ADVERTISEMENT

ಸದಾಶಿವ ಆಯೋಗದ ವರದಿ ತಿರಸ್ಕರಿಸಿ: ಭೋವಿ ಸಂಘರ್ಷ ಸಮಿತಿ ಸದಸ್ಯರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 6:34 IST
Last Updated 26 ಅಕ್ಟೋಬರ್ 2024, 6:34 IST
ಸದಾಶಿವ ಆಯೋಗದ ವರದಿ ಜಾರಿಗೊಳಿಸಬಾರದು ಎಂದು ಆಗ್ರಹಿಸಿ ರಾಜ್ಯ ಭೋವಿ ಸಂಘರ್ಷ ಸಮಿತಿ ಸದಸ್ಯರು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿದರು –ಪ್ರಜಾವಾಣಿ ಚಿತ್ರ
ಸದಾಶಿವ ಆಯೋಗದ ವರದಿ ಜಾರಿಗೊಳಿಸಬಾರದು ಎಂದು ಆಗ್ರಹಿಸಿ ರಾಜ್ಯ ಭೋವಿ ಸಂಘರ್ಷ ಸಮಿತಿ ಸದಸ್ಯರು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿದರು –ಪ್ರಜಾವಾಣಿ ಚಿತ್ರ   

ಮೈಸೂರು: ಸದಾಶಿವ ಆಯೋಗದ ವರದಿ ಜಾರಿಗೊಳಿಸಬಾರದು ಎಂದು ಆಗ್ರಹಿಸಿ ರಾಜ್ಯ ಭೋವಿ ಸಂಘರ್ಷ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟಿಸಿದರು.

ಮಹದೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ನೂರಾರು ಪ್ರತಿಭಟನಕಾರರು ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿದರು.

ಸಮಿತಿಯ ಉಪಾಧ್ಯಕ್ಷ ಆರ್.ಮಂಜುನಾಥ್ ಮಾತನಾಡಿ, ‘ಸದಾಶಿವ ಆಯೋಗದ ವರದಿಯ ಶಿಫಾರಸಿನಂತೆ 101 ಉಪಜಾತಿಗಳಲ್ಲಿ 99 ಉಪಜಾತಿ ಜನರಿಗೆ ಅನ್ಯಾಯವಾಗಲಿದೆ. ಶೇ 15ರಷ್ಟು ಮೀಸಲಾತಿಯಲ್ಲಿ ಎಡಗೈಯವರಿಗೆ ಶೇ 6 ಹಾಗೂ ಬಲಗೈಯವರಿಗೆ ಶೇ 5ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಉಳಿದ ಶೇ 4ರಲ್ಲಿ 99 ಉಪಜಾತಿಗಳನ್ನು ಸೇರಿಸಿರುವುದು ವಿಷಾದನೀಯ’ ಎಂದು ಆರೋಪಿಸಿದರು.

ADVERTISEMENT

‘ವಸ್ತುಸ್ಥಿತಿಯ ಅಧ್ಯಯನ ನಡೆಸದೇ ವರದಿ ಸಿದ್ಧಪಡಿಸಲಾಗಿದೆ. ಸಂವಿಧಾನವು ಶೋಷಿತ ಸಮುದಾಯಕ್ಕೆ ನೀಡಿರುವ ಸೌಲಭ್ಯಗಳನ್ನು ಕೆಲ ಬಲಾಢ್ಯ ಸಮುದಾಯಗಳು ಕಬಳಿಸಿವೆ. ಇದರಿಂದ ಅಲ್ಪಸಂಖ್ಯಾತ ಶೋಷಿತ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಎಸ್‌ಸಿ ಸಮುದಾಯದ ಮೀಸಲಾತಿಯಿಂದ ಭೋವಿ, ಬಂಜಾರ, ಕೊರಚ ಸೇರಿದಂತೆ 51 ಜಾತಿಗಳನ್ನು ಕೈ ಬಿಡುವಂತೆ ಸದಾಶಿವ ಆಯೋಗದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಆ ವರದಿಯನ್ನು ಜಾರಿಗೊಳಿಸದೆ ತಿರಸ್ಕರಿಸಬೇಕು’ ಎಂದು ಆಗ್ರಹಿಸಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.ಲೋಕೇಶ್, ಸಹ ಕಾರ್ಯದರ್ಶಿ ಕೆ.ಮೋಹನ್ ಕುಮಾರ್, ವಿ.ನಾಗರಾಜು, ಆರ್.ಮಂಜುನಾಥ್, ಕೆ.ಹನುಮಂತು, ಪ್ರಮೀಳಾ ರಾಮಚಂದ್ರ, ಸುಗುಣ ಜಿ.ಗೋಪಾಲ್, ರಾಧಾ ಎಚ್. ಹನುಮಂತ, ಜಿ.ರಾಜಶೇಖರ್, ವಿ.ಶ್ರೀನಿವಾಸ, ಆರ್.ಮೋಹನ್ ಕುಮಾರ್, ಕೆ. ಮಂಜುನಾಥ್, ಎಸ್.ನಾಗೇಂದ್ರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.