ಮೈಸೂರು: ಒಂದೆಡೆ ಭರತನಾಟ್ಯ ಕಲಾವಿದೆ ಆರ್.ನಂದಿನಿ ಮತ್ತು ತಂಡದ ಸಾಂಸ್ಕೃತಿಕ ವೈಭವ, ಮತ್ತೊಂದೆಡೆ ಸಾಂಪ್ರದಾಯಿಕ ಧಿರಿಸಿನಲ್ಲಿ ಕಂಗೊಳಿಸಿದ ಮಹಿಳೆಯರು.. ರಸಪ್ರಶ್ನೆಗಳಿಗೆ ಉತ್ತರ ಹೇಳಿ ಬಹುಮಾನ ಪಡೆಯುವ ತವಕ.. ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಯುವತಿಯರು, ಗೃಹಿಣಿಯರು ಸಂಭ್ರಮಿಸಿದರು.
ನಗರದ ಸದರ್ನ್ ಸ್ಟಾರ್ ಹೋಟೆಲ್‌ನಲ್ಲಿ ‘ಫ್ರೀಡಂ ಹೆಲ್ದಿ ಕುಕ್ಕಿಂಗ್ ಆಯಿಲ್ ಸಹಯೋಗದಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ನ ‘ಭೂಮಿಕಾ ಕ್ಲಬ್’ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮವು ಮಹಿಳೆಯರ ಪ್ರತಿಭೆಗೆ ವಿಶೇಷ ವೇದಿಕೆಯಾಯಿತು.
ಅಂಗಳಕ್ಕಿಳಿದ ತಾರೆಯರು: ಸಾಂಪ್ರದಾಯಿಕ ಧಿರಿಸಿನಲ್ಲಿ ಬಂದಿದ್ದ ಮಹಿಳೆಯರು ಸಿನಿಮಾ ತಾರೆಯರನ್ನು ಅಂಗಳಿಕ್ಕಿಳಿಸಿದರು. ಕಲ್ಪನಾ ವೇಷಧಾರಿಯಾಗಿ ಬಂದಿದ್ದ ಭಾಗೀರಥಿ ‘ಶರಪಂಜರ’ ಸಿನಿಮಾ ಸಂಭಾಷಣೆ ಹಾಗೂ ‘ತಂನಂ ತಂನಂ’ ಹಾಡನ್ನು ಹೇಳಿ ರಂಜಿಸಿದರು. ಶರ್ಮಿಳಾ ಟ್ಯಾಗೋರ್ ವೇಷಧಾರಿಯಾಗಿದ್ದ ಯದುಗಿರಿ ‘ಕಾಶ್ಮೀರ್ ಕಿ ಕಲೀ’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿ ಸೆಳದರು.
ವೆಂಕಟಮ್ಮ ಅವರು ‘ಧರಣಿಗೆ ಗಿರಿ ಭಾರವೆ’ ಎಂದರೆ, ಶ್ರೀದೇವಿ ಕೃಷ್ಣ ಅವರು ‘ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು’ ಎಂದು ಹಾಡಿದರು. ನೇತ್ರಾವತಿ, ಶಾಂತಕುಮಾರಿ, ಸಾರಿಕಾ ಪ್ರಸಾದ್ ತಮ್ಮ ಇಷ್ಟದ ಹಾಡು ಹೇಳಿ ಎಲ್ಲರ ಚಪ್ಪಾಳೆ ಗಿಟ್ಟಿಸಿದರು.
ಗಮನ ಸೆಳೆದ ನೃತ್ಯ: ಶ್ರೀ ಸಾಯಿ ನೃತ್ಯಾಲಯದ ಆರ್.ನಂದಿನಿ ಮತ್ತು ತಂಡದವರು ಭರತನಾಟ್ಯ, ಜಾನಪದ ಹಾಗೂ ಸಿನಿಮಾ ಗೀತೆಗಳಿಗೆ ನೃತ್ಯ ಪ್ರದರ್ಶಿಸಿ ರಂಜಿಸಿದರು. ನೃತ್ಯಾಲಯದ ವಿದ್ಯಾರ್ಥಿಗಳಾದ ಪೂರ್ವಿ ಕಲ್ಯಾಣಿ, ಮನೋಜ್ಞ, ಧನ್ಯತಾ, ದೀಕ್ಷಿತಾ, ಪುನರ್ವಿ, ರಶ್ಮಿ, ಸೌಮ್ಯಾ, ವಿನ್ಯಾಸ್, ಧನುಶ್ರೀ, ರಕ್ಷಾ ಹೆಜ್ಜೆ ಹಾಕಿದರು.
‘ಕನ್ನಡದ ಮಾತು ಚೆನ್ನಾ’, ಭೂತಕೋಲದ ಗೀತೆ, ‘ಮೂಷಿಕ ವಾದನ ಮೋದಕ ಹಸ್ತಾ’, ‘ಕುಲದಲ್ಲಿ ಕೀಳ್ಯಾವುದೋ’ ಮೊದಲಾದ ಗೀತೆಗಳಿಗೆ ತಂಡವು ನೃತ್ಯ ಮಾಡಿ ರಂಜಿಸಿತು.
ಆರೋಹಿತಾ ಚಾಲನೆ: ಚಲನಚಿತ್ರ ನಟಿ ಆರೋಹಿತಾ ಗೌಡ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ, ‘ಮಹಿಳೆಯರು ಯಾರಿಗೂ ಕಡಿಮೆಯಿಲ್ಲ. ಹೆಣ್ಣಿಗಿರುವ ಶಕ್ತಿ ಬೇರೆ ಯಾರಿಗೂ, ಯಾವುದಕ್ಕೂ ಇಲ್ಲ. ಭೂಮಿ ತೂಕದಂತೆ ಹೆಣ್ಣು ಸಹನೆಯುಳ್ಳವಳು, ಮಕ್ಕಳು ಮತ್ತು ಕುಟುಂಬಕ್ಕಾಗಿ ಜೀವನವನ್ನೇ ಸವೆಸುವವಳು’ ಎಂದರು.
‘ಮಹಿಳೆಯರು ಬದುಕನ್ನು ಸುಂದರವಾಗಿಸುತ್ತಾರೆ. ಮಕ್ಕಳನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಮನೆ– ಉದ್ಯೋಗದಲ್ಲಿ ಕಷ್ಟ ಪಡುತ್ತಾರೆ. ನನ್ನ ಸಾಧನೆ ಹಿಂದೆ ತಾಯಿಯಿದ್ದರು. ಮನೆ– ಹೊರಗೆ ದುಡಿಯುವ ಎಲ್ಲ ಹೆಣ್ಣು ಮಕ್ಕಳೂ ದೇಶಕ್ಕೇ ಮಾದರಿ’ ಎಂದು ಅಭಿಪ್ರಾಯಪಟ್ಟರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ವಿಜಯಕುಮಾರ್ ನಾಗನಾಳ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ಮಹಿಳಾ ಸಂಘಗಳು ಆರ್ಥಿಕತೆಯನ್ನು ಸುಧಾರಿಸಿವೆ. ಅಲ್ಲದೇ, ಸ್ವಾವಲಂಬಿ ಬದುಕನ್ನು ರೂಪಿಸಿವೆ’ ಎಂದರು.
‘ಜಗತ್ತಿನಲ್ಲೇ ಹೆಣ್ಣಿಗೆ ಗೌರವ, ಪೂಜನೀಯ ಸ್ಥಾನವನ್ನು ಭಾರತ ನೀಡಿದೆ. ಆದರೆ, ಅಷ್ಟೇ ದೌರ್ಜನ್ಯ ನಡೆಯುತ್ತಿವೆ. ಅಸುರಕ್ಷಿತ ಭಾವನೆಯೂ ಇದೆ. ಇದನ್ನು ಹೋಗಲಾಡಿಸಲು ಸಮಾಜ ಶ್ರಮಿಸಬೇಕು. ಸಬಲೀಕರಣ ಮಾಡಬೇಕಿದೆ’ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮಕ್ಕೆ ‘ಸದರ್ನ್ ಸ್ಟಾರ್’ ಸಹಪ್ರಾಯೋಜಕತ್ವ ನೀಡಿತ್ತು. ಕಾರ್ಯಕ್ರಮವನ್ನು ಸ್ನೇಹಾ ಸೊಗಸಾಗಿ ನಿರೂಪಿಸಿದರು. ‘ಫ್ರೀಡಂ ಆಯಿಲ್’ನ ಸುರೇಶ್, ಟಿಪಿಎಂಎಲ್‌ನ ಪ್ರಮೋದ್, ‘ಪ್ರಜಾವಾಣಿ’ ಮೈಸೂರು ಬ್ಯೂರೊ ಮುಖ್ಯಸ್ಥ ಕೆ.ನರಸಿಂಹಮೂರ್ತಿ, ‘ಡೆಕ್ಕನ್ ಹೆರಾಲ್ಡ್’ ಬ್ಯುರೊ ಮುಖ್ಯಸ್ಥ ಟಿ.ಆರ್.ಸತೀಶ್‌ಕುಮಾರ್, ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಎಸ್.ಪ್ರಕಾಶ ಮತ್ತು ಜಾಹೀರಾತು ವಿಭಾಗದ ಶ್ರೇಯಸ್ ಉಪಸ್ಥಿತರಿದ್ದರು.
ಫ್ರೀಡಂ ಆಯಿಲ್‌ನ ಮಳಿಗೆಯಲ್ಲಿ ರಿಯಾಯಿತಿ ದರದ ಮಾರಾಟವೂ ನಡೆಯಿತು.
ಭಾಗ್ಯಶ್ರೀ ಗಾಯನ ಲಹರಿ
ಸುಗಮ ಸಂಗೀತ ಗಾಯಕಿ ಭಾಗ್ಯಶ್ರೀ ಗೌಡ ಅವರ ಸುಶ್ರಾವ್ಯ ಗಾಯನಕೆ ಮಹಿಳೆಯರು ಮನಸೋತರು. ದ.ರಾ.ಬೇಂದ್ರೆ ಅವರ ‘ನಾಕುತಂತಿ’ ಗಾಯನವು ಎಲ್ಲರನ್ನೂ ಭಾವ ತನ್ಮಯರನ್ನಾಗಿ ಮಾಡಿತು. ‘ಅಮೃತ ವರ್ಷಿಣಿ’ ಚಿತ್ರದ ‘ಈ ಸುಂದರ ಬೆಳದಿಂಗಳ’ ಗೀತೆ ಮಾಧುರ್ಯ ತುಂಬಿತ್ತು. ಬಂಗಾರ ಮನುಷ್ಯ ಚಿತ್ರದ ‘ಬಾಳ ಬಂಗಾರ ನೀನು’ ಹಾಡು ಎಲ್ಲರನ್ನೂ ಹಾಡಿಸಿದರೆ ‘ಕನ್ನಡ ನಾಡಿನ ಜೀವನದಿ ಈ ಕಾವೇರಿ’ ಎಲ್ಲರಲ್ಲೂ ಭಾವಪರವಶಗೊಳಿಸಿತು. ನಂತರ ಮಾತನಾಡಿ ‘ಮಹಿಳೆಯರು ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಉನ್ನತ ಸ್ಥಾನಕ್ಕೆ ಏರಬೇಕು. ನನಗೆ ಗಾಯನ ಅವಕಾಶ ನೀಡಿದ್ದೂ ಮಹಿಳಾ ಸಂಘವೇ. ಗೃಹಿಣಿಯರು ಮನೆಯಲ್ಲಿದ್ದು ವಿವಿಧ ಜವಾಬ್ದಾರಿ ನಿರ್ವಹಿಸುತ್ತಾರೆ. ಅವರಿಗೂ ಮಾನಸಿಕ ಒತ್ತಡಗಳಿರುತ್ತವೆ. ಹೀಗಾಗಿ ಕಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಡೇವಿಡ್– ದಯಾನಿಧಿ ‘ಪಾಕಕ್ರಾಂತಿ’
ಸದರ್ನ್ ಸ್ಟಾರ್ ಹೋಟೆಲ್‌ನ ಬಾಣಸಿಗರಾದ ಶೆಫ್ ಡೇವಿಡ್ ಹಾಗೂ ದಯಾನಿಧಿ ಅವರು ತಯಾರಿಸಿದ ಚೀನಾದ ರುಚಿಕರ ಸೂಪ್ ಎಲ್ಲರ ಮನ ಸೆಳೆಯಿತು. ‘ವಾಂಟನ್’ ಎಂದು ಕರೆಯಲಾಗುವ ಸೂಪ್ ಹುಟ್ಟಿದ ಬಗೆ ವಿವರಿಸಿದರು. ಎರಡನೇ ಮಹಾಯುದ್ಧದಲ್ಲಿ ಬೆಳಕಿಗೆ ಬಂದ ವಿಶ್ವದ ಅಚ್ಚುಮೆಚ್ಚಿನ ಸೂಪ್‌ಗಳಲ್ಲಿ ಒಂದಾಗಿದೆ ಎಂದರು. ತಾವು ಕನ್ನಡ ಕಲಿತ ಬಗೆಯನ್ನೂ ವಿವರಿಸಿ ಎಲ್ಲರ ಹುಬ್ಬೇರಿಸಿದರು. ಮುಖ್ಯ ಶೆಫ್ ಡೇವಿಡ್ ಅವರು ತಯಾರಿಸುವ ಬಗೆಯನ್ನು ವಿವರಿಸಿದರು. ಈ ವೇಳೆ ನಿರೂಪಕಿ ಸ್ನೇಹಾ ಅವರು ಅಡುಗೆ ಹಾಗೂ ಕನ್ನಡ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ ಬಹುಮಾನ ನೀಡಿದರು. ‘ಮೈಸೂರು ಪಾಕ್’ ತಯಾರಿಸಿದವರು ಯಾರೆಂಬ ಪ್ರಶ್ನೆಗೆ ‘ಕಾಕಾಸುರ ಮಾದಪ್ಪ’ ಎಂದ ಕೌಸಲ್ಯಾ ಹಾಗೂ ಕನ್ನಡದ ಮೊದಲ ನಾಟಕ ಯಾವುದೆಂಬುದಕ್ಕೆ ‘ಮಿತ್ರಾವಿಂದ ಗೋವಿಂದ’ ಎಂದು ಉತ್ತರಿಸಿದ ವಿಶಾಲಾಕ್ಷಿ ಬಹುಮಾನ ಪಡೆದರು.
‘ನಾವೆಲ್ಲ ಖುಷಿಪಟ್ಟೆವು’
ಭೂಮಿಕಾ ಕ್ಲಬ್ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿದೆ. ಮಹಿಳೆಯು ತನ್ನ ಸಾಮರ್ಥ್ಯವನ್ನು ಹೊರಹಾಕಲು ಈ ವೇದಿಕೆ ಪ್ರೋತ್ಸಾಹ ನೀಡಿದೆ. ಮಹಿಳಾ ಸಂಘದ ಸದಸ್ಯರೆಲ್ಲ ಬಂದು ಖುಷಿ ಪಟ್ಟೆವು ಜಯಶೀಲಾ ಬೆಳವಾಡಿ ‘ಒತ್ತಡ ಮರೆತೆವು’ ಕಲೆ ಸಂಸ್ಕೃತಿ ಹಾಗೂ ಪ್ರತಿಭೆ ಗೊತ್ತಿದ್ದವರಿಗೆ ಭೂಮಿಕಾ ಕ್ಲಬ್ ವೇದಿಕೆ ಒದಗಿಸಿದೆ. ನೂರಾರು ಮಹಿಳೆಯರು ಎಲ್ಲ ಒತ್ತಡ ಮರೆತು ಪ್ರತಿಭೆಯನ್ನು ತೋರಿ ಸಂಭ್ರಮಿಸಿದರು ಸೌಮ್ಯಾ ವಿಜಯನಗರ ‘ಹೊರ ಪ್ರಪಂಚವೇ ಗೊತ್ತಿರುವುದಿಲ್ಲ’ ಮನೆಯಲ್ಲಿದ್ದವರಿಗೆ ಹೊರಪ್ರಪಂಚವೇ ಗೊತ್ತಿರುವುದಿಲ್ಲ. ಸಮಾಜದಲ್ಲಿ ಮಹಿಳೆಯರ ಅವಶ್ಯಕತೆಗಳೇನು ಎಂಬುದನ್ನು ಅರಿತು ಕಾರ್ಯಕ್ರಮ ಆಯೋಜಿಸಲಾಗಿದೆ ಉಮಾ ರಾಮಕೃಷ್ಣನಗರ ‘ಸ್ಟಾರ್ ಹೋಟೆಲ್ ನೋಡಿದೆವು’ ಸ್ಟಾರ್ ಹೋಟೆಲ್ ನಾವು ನೋಡಿರಲಿಲ್ಲ. ಮಹಿಳಾ ಸಂಘದ ಗೆಳತಿಯರೊಂದಿಗೆ ಬಂದು ನೋಡಿದೆವು. ಇಲ್ಲಿನ ರುಚಿಕರ ತಿನಿಸು ಸವಿದೆವು ಕಾವ್ಯಾ ಕೇರ್ಗಳ್ಳಿ ‘ಹಾಡು ನೃತ್ಯ ಚೆನ್ನಾಗಿತ್ತು’ ಮಕ್ಕಳ ಹಾಡು– ನೃತ್ಯ ನೋಡುತ್ತಿರುತ್ತೇವೆ. ಮಹಿಳೆಯರಿಗೆ ಪ್ರತಿಭೆಯಿದ್ದರೂ ವೇದಿಕೆ ಇರುವುದಿಲ್ಲ. ಇಲ್ಲಿ ಬಂದವರು ಪ್ರತಿಭೆಯನ್ನು ತೋರಿದರು. ಕಾರ್ಯಕ್ರಮ ಇಷ್ಟವಾಯಿತು ರುಬಿನಾ ಬನ್ನಿಮಂಟಪ
ಯದುಗಿರಿಗೆ ಬಹುಮಾನ
ಸಾಂಪ್ರದಾಯಿಕ ಧಿರಿಸಿನ ಸ್ಪರ್ಧೆಯಲ್ಲಿ ಗೆದ್ದ 80 ವರ್ಷದ ಯದುಗಿರಿ ಅವರು ₹ 25 ಸಾವಿರ ಮೌಲ್ಯದ ವಾಟರ್ ಪ್ಯೂರಿಫೈಯರ್ ಪಡೆದರು. ಶರ್ಮಿಳಾ ಟ್ಯಾಗೋರ್ ವೇಷಧಾರಿಯಾಗಿದ್ದ ಅವರು ‘ಕಾಶ್ಮೀರ್ ಕಿ ಕಲೀ’ ಚಿತ್ರದ ಹಾಡಿಗೆ ಹೆಜ್ಜೆ ಹಾಕುತ್ತೇನೆಂದು ಹೇಳಿ ಕನ್ನಡ ಭಾವಗೀತೆ ಹಾಗೂ ಚಿತ್ರಗೀತೆಗಳಿಗೆ ಹೆಜ್ಜೆ ಹಾಕಿ ‘ನಾನು ಯಾರಿಗೂ ಕಮ್ಮಿಯಿಲ್ಲ’ ಎಂದು ಹುಬ್ಬೇರಿಸಿದರು. ಯುವತಿಯರು ಮಕ್ಕಳು ಅವರ ನೃತ್ಯಕ್ಕೆ ಚಪ್ಪಾಳೆಯ ಪ್ರೋತ್ಸಾಹ ಕೊಟ್ಟು ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.