ಮೈಸೂರು: ‘ಮೀಸಲಾತಿ ವಿಚಾರದಲ್ಲಿ ಡಿ.ದೇವರಾಜ ಅರಸು ಮೋಸ ಮಾಡಿದರು ಎಂದು ಶಾಸಕ ಅರವಿಂದ ಬೆಲ್ಲದ ಅವರ ಹೇಳಿಕೆ ಖಂಡನೀಯ. ಅವರು ಮೈಸೂರು ಸಂಸ್ಥಾನ ಹಾಗೂ ಕರ್ನಾಟಕ ಸರ್ಕಾರದ ಇತಿಹಾಸ ಅಧ್ಯಯನ ನಡೆಸಿ ಮಾತನಾಡಬೇಕು’ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರತಿಪಾದಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ವಿದೇಶದಲ್ಲಿ ಪದವಿ ಪಡೆದ ಬೆಲ್ಲದ ಅವರಿಗೆ ಕರ್ನಾಟಕದ ಇತಿಹಾಸದ ಕುರಿತು ಮಾಹಿತಿಯ ಕೊರತೆ ಇದೆ. ಮೀಸಲಾತಿ ಹಾಗೂ ಸಾಮಾಜಿಕ ನ್ಯಾಯದ ವಿಚಾರದಲ್ಲಿ ಕರ್ನಾಟಕವು ದೇಶಕ್ಕೇ ಮಾದರಿ. ಸಂವಿಧಾನ ಅನುಷ್ಠಾನಕ್ಕೂ ಮೊದಲೇ ಮೈಸೂರು ಸಂಸ್ಥಾನದಲ್ಲಿ ರಾಜಮನೆತನ ಮೀಸಲಾತಿ ಜಾರಿಗೊಳಿಸಿತ್ತು. ಅರಸು ಅವರೂ ಅದನ್ನೇ ಮುಂದುವರೆಸಿ ಸಣ್ಣ ಸಮುದಾಯಗಳ ಧ್ವನಿಯಾದರು. ಅವರ ಮುಂದೆ ಸಮಾಜದ ಸ್ಥಿತಿಗತಿ, ಬಡತನ, ಅವಮಾನ, ಅವಹೇಳನ ಕಿತ್ತೊಗೆಯುವ ಉದ್ದೇಶವಿತ್ತೇ ಹೊರತು ಜಾತಿಯ ಕಂದಕವಿರಲಿಲ್ಲ’ ಎಂದರು.
‘ಭೂ ಸುಧಾರಣೆ, ಜೀತ ಪದ್ಧತಿ ನಿವಾರಣೆ, ಗಂಗಾ ಕಲ್ಯಾಣ ಯೋಜನೆಗಳನ್ನು ಅರಸು ಯಾವುದೇ ಜಾತಿಗೆ ಸೀಮಿತಗೊಳಿಸಲಿಲ್ಲ. ಲಿಂಗಾ ಯತರೂ ಮೀಸಲಾತಿ ಫಲಾನುಭವಿ ಗಳಾಗಿದ್ದಾರೆ. ಅವರ ಅಧಿಕಾರಾವಧಿ ಯಲ್ಲೇ ಅನೇಕ ಲಿಂಗಾಯತ ಸಮುದಾಯದ ನಾಯಕರು ಸಚಿವರಾಗಿದ್ದರು. ಈಚೆಗೆ ಸ್ವಾಮೀಜಿಗಳೇ ರಾಜಕಾರಣಿ ಗಳಾಗುತ್ತಿದ್ದು, 2 ಎಗೆ ತಮ್ಮನ್ನು ಸೇರಿಸಬೇಕೆಂದು ಜಯ ಮೃತ್ಯುಂಜಯ ಸ್ವಾಮೀಜಿ ಹೋರಾಡುತ್ತಿದ್ದಾರೆ. 2 ಎಗೆ ಸೇರಿಸಿದರೆ ಅದರಲ್ಲಿರುವ ಅನೇಕ ಸಣ್ಣ ಸಮುದಾಯಗಳು ನಿಮ್ಮ ನಡುವೆ ಓಡಲು ಸಾಧ್ಯವೇ’ ಎಂದು ಪ್ರಶ್ನಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಶೋಷಿತರ ಧ್ವನಿ ಯಾಗಿದ್ದರು, ಈಗ ಭ್ರಷ್ಟರ ಧ್ವನಿಯಾಗಿ, ಭಾಷಣಕ್ಕಷ್ಟೇ ಸೀಮಿತವಾಗಿದ್ದಾರೆ.ಹೀಗಾಗಿಯೇ ಕಾಂತರಾಜುವರದಿಯನ್ನು ಬಹಿರಂಗಪಡಿಸಿಲ್ಲ’ ಎಂದು ಟೀಕಿಸಿದರು.
ಬಿಜೆಪಿ ವಿರುದ್ಧದ ಪ್ರಕರಣಗಳ ತನಿಖೆಗೆ ಸಮಿತಿ ರಚಿಸಿರುವ ಕುರಿತು ಪ್ರತಿಕ್ರಿಯಿಸಿ, ‘ಜಿಂದಾಲ್‌ಗೆ ಭೂಮಿ ನೀಡಿರುವ ಹಗರಣದಲ್ಲಿ ಸಿದ್ದರಾಮಯ್ಯ ಕೂಡ ಭಾಗಿಯಾಗಿದ್ದಾರೆ. ಅದು ಬಿಜೆಪಿ ಕಾಲದಲ್ಲಿ ನಡೆದ ಪ್ರಕರಣ, ನಮ್ಮ ಆಡಳಿತದಲ್ಲಿ ಒಪ್ಪಿಗೆಯನ್ನಷ್ಟೇ ನೀಡಿದ್ದೇವೆ ಎನ್ನುವುದು ಹಾಸ್ಯಾಸ್ಪದ. ಹಾಗಿದ್ದರೆ, ಅವರು ಬಿಜೆಪಿಯ ನೆರಳೇ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.