ಬೆಟ್ಟದಪುರ: ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೀಪಾವಳಿ ದೀವಟಿಗೆ ಉತ್ಸವವನ್ನು ವೈಭವದಿಂದ ಆಚರಿಸಲು ಗ್ರಾಮಸ್ಥರು ಸಿದ್ಧತೆ ಕೈಗೊಂಡಿದ್ದು, ನ.2ರಂದು ಉತ್ಸವ ನಡೆಯಲಿದೆ.
ಐತಿಹಾಸಿಕ ಧಾರ್ಮಿಕ ಆಚರಣೆಯಾಗಿ ನಡೆದು ಬಂದಿರುವ ಈ ಉತ್ಸವದಲ್ಲಿ ಬೆಟ್ಟದಪುರ ಮಾತ್ರವಲ್ಲದೆ, ಸುತ್ತಲಿನ ನೂರಾರು ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿ ದೀವಟಿಗೆ ಸೇವೆ ಸಲ್ಲಿಸುವುದು ಹಬ್ಬದ ವಿಶೇಷ.
ಧಾರ್ಮಿಕ ನಂಬಿಕೆ: ಪ್ರತಿ ವರ್ಷ ಫೆಬ್ರವರಿ ಮಾಹೆಯಲ್ಲಿ ಬರುವ ಭಾರತ ಹುಣ್ಣಿಮೆಯೆಂದು ಬೆಟ್ಟದಪುರದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಭ್ರಮರಾಂಭ ಉತ್ಸವ ಮೂರ್ತಿಗಳಿಗೆ ಗಿರಿಜಾ ಕಲ್ಯಾಣೋತ್ಸ ನಡೆಸಲಾಗುತ್ತದೆ. ಅದಕ್ಕೆ ಪೂರ್ವಭಾವಿಯಾಗಿ ಮಹಾಲಯ ಅಮಾವಾಸ್ಯೆ (ಆಯುಧ ಪೂಜೆ) ಸಮಯದಲ್ಲಿ ಹೆಣ್ಣು ನೋಡುವ ಶಾಸ್ತ್ರ, ದೀಪಾವಳಿ ಹಬ್ಬದಂದು ನಿಶ್ಚಿತಾರ್ಥ ನೆರವೇರಿಸುವ ಸಂಪ್ರದಾಯ ಈಗಲೂ ನಡೆದುಕೊಂಡು ಬಂದಿದೆ.
ನ.1ರಂದು ಮುಂಜಾನೆಯಿಂದಲೇ ಸಾವಿರಾರು ಭಕ್ತರು 3600 ಮೆಟ್ಟಿಲುಗಳನ್ನು ಏರುವ ಮೂಲಕ ಬೆಟ್ಟದ ಮೇಲಿರುವ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ. ದೇವರ ಧಾರ್ಮಿಕ ಕಾರ್ಯಕ್ರಮಗಳನ್ನು ಉಪ್ಪಾರ ಸಮುದಾಯದವರು ನಡೆಸುತ್ತಾರೆ, ಇವರೊಟ್ಟಿಗೆ ಗ್ರಾಮದ ಎಲ್ಲಾ ಸಮುದಾಯದವರು ಒಗ್ಗೂಡಿ ಸಂಭ್ರಮದಿಂದ ಉತ್ಸವ ಆಚರಿಸಲಾಗುತ್ತದೆ.
ಬೆಟ್ಟದಪುರದ ಬನ್ನಿಮಂಟಪ, ಬೆಟ್ಟದತುಂಗದಲ್ಲಿರುವ ಪ್ರಾಚೀನ ವೀರಭದ್ರೇಶ್ವರ ದೇವಾಲಯ ಹಾಗೂ ಕುಡುಕೂರಿನ ಬಸವೇಶ್ವರ ದೇವಾಲಯಗಳ ಸುತ್ತ ನಡೆಯುವ ಪಂಜಿನ ಪ್ರದಕ್ಷಿಣೆ ಮನಮೋಹಕವಾಗಿರುತ್ತದೆ. ಈ ಪಂಜಿನ ಬೆಳಕಿನಲ್ಲಿ ನಡೆಯುವ ಉತ್ಸವ ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವರು.
ಬೆಟ್ಟದಪುರ ಸೇರಿದಂತೆ ಬೆಟ್ಟವನ್ನು ಸುತ್ತುವರೆದಿರುವ ಪ್ರತಿಯೊಂದು ಗ್ರಾಮಗಳಲ್ಲಿ ಆಕರ್ಷಕ ಹಸಿರು ಮಂಟಪ (ಚಪ್ಪರ) ನಿರ್ಮಿಸಿ, ಆ ಮಂಟಪದಲ್ಲಿ ಬೆಟ್ಟದಿಂದ ಹೊತ್ತು ತರುವ ಉತ್ಸವ ಮೂರ್ತಿಗಳಿಗೆ ಪೂಜೆ ಮಾಡುವ ಮೂಲಕ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿಕೊಳ್ಳುವರು.
‘ಇದೊಂದು ವಿಭಿನ್ನ ಆಚರಣೆಯಾಗಿದ್ದು, ಕುಡಕೂರು ಹಾಗೂ ಬೆಟ್ಟದತುಂಗ ಗ್ರಾಮಗಳಲ್ಲಿ ನಡೆಯುವ ದೀವಟಿಗೆ ಪ್ರದಕ್ಷಿಣೆ ಅತ್ಯಂತ ಮನಮೋಹಕವಾಗಿರುತ್ತದೆ’ ಎಂದು ಸ್ಥಳೀಯ ಮುಖಂಡ ನಾಗರಾಜೇಗೌಡ ತಿಳಿಸಿದರು.
‘ದೀವಟಿಗೆಗಾಗಿ ಭಕ್ತರ ಅನುಕೂಲಕ್ಕಾಗಿ ಬೆಟ್ಟದ ತಪ್ಪಲಿನಲ್ಲಿ ಆರೋಗ್ಯ ಇಲಾಖೆಯಿಂದ ಪ್ರಥಮ ಚಿಕಿತ್ಸೆ ವ್ಯವಸ್ಥೆ ಹಾಗೂ ಆಂಬುಲೆನ್ಸ್ ಕಲ್ಪಿಸಲಾಗಿದೆ’ ಎಂದು ವೈದ್ಯಾಧಿಕಾರಿ ಪೂಜಾ ಹೇಳಿದರು.
ತಹಶೀಲ್ದಾರ್ ಪರಿಶೀಲನೆ: ದೀವಟಿಗೆ ಉತ್ಸವ ಸಾಗುವ ಎಲ್ಲಾ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸ್ವಚ್ಛತಾ ಕಾರ್ಯ ಹಾಗೂ ಸಂಬಂಧಿಸಿದ ಪೂರ್ವ ಸಿದ್ಧತೆಗಳನ್ನು ತಹಸೀಲ್ದಾರ್ ನಿಸರ್ಗಪ್ರಿಯ ಪರಿಶೀಲಿಸಿದರು. ಈ ವೇಳೆ ಪಿಎಸ್ಐ ಶಿವಶಂಕರ್, ಕಂದಾಯ ನಿರೀಕ್ಷಕ ಅಜ್ಮಲ್ ಷರೀಫ್, ಸಿಬ್ಬಂದಿ ನಿರಂಜನ್, ಮಹೇಂದ್ರ ಇದ್ದರು.
ಬೆಟ್ಟದ ಸುತ್ತ ಬರುವ ಪಂಚಾಯಿತಿ ವ್ಯಾಪ್ತಿಗಳಿಗೆ ಸ್ವಚ್ಛತೆ ಕುಡಿಯುವ ನೀರಿನ ವ್ಯವಸ್ಥೆ ತಿಳಿಸಲಾಗಿದೆ. ಬೆಟ್ಟದಲ್ಲಿ ನೂಕು ನುಗ್ಗಲು ಉಂಟಾದಂತೆ ಪೊಲೀಸ್ ವ್ಯವಸ್ಥೆ ಕಲ್ಪಿಸಲಾಗಿದೆ.ಶಶಿಧರ್ ಉಪತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.