರಿನ ಕೊರತೆ. ಇದನ್ನು ನೀಗಿಸಲೆಂದು ಶುರುವಾಗಿದ್ದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯು ಕುಂಟುತ್ತ ಸಾಗುತ್ತಿರುವುದು ಗ್ರಾಮಾಂತರ ಪ್ರದೇಶದ ಜನರಲ್ಲಿ ಬೇಸರ ಮೂಡಿಸಿದೆ.

ಕೆ.ವೆಂಕಟೇಶ್ ಶಾಸಕರಾಗಿದ್ದ ಅವಧಿಯಲ್ಲಿ ಚಾಲನೆ ದೊರೆತಿದ್ದ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಇದುವರೆಗೂ ₹ 15 ಕೋಟಿ ಮಾತ್ರ ಬಿಡುಗಡೆಯಾಗಿದ್ದು, ಬಾಕಿ ಕಾಮಗಾರಿ ಹಾಗೆಯೇ ಉಳಿದಿದೆ. ಗುತ್ತಿಗೆದಾರರಿಗೆ ಹಣ ಸಿಗದ ಕಾರಣ, ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಇದಕ್ಕೆ ಹೊಂದಿಕೊಂಡಂತೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯೂ ಕುಂಟುತ್ತ ಸಾಗಿದೆ.

ಇದರ ಜತೆಗೆ ಶೈಕ್ಷಣಿಕವಾಗಿಯೂ ಸೌಕರ್ಯ ಬೇಕು ಎನ್ನುವುದು ಕ್ಷೇತ್ರದ ಜನರ ಬಯಕೆ. ಪಾಲಿಟೆಕ್ನಿಕ್‌ ಕಾಲೇಜು ಆರಂಭಕ್ಕೆ ಅನುಮತಿ ದೊರೆತಿದ್ದು, ಜಾಗವೂ ಸಿಕ್ಕಿದೆ. ಆದರೆ, ಕಾಮಗಾರಿ ಆರಂಭಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಶುಚಿತ್ವದ ಸಮಸ್ಯೆ ಇದ್ದು, ವೈದ್ಯರ ಕೊರತೆಯೂ ಇದೆ. ಬಹುತೇಕ ವೈದ್ಯರು ತಾಲ್ಲೂಕಿನಲ್ಲಿ ವಾಸವಿಲ್ಲದ ಕಾರಣ, ಮೈಸೂರಿನಿಂದ ಬರುತ್ತಿದ್ದಾರೆ. ಇದರಿಂದ ತುರ್ತು ಪರಿಸ್ಥಿತಿಗಳಲ್ಲಿ ವೈದ್ಯರ ಕೊರತೆ ಕಾಣುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.