ಬದನವಾಳು (ಮೈಸೂರು ಜಿಲ್ಲೆ): ‘ಅಧಿಕಾರದಲ್ಲಿ ಇರುವವರಿಗೆ ಮಹಾತ್ಮ ಗಾಂಧಿ ಪರಂಪರೆ ಬಗ್ಗೆ ಮಾತನಾಡುವುದು ಸುಲಭವಾಗಬಹುದು. ಆದರೆ, ಅವರ ಹಾದಿಯಲ್ಲಿ ಸಾಗುವುದು ಬಹಳ ಕಷ್ಟ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಇಲ್ಲಿನ ಖಾದಿ ಗ್ರಾಮೋದ್ಯೋಗ ಕೇಂದ್ರದ ಆವರಣದಲ್ಲಿ ಭಾನುವಾರ ನಡೆದ ಗಾಂಧಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಗಾಂಧೀಜಿ 1927ರಲ್ಲಿ ಈ ಕೇಂದ್ರಕ್ಕೆ ಭೇಟಿ ನೀಡಿದ್ದರು. ಇಲ್ಲಿ ಭಾರತ ಮಾತೆಯ ಶ್ರೇಷ್ಠ ಪುತ್ರನಿಗೆ ನಮನ ಸಲ್ಲಿಸುತ್ತಿದ್ದೇವೆ. ಭಾರತ ಜೋಡೊ ಯಾತ್ರೆಯ 25ನೇ ದಿನದಂದು ಸ್ಮರಣೆ ಮಾಡುತ್ತಿದ್ದೇವೆ. ಅಹಿಂಸೆ, ಏಕತೆ, ಸಮಾನತೆ ಹಾಗೂ ನ್ಯಾಯದ ಮಾರ್ಗದಲ್ಲಿ ಯಾತ್ರೆಯು ಸಾಗುತ್ತಿದೆ’ ಎಂದರು.
‘ಗಾಂಧಿಯನ್ನು ಕೊಂದವರ ಸಿದ್ಧಾಂತದ ವಿರುದ್ಧ ನಾವಿಂದು ಹೋರಾಟ ಮಾಡುತ್ತಿದ್ದೇವೆ. ಈ ಸಿದ್ಧಾಂತದ ಪರಿಣಾಮ 8 ವರ್ಷಗಳಿಂದ ದೇಶದಲ್ಲಿ ಅಸಮಾನತೆ, ಸಮಾಜ ವಿಭಜನೆ ಹಾಗೂ ಕಷ್ಟಪಟ್ಟು ಪಡೆದ ಸ್ವಾತಂತ್ರ್ಯದ ಹರಣವಾಗುತ್ತಿದೆ. ಈ ಹಿಂಸಾತ್ಮಕ ರಾಜಕೀಯ, ಅಸತ್ಯದ ವಿರುದ್ಧ ಭಾರತ ಐಕ್ಯತಾ ಯಾತ್ರೆ ಮೂಲಕ ಅಹಿಂಸೆ ಮತ್ತು ಸ್ವರಾಜ್ಯದ ಸಂದೇಶವನ್ನು ಪಸರಿಸಲಾಗುತ್ತಿದೆ’ ಎಂದು ತಿಳಿಸಿದರು.
‘ಸ್ವರಾಜ್ಯವೆಂದರೆ ಭಯದಿಂದ ಮುಕ್ತಿಗೊಳ್ಳುವುದು. ನಮ್ಮ ರೈತರು, ಯುವಕರು, ಸಣ್ಣ ಮತ್ತು ಮಧ್ಯಮ ಉದ್ಯಮಿಗಳು ಇದನ್ನೇ ಬಯಸುತ್ತಿದ್ದಾರೆ. ಭಯ, ದ್ವೇಷ ಹಾಗೂ ವಿಭಜನೆ ರಾಜಕೀಯದ ವಿರುದ್ಧ ದೇಶದ ಜನರು ಗಟ್ಟಿ ಧ್ವನಿ ಎತ್ತುವ ಯಾತ್ರೆ ಇದಾಗಿದೆ’ ಎಂದು ಹೇಳಿದರು.
‘ಯಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಿದ್ದಾರೆ. ಗಾಂಧೀಜಿನಮ್ಮ ಸಾಂವಿಧಾನಿಕ ಹಕ್ಕಿಗಾಗಿ ತ್ಯಾಗ ಬಲಿದಾನ ಮಾಡಿದ್ದರು. ಇಂದು ಆ ಹಕ್ಕುಗಳು ಅಪಾಯಕ್ಕೆ ಸಿಲುಕಿವೆ ಎಂಬುದು ಬಹುತೇಕರಿಗೆ ಮನದಟ್ಟಾಗಿದೆ’ ಎಂದು ಹೇಳಿದರು.
ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.