ನಂಜನಗೂಡು: ‘ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ಷೇತ್ರಕ್ಕೆ ₹25 ಕೋಟಿ ವಿಶೇಷ ಅನುದಾನ ನೀಡಿದ್ದು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗುವುದಿಲ್ಲ’ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.
ತಾಲ್ಲೂಕಿನ ಹುಲ್ಲಹಳ್ಳಿಯಲಿ ಶುಕ್ರವಾರ ₹20 ಲಕ್ಷ ವೆಚ್ಚದ ಸಿ.ಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಹಾಗೂ ₹6 ಲಕ್ಷ ವೆಚ್ಚದಲ್ಲಿ ಆಟೋ ನಿಲ್ದಾಣದ ಶೆಲ್ಟರ್ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನಡೆಸಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಸಾಕಾಗದು. ಅಭಿವೃದ್ಧಿ ಕಾರ್ಯಗಳು ನಡೆಯುವುದಿಲ್ಲ ಎಂದು ವಿರೋಧ ಪಕ್ಷಗಳ ಟೀಕೆಗೆ ಉತ್ತರವಾಗಿ ಜಿಲ್ಲೆಯಾದ್ಯಂತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೂರಾರು ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಮುಂದಿನ ನಾಲ್ಕು ವರ್ಷಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಪರ್ವ ನಡೆಯಲಿದೆ ಎಂದರು.
ನನೆಗುದಿಗೆ ಬಿದ್ದಿದ್ದ ಹುಲ್ಲಹಳ್ಳಿ- ಹುರ ರಸ್ತೆ ಕಾಮಗಾರಿಗೆ ₹20 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಹುಲ್ಲಹಳ್ಳಿಯ ಕಪಿಲಾ ನದಿಗೆ ₹1 ಕೋಟಿ ವೆಚ್ಚದಲ್ಲಿ ಸೋಪಾನಕಟ್ಟೆ ನಿರ್ಮಾಣ ಸೇರಿದಂತೆ ₹20 ಕೋಟಿ ವೆಚ್ಚದಲ್ಲಿ ಕ್ಷೇತ್ರದಾದ್ಯಂತ ಎಲ್ಲ ಗ್ರಾಮಗಳಿಗೂ ಮೂಲಸೌಕರ್ಯ ಕಲ್ಪಿಸುವ ಸಲುವಾಗಿ ಮೀಸಲಿಡಲಾಗಿದೆ. ₹2.5 ಕೋಟಿ ಅನುದಾನದಲ್ಲಿ ವಿವಿಧ ಸಮುದಾಯಗಳಿಗಾಗಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಮುಖಂಡರಾದ ಕೇಶವಮೂರ್ತಿ, ಶ್ರೀಕಂಠ ನಾಯಕ, ಕೆ.ಮಾರುತಿ, ಕ್ಷೇತ್ರದ ಉಸ್ತುವಾರಿ ಹಿರೇಹಳ್ಳಿ ಸೋಮೇಶ್, ಗ್ರಾ.ಪಂ ಅಧ್ಯಕ್ಷೆ ದೇವಮ್ಮ, ಸದಸ್ಯರಾದ ಲೋಕೇಶ್, ಅನ್ಸರ್ ಅಹಮದ್, ಮುಖಂಡರಾದ ಎಂ.ಮಾದಪ್ಪ, ಅಭಿನಂದನ್ ಪಟೇಲ್, ಅಣ್ಣ ಬಸವಣ್ಣ, ಮಹಾದೇವಸ್ವಾಮಿ, ದುಗ್ಗಳ್ಳಿ ಶಿವನಾಗಪ್ಪ, ಹಾಡ್ಯ ಗ್ರಾ.ಪಂ ಅಧ್ಯಕ್ಷ ಹರೀಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.