ADVERTISEMENT

ಮಹಿಷ ದಸರೆಯ ಚಪ್ಪರ ಕಿತ್ತವರು ಗುಲಾಮರು: ಪ್ರೊ.ಕೆ.ಎಸ್.ಭಗವಾನ್

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2019, 9:33 IST
Last Updated 28 ಸೆಪ್ಟೆಂಬರ್ 2019, 9:33 IST
   

ಮೈಸೂರು: ಚಾಮುಂಡಿಬೆಟ್ಟದಲ್ಲಿ ಮಹಿಷ ದಸರೆ ಆಚರಣೆಗಾಗಿ ಹಾಕಲಾಗಿದ್ದ ಚಪ್ಪರವನ್ನು ಕಿತ್ತು ಹಾಕಿ, ಪೊಲೀಸರ ವಿರುದ್ಧ ಕೀಳುಮಟ್ಟದ ಪದ ಪ್ರಯೋಗಿಸಿದವರು ಮನುಸ್ಕೃತಿಯಲ್ಲಿ ಹೇಳಿರುವ ರೀತಿಯಲ್ಲಿ ಗುಲಾಮರು ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಹರಿಹಾಯ್ದರು.

ಎಲ್ಲ ಶೂದ್ರರೂ ಬ್ರಾಹ್ಮಣರ ಗುಲಾಮರು ಎಂದು ಮನುಸ್ಕೃತಿಯಲ್ಲಿ ಬರೆದಿದೆ. ಇದನ್ನು ಒಪ್ಪುವವರೆಲ್ಲರೂ ಬ್ರಾಹ್ಮಣರ ಗುಲಾಮರೇ ಆಗಿದ್ದಾರೆ. ಈ ಗುಂಪಿಗೆ ಚಪ್ಪರ ಕಿತ್ತವರು ಸೇರುತ್ತಾರೆ ಎಂದು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪೊಲೀಸರು ಬಹಳ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಇಂತಹ ದಕ್ಷ ಪೊಲೀಸರನ್ನು ಬಹಳ ನಿಷ್ಠಾವಂತರಾದ ಗುಲಾಮರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇಂತಹವರ ವಿರುದ್ಧ ನಾವು ಬಯ್ಯಬಹುದು. ಆದರೆ, ‘ಆನೆ ಬೀದಿಲಿ ಬರಲು ಶ್ವಾನ ತಾ ಬೊಗಳುವುದು ಶ್ವಾನದಂತೆ ಆನೆ ಬೊಗಳಿದರೆ ಆನೆಯ ಮಾನವೇ ಹಾನಿ ಸರ್ವಜ್ಞ’ ಎಂಬ ಸರ್ವಜ್ಞನ ವಚನದಂತೆ ನಾವು ಅವರನ್ನು ನಿಂದಿಸುವುದಿಲ್ಲ’ ಎಂದು ಲೇವಡಿ ಮಾಡಿದರು.

ADVERTISEMENT

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಶುಕ್ರವಾರವಷ್ಟೇ ಬುದ್ದನ ದೇಶದಿಂದ ಬಂದಿದ್ದೇನೆ ಎಂದು ಹೇಳಿದ್ದಾರೆಯೇ ಹೊರತು ರಾಮನ ದೇಶದಿಂದ ಬಂದಿದ್ದೇನೆ ಎಂದು ಹೇಳಿಲ್ಲ. ಅವರಿಗೆ ತಾಕತ್ತಿದ್ದರೆ ರಾಮ ಮಂದಿರದ ಜಾಗದಲ್ಲಿ ಬುದ್ದ ಮಂದಿರವನ್ನು ನಿರ್ಮಿಸಲಿ ಎಂದು ಸವಾಲೆಸೆದರು.

ಇತಿಹಾಸಕಾರ ಪ್ರೊ.ಪಿ.ವಿ.ನಂಜರಾಜೇಅರಸ್ ಮಾತನಾಡಿ, ‘ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲವು ರಾಜಕಾರಣಿಗಳು ಪಕ್ಷಾಂತರ ಮಾಡುವಂತೆ ಕಾಲದಿಂದ ಕಾಲಕ್ಕೆ ರೂಪಾಂತರ ಹೊಂದಿದೆ’ ಎಂದು ತಿಳಿಸಿದರು.

ಚಾವುಂಡರಾಯನ ಕಾಲದಲ್ಲಿ ಜೈನ ಯಕ್ಷಿಣಿಯಾಗಿದ್ದ ಚಾಮುಂಡೇಶ್ವರಿ ಮೂಲದಲ್ಲಿ ಒಂದು ಗ್ರಾಮದೇವತೆ. ಜೈನರ ನಂತರ ಶೈವರ ಕಾಲದಲ್ಲಿ ಶಿವಾಚಾರ್ಯರು ಇದನ್ನು ಪೂಜಿಸುತ್ತಾರೆ. ಟಿಪ್ಪು ನಂತರ ದಿವಾನ್ ಪೂರ್ಣಯ್ಯನವರ ಕಾಲದಲ್ಲಿ ತಮಿಳುನಾಡಿನಿಂದ ಆಗಮಿಕರನ್ನು ಕರೆಸಿ ಇದನ್ನು ಚಾಮುಂಡೇಶ್ವರಿ ದೇಗಲವನ್ನಾಗಿ ಮಾಡಲಾಗುತ್ತದೆ ಎಂದು ಹೇಳಿದರು.

‘ನಾವು ಆಯ್ಕೆ ಮಾಡಿದ ಸಂಸದರು ವಿನಾಕಾರಣ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪೊಲೀಸರನ್ನು ನಾನು ಕೈ ಮುಗಿದು ಕ್ಷಮೆ ಯಾಚಿಸುತ್ತೇನೆ. ಸಾಮಾನ್ಯ ನಾಗರಿಕ ಪೊಲೀಸರನ್ನು ನಿಂದಿಸಿದ್ದರೆ ಯಾವ ಪ್ರಕರಣಗಳನ್ನು ಪೊಲೀಸರು ದಾಖಲಿಸುತ್ತಿದ್ದರೋ ಅಂತಹದೇ ಪ್ರಕರಣಗಳನ್ನು ಸಂಸದರ ವಿರುದ್ಧ ದಾಖಲಿಸಬೇಕು’ ಎಂದು ಆಗ್ರಹಿಸಿದರು.

ಉಸ್ತುವಾರಿ ಸಚಿವ ವಿ.ಸೋಮಣ್ಣ ದಸರೆಯಲ್ಲಿ ಮಹಿಷ ದಸರಾ ಮತ್ತು ಮೈಸೂರು ದಸರಾ ಕುರಿತು ಚರ್ಚಾಗೋಷ್ಠಿಯನ್ನು ಏರ್ಪಡಿಸಬೇಕು ಎಂದು ಮನವಿ ಮಾಡಿದರು.

ದಲಿತ ವೆಲ್‌ಫೇರ್ ಟ್ರಸ್ಟ್‌ನ ಅಧ್ಯಕ್ಷ ಶಾಂತರಾಜು ಮಾತನಾಡಿ, ‘ಪತ್ರಿಕೋದ್ಯಮ ಪದವಿ ಪಡೆದಿರುವ ಸಂಸದರು ಸಂಶೋಧನೆ ನಡೆಸಲಿ. ನನಗೆ ಅವರ ಹೆಸರನ್ನು ಹೇಳಲೂ ಅಸಹ್ಯ ಎನಿಸುತ್ತದೆ’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.