ADVERTISEMENT

ಪಕ್ಷಿಲೋಕದ ಅಪರೂಪದ ಚಿತ್ರ ಸಂವಾದ...!

‘ಕಲರವ’ ಛಾಯಾಚಿತ್ರ ಪ್ರದರ್ಶನದಲ್ಲಿ ಕೃಪಾಕರ– ಸೇನಾನಿ ಮಾತು

ಮೋಹನ್‌ ಕುಮಾರ್‌ ಸಿ.
Published 2 ನವೆಂಬರ್ 2024, 6:54 IST
Last Updated 2 ನವೆಂಬರ್ 2024, 6:54 IST
ಮೈಸೂರಿನ ಕಲಾಮಂದಿರದ ಸುಚಿತ್ರಾ ಕಲಾ ಗ್ಯಾಲರಿಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಛಾಯಾಗ್ರಾಹಕರಾದ ಬಿ.ಶಿವಕುಮಾರ್, ಸುನಿಲ್ ಪಾಲಹಳ್ಳಿ, ಕೆ.ಜಿ.ಸಿದ್ದಲಿಂಗ ಪ್ರಸಾದ್ ಅವರ ಛಾಯಾಚಿತ್ರ ಪ್ರದರ್ಶನ ‘ಕಲರವ’ಕ್ಕೆ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ– ಸೇನಾನಿ ಚಾಲನೆ ನೀಡಿ ವೀಕ್ಷಿಸಿದರು. ಸ್ನೇಕ್‌ ಶ್ಯಾಮ್ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ: ಹಂಪ ನಾಗರಾಜ
ಮೈಸೂರಿನ ಕಲಾಮಂದಿರದ ಸುಚಿತ್ರಾ ಕಲಾ ಗ್ಯಾಲರಿಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಛಾಯಾಗ್ರಾಹಕರಾದ ಬಿ.ಶಿವಕುಮಾರ್, ಸುನಿಲ್ ಪಾಲಹಳ್ಳಿ, ಕೆ.ಜಿ.ಸಿದ್ದಲಿಂಗ ಪ್ರಸಾದ್ ಅವರ ಛಾಯಾಚಿತ್ರ ಪ್ರದರ್ಶನ ‘ಕಲರವ’ಕ್ಕೆ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ– ಸೇನಾನಿ ಚಾಲನೆ ನೀಡಿ ವೀಕ್ಷಿಸಿದರು. ಸ್ನೇಕ್‌ ಶ್ಯಾಮ್ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ: ಹಂಪ ನಾಗರಾಜ   

ಮೈಸೂರು: ‘ಸಾವಿರ ಪದಗಳ ಸಾರವನ್ನು ಒಂದು ಚಿತ್ರ ಹೇಳುತ್ತದೆ ಎಂಬುದನ್ನು ನಾನು ನಂಬಲಾರೆ. ಮರಕುಟಿಕ– ಗಿಳಿಯ ಜಗಳವಿರುವ ಈ ಚಿತ್ರ ನೋಡಿದರೆ ಅದರ ಹಿಂದಿನ ಸಾವಿರ ಕಥೆಯನ್ನು ನಾನು ಹೇಳಬಲ್ಲೆ’

ಹೀಗೆ, ಮಾತು ಆರಂಭಿಸಿದ ಗ್ರೀನ್‌ ಆಸ್ಕರ್ ಪ್ರಶಸ್ತಿ ಪುರಸ್ಕೃತ ವನ್ಯಜೀವಿ ಛಾಯಾಗ್ರಾಹಕ ಸೇನಾನಿ, ನಗರದ ಹೊರವಲಯದ ತಲ್ಲಣ, ಪಕ್ಷಿಲೋಕದ ಕಥೆ– ಉಪಕಥೆಗಳನ್ನು ಹೇಳಿ ನೆರೆದಿದ್ದವರನ್ನು ಅಚ್ಚರಿಗೊಳಿಸಿದರು.

ಕಲಾಮಂದಿರದ ಸುಚಿತ್ರಾ ಕಲಾ ಗ್ಯಾಲರಿಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಛಾಯಾಗ್ರಾಹಕರಾದ ಬಿ.ಶಿವಕುಮಾರ್, ಸುನಿಲ್ ಪಾಲಹಳ್ಳಿ, ಕೆ.ಜಿ.ಸಿದ್ದಲಿಂಗ ಪ್ರಸಾದ್ ಅವರ ಛಾಯಾಚಿತ್ರ ಪ್ರದರ್ಶನ ‘ಕಲರವ’ಕ್ಕೆ ಚಾಲನೆ ನೀಡಿ, ಛಾಯಾಗ್ರಹಣದ ಅಪರೂಪದ ಹೊಳಹುಗಳನ್ನು ಅನಾವರಣಗೊಳಿಸಿದರು.

ADVERTISEMENT

‘ಛಾಯಾಚಿತ್ರ ಸ್ಪರ್ಧೆಗಳನ್ನು ನಾನು– ಕೃಪಾಕರ ನೋಡುತ್ತಿರುತ್ತೇವೆ. ಎಲ್ಲಿ ತೆಗೆದಿರಿ, ಹೇಗೆ ತೆಗೆದಿರಿ ಎಂದೆಲ್ಲ ಕೇಳಿದಾಗ ಅವರು ಹೇಳುವುದೇ ರಂಗನತಿಟ್ಟು. ಅಪಾರ್ಚರ್, ಐಎಸ್‌ಒ ಎಷ್ಟಿತ್ತು ಎಂಬುದರಲ್ಲೆ ಅವರ ಚರ್ಚೆ ಮುಗಿಯುತ್ತದೆ. ಅದನ್ನು ದಾಟಿ ಯೋಚಿಸುವುದೇ ಇಲ್ಲ. ಆದರೆ, ಈ ಚಿತ್ರ ಪ್ರದರ್ಶನ ಭಿನ್ನವಾಗಿದ್ದು, ಚಿತ್ರಗಳೇ ಮಾತನಾಡುತ್ತಿವೆ’ ಎಂದು ಪ್ರದರ್ಶನಕ್ಕಿಟ್ಟಿದ ಚಿತ್ರಗಳನ್ನು ತೋರಿದರು.

‘ನಮ್ಮ ಕಾಡುಗಳಲ್ಲಿ ಪೊಟರೆಯಲ್ಲಿ ಗೂಡು ಮಾಡುವ ಹಕ್ಕಿಗಳಿಗೆ ಈಚೆಗೆ ತುಂಬಾ ಸಮಸ್ಯೆಯಾಗುತ್ತಿದೆ. ಅವುಗಳಿಗೆ ಪೊಟರೆಗಳೇ ಸಿಗುತ್ತಿಲ್ಲ. ದೊಡ್ಡ ಮರಗಳು ಇಲ್ಲವಾಗಿವೆ’ ಎಂದರು.

‘ದೊಡ್ಡ ದಾಸ ಮಂಗಟ್ಟೆಗೆ ದೊಡ್ಡ ಪೊಟರೆಯೇ ಬೇಕು. ಹಸಿಮರದಲ್ಲಿ ಗೂಡು ಮಾಡುವ ತಾಕತ್ತಿರುವುದು ಮರಕುಟಿಕಗಳಿಗೆ ಮಾತ್ರ. ಕಾಡಿನ ಪಕ್ಕದ ಊರುಗಳ ಒಣಗಿದ ಮರಗಳು ಇಲ್ಲವಾಗಿವೆ. ಅಲ್ಲಿ ಈ ಹಕ್ಕಿಗಳ ಸಂಖ್ಯೆಯು ಕಡಿಮೆಯಾಗುತ್ತಿದೆ. ಅವು ನಗರದ ಹೊರವಲಯಕ್ಕೆ ಬರುತ್ತಿವೆ’ ಎಂದು ತಿಳಿಸಿದರು.

‘ಮರಕುಟಿಕದ ಕೊಕ್ಕು ತಲೆಯ ಮೂಳೆವರೆಗೂ ಚಾಚಿರುತ್ತದೆ. ಹೀಗಾಗಿ ಗಟ್ಟಿಯಾದ ಮರವನ್ನೂ ಕೊರೆದು ಬಿಡುತ್ತದೆ. ಉಳಿದ ಹಕ್ಕಿಗಳಿಗೆ ಈ ಕೊಕ್ಕಿನ ವಿನ್ಯಾಸವಿಲ್ಲ. ಗಿಳಿ, ಮೈನಾ ಸೇರಿದಂತೆ ಎಲ್ಲ ಹಕ್ಕಿಗಳು ಈ ಪೊಟರೆಗಳೆಂಬ ಬಾಡಿಗೆ ಮನೆಗೆ ಹೋರಾಟ ಮಾಡುತ್ತವೆ’ ಎಂದು ನಗೆಯುಕ್ಕಿಸಿದರು.

‘ಮೈಸೂರು ಹೊರವಲಯದಲ್ಲಿ ರಿಯಲ್‌ ಎಸ್ಟೇಟ್‌ನಿಂದಾಗಿ ತೆಂಗಿನ ತೋಟಗಳನ್ನು ನಗರದವರು ಕೊಳ್ಳುತ್ತಿದ್ದಾರೆ. ಅವು ಪೊಟರೆಯಲ್ಲಿ ಗೂಡು ಕಟ್ಟುವ ಹಕ್ಕಿಗಳ ತಾಣವಾಗುತ್ತಿವೆ. ನಗರ ಬೆಳೆಯುತ್ತಿದ್ದಂತೆ ಅಲ್ಲಿಂದ ಅವುಗಳ ತಾಣ ಮತ್ತೆ ಬೇರೆಯಾಗುತ್ತದೆ’ ಎಂದು ಹೇಳಿದರು.

ಕೃಪಾಕರ ಮಾತನಾಡಿ, ‘ಕೆಲವು ವರ್ಷವಷ್ಟೇ ಸ್ಥಿರ ಛಾಯಾಗ್ರಹಣ ಮಾಡಿದ್ದೆವು. ಆಗೆಲ್ಲ ವಿಜ್ಞಾನದ ಓದು ಹಾಗೂ ವಿಜ್ಞಾನಿಗಳ ಚರ್ಚೆ ಹೆಚ್ಚಿತ್ತು. ನಮ್ಮ ಫೋಟೊಗಳು ವಿಜ್ಞಾನಿಗಳು ತೆಗೆದ ಹಾಗೆ ಇರುತ್ತಿದ್ದವು’ ಎಂದು ನೆನಪು ಮಾಡಿಕೊಂಡರು.

‘ವಿಶ್ವದ ಯಾವ್ಯಾವ ಪರಿಸರ ನಿಯತಕಾಲಿಕೆಗಳಲ್ಲಿ ಹೇಗೆ ಚಿತ್ರಗಳು ಬರುತ್ತಿವೆ ಎಂಬುದನ್ನು ಛಾಯಾಗ್ರಾಹಕರು ನೋಡಬೇಕು. ಈ ಪ್ರದರ್ಶನದ ಚಿತ್ರಗಳು ಸೊಗಸಾಗಿದ್ದು, ಕಥೆಗಳನ್ನು ಹೇಳುತ್ತಿವೆ’ ಎಂದು ಶ್ಲಾಘಿಸಿದರು.

ಉರಗ ಸಂರಕ್ಷಕ ಸ್ನೇಕ್ ಶ್ಯಾಮ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.